ಹೊಸದಿಲ್ಲಿ, ಅ. 9: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ವಿರುದ್ಧ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಅಕ್ಟೋಬರ್ 10ರಂದು ದೆಹಲಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಗೆ ತೆರಳುವ 6 ಪ್ರಮುಖ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಕೈಗೊಳ್ಳಲಾಗಿರುವ ಈ ಕ್ರಮದಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗುವ ಆತಂಕ ಎದುರಾಗಿದೆ.
ಪಾಟ್ನಾ, ವಾರಣಾಸಿ, ರಾಜೇಂದ್ರ ನಗರ ಹಾಗೂ ಇಸ್ಲಾಂಪುರದಿಂದ ನವದೆಹಲಿಗೆ ಸಂಚರಿಸುವ ಪ್ರಮುಖ ರೈಲುಗಳನ್ನು ಅಕ್ಟೋಬರ್ 9ರಂದು ರದ್ದುಗೊಳಿಸಲಾಗಿದೆ ಎಂದು ಪೂರ್ವ ಮಧ್ಯ ರೈಲ್ವೆಯ ದಾನಾಪುರ ವಿಭಾಗದ ಮಾಹಿತಿ ಉಲ್ಲೇಖಿಸಿ ವರದಿಯಾಗಿದೆ.
ರೈಲುಗಳ ರದ್ದತಿಯ ಜತೆಗೆ ದೆಹಲಿಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಿಜೆಪಿ ಕಾರ್ಯಕರ್ತರನ್ನು ವಿವಿಧ ರಾಜ್ಯಗಳಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ವರದಿಗಳೂ ಹೊರಬಿದ್ದಿವೆ.
ಮಧ್ಯಪ್ರದೇಶದ ಇಟಾರ್ಸಿ ಜಂಕ್ಷನ್‌ನಲ್ಲಿ ಗೋವಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 15 ಸಿಜೆಪಿ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.
ಇನ್ನೊಂದೆಡೆ, ರಾಜಸ್ಥಾನದ ಅಲ್ವಾರ್‌ನಲ್ಲಿ ಸಿಜೆಪಿ ನಾಯಕ ದೀಪಕ್ ಬಲಿಯನ್ ಅವರನ್ನು ಪೊಲೀಸರು ಗೃಹಬಂಧನದಲ್ಲಿರಿಸಿ ಅವರ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ ಎಂದು ತಿಳಿದುಬಂದಿದೆ.
ರದ್ದುಗೊಂಡಿರುವುದಾಗಿ ವರದಿಯಾದ 6 ರೈಲುಗಳು
- 12309 – ರಾಜೇಂದ್ರ ನಗರ–ನವದೆಹಲಿ ಪಾಟ್ನಾ ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್
- 12393 – ರಾಜೇಂದ್ರ ನಗರ–ನವದೆಹಲಿ ಎಕ್ಸ್‌ಪ್ರೆಸ್
- 20801 – ಇಸ್ಲಾಂಪುರ–ನವದೆಹಲಿ ಮಗಧ ಎಕ್ಸ್‌ಪ್ರೆಸ್
- 22361 – ರಾಜೇಂದ್ರ ನಗರ–ನವದೆಹಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
- 12559 – ವಾರಣಾಸಿ–ನವದೆಹಲಿ ಶಿವಗಂಗಾ ಎಕ್ಸ್‌ಪ್ರೆಸ್
- 12581 – ವಾರಣಾಸಿ–ನವದೆಹಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ಅಕ್ಟೋಬರ್ 9ರಂದು ಸಂಚರಿಸಬೇಕಿದ್ದ ಈ ರೈಲುಗಳನ್ನು ಸಂಪೂರ್ಣ ರದ್ದುಗೊಳಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದು ಸಾಮಾನ್ಯ ಪ್ರಯಾಣಿಕರಿಗೂ ಸಂಕಷ್ಟ ತಂದೊಡ್ಡಿದೆ. ಉದ್ಯೋಗ, ವ್ಯಾಪಾರ, ವೈದ್ಯಕೀಯ ಚಿಕಿತ್ಸೆ ಹಾಗೂ ಇತರ ಅಗತ್ಯ ಕೆಲಸಗಳಿಗಾಗಿ ದೆಹಲಿಗೆ ತೆರಳಬೇಕಿದ್ದ ಪ್ರಯಾಣಿಕರ ಪ್ರಯಾಣ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಈ ಮಧ್ಯೆ, ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ವ್ಯಾಪಕ ನಿರ್ಬಂಧ ವಿಧಿಸಿರುವ ಕ್ರಮದ ಬಗ್ಗೆ ಶುಕ್ರವಾರ ಸುಪ್ರೀಂ ಕೋರ್ಟ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರಕ್ಕೆ ಅಧಿಕಾರವಿದ್ದರೂ ಎಲ್ಲವನ್ನೂ ಸ್ಥಗಿತಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಕ್ಟೋಬರ್ 10ರ ಪ್ರತಿಭಟನೆಗೆ ಮುನ್ನ ವಿವಿಧ ರಾಜ್ಯಗಳಲ್ಲಿ ಸಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ದೆಹಲಿಗೆ ಸಂಪರ್ಕ ಕಲ್ಪಿಸುವ ರೈಲುಗಳ ರದ್ದತಿ ಗಮನ ಸೆಳೆದಿವೆ.