Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಕನ್ನಡಾಭಿಮಾನದ ಮಹಾಸಾಗರವಾದ ಬೆಳಗಾವಿ!

ಗಡಿನಾಡಲ್ಲಿ ಮೊಳಗಿದ ಕನ್ನಡದ ಜಯಘೋಷ

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಭಾನುವಾರ ನಡೆದ 71ನೇ ಕರ್ನಾಟಕ ರಾಜ್ಯೋತ್ಸವ ಕನ್ನಡಾಭಿಮಾನಿಗಳ ಅಭೂತಪೂರ್ವ ಸಂಭ್ರಮಕ್ಕೆ ಸಾಕ್ಷಿಯಾಯಿತು. ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ಮೇಲಿನ ಪ್ರೀತಿ ಹಾಗೂ ಅಭಿಮಾನವನ್ನು ಪ್ರದರ್ಶಿಸಲು ಲಕ್ಷಾಂತರ ಜನರು ನಗರದ ಐತಿಹಾಸಿಕ ರಾಣಿ ಚನ್ನಮ್ಮ ವೃತ್ತದಲ್ಲಿ ಒಂದಾದರು. ಶನಿವಾರ ಸಂಜೆಯಿಂದ ಆರಂಭವಾದ ರಾಜ್ಯೋತ್ಸವದ ಸಂಭ್ರಮ ಭಾನುವಾರ ದಿನವಿಡೀ ಮುಂದುವರಿಯಿತು. ನಾಲ್ಕು ಲಕ್ಷಕ್ಕೂ ಅಧಿಕ ಜನರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದ್ದು, ಇಡೀ ಬೆಳಗಾವಿ ನಗರವೇ ಕನ್ನಡದ ಹಬ್ಬದಲ್ಲಿ ಮಿಂದೆದ್ದಿತು.

news_1793542730_0_746.webp

 

ಕನ್ನಡದ ಹಳದಿ-ಕೆಂಪು ಬಾವುಟಗಳು, ವಿದ್ಯುತ್ ದೀಪಾಲಂಕಾರ, ಕನ್ನಡದ ಹಾಡುಗಳು, ಜಯಘೋಷಗಳು, ಯುವಜನರ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಾಣಿ ಚನ್ನಮ್ಮ ವೃತ್ತದತ್ತ ಸಾಗುವ ಪ್ರಮುಖ ರಸ್ತೆಗಳಲ್ಲಿ ಜನಸಾಗರವೇ ಹರಿದುಬಂದಿತ್ತು. ಕನ್ನಡಾಭಿಮಾನಿಗಳ ಉತ್ಸಾಹ, ಸಂಭ್ರಮ ಹಾಗೂ ಒಗ್ಗಟ್ಟು ಗಡಿನಾಡಿನಲ್ಲಿ ಕನ್ನಡದ ಅಸ್ತಿತ್ವ ಮತ್ತು ಸಾಂಸ್ಕೃತಿಕ ವೈಭವವನ್ನು ಮತ್ತೊಮ್ಮೆ ಎತ್ತಿಹಿಡಿಯಿತು.

ಶನಿವಾರ ಸಂಜೆಯಿಂದಲೇ ನಗರದ ವಿವಿಧೆಡೆ ರಾಜ್ಯೋತ್ಸವದ ಸಂಭ್ರಮ ಆರಂಭವಾಗಿತ್ತು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಜನರು ರಾಣಿ ಚನ್ನಮ್ಮ ವೃತ್ತದತ್ತ ಆಗಮಿಸಿದ್ದರು. ಕೇಕ್ ಕತ್ತರಿಸಿ, ಸಿಹಿ ಹಂಚಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ದಾರಿಹೋಕರಿಗೂ ಸಿಹಿ ವಿತರಿಸಿ ರಾಜ್ಯೋತ್ಸವದ ಸಂತಸ ಹಂಚಿಕೊಂಡರು. ಕನ್ನಡದ ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ ಯುವಜನರ ಉತ್ಸಾಹ ಮಧ್ಯರಾತ್ರಿಯವರೆಗೂ ಮುಂದುವರಿಯಿತು.

ಭಾನುವಾರ ಬೆಳಗ್ಗೆಯಿಂದಲೇ ಜನರ ಆಗಮನ ಮತ್ತಷ್ಟು ಹೆಚ್ಚಾಯಿತು. ಬೆಳಗಾವಿ ನಗರ ಮಾತ್ರವಲ್ಲದೆ ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಕನ್ನಡಾಭಿಮಾನಿಗಳು ಆಗಮಿಸಿದ್ದರು. ಕೈಯಲ್ಲಿ ಕನ್ನಡ ಬಾವುಟ ಹಿಡಿದು, ಕನ್ನಡದ ಘೋಷಣೆಗಳನ್ನು ಕೂಗುತ್ತ ರಾಣಿ ಚನ್ನಮ್ಮ ವೃತ್ತದತ್ತ ಸಾಗುತ್ತಿದ್ದ ಜನರ ಉತ್ಸಾಹ ಗಮನ ಸೆಳೆಯಿತು.

ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆಗಳ ವರದಿಯ ಪ್ರಕಾರ, ಭಾನುವಾರ ದಿನವಿಡೀ ರಾಣಿ ಚನ್ನಮ್ಮ ವೃತ್ತಕ್ಕೆ ನಾಲ್ಕು ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದರು ಎಂದು ಹೇಳಲಾಗಿದೆ. ಒಂದೇ ದಿನ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಜನರು ಸೇರಿದ್ದರೂ ಯಾವುದೇ ಅಹಿತಕರ ಘಟನೆ ಸಂಭವಿಸದೆ ರಾಜ್ಯೋತ್ಸವ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಕಟ್ಟಡಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಎಲ್ಲೆಡೆ ರಾರಾಜಿಸುತ್ತಿದ್ದ ಹಳದಿ-ಕೆಂಪು ಬಾವುಟಗಳು ಕನ್ನಡದ ಹಬ್ಬಕ್ಕೆ ವಿಶೇಷ ಕಳೆ ನೀಡಿದ್ದವು. ರಾಣಿ ಚನ್ನಮ್ಮ ವೃತ್ತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನ್ನಡದ ಹಾಡುಗಳು ಮೊಳಗುತ್ತಿದ್ದವು. ಸಂಭ್ರಮದಲ್ಲಿ ಭಾಗವಹಿಸಿದ್ದ ಜನರು ಕನ್ನಡ ನಾಡಿನ ಏಕತೆ ಹಾಗೂ ಭಾಷಾಭಿಮಾನವನ್ನು ಪ್ರದರ್ಶಿಸಿದರು.

news_1793542749_0_818.webp

 

ಇದಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಅಧಿಕೃತ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಗೃಹರಕ್ಷಕ ದಳ, ಎನ್‌ಸಿಸಿ, ಭಾರತ ಸೇವಾದಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿದ ಆಕರ್ಷಕ ಪಥಸಂಚಲನ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಕರ್ನಾಟಕ ರಾಜ್ಯೋತ್ಸವ ಕೇವಲ ಸಂಭ್ರಮಾಚರಣೆಯ ದಿನವಲ್ಲ. ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಪರಿಶ್ರಮ ಹಾಗೂ ಕೊಡುಗೆಗಳನ್ನು ಸ್ಮರಿಸುವ ಐತಿಹಾಸಿಕ ದಿನವಾಗಿದೆ ಎಂದು ಹೇಳಿದರು.

ಕನ್ನಡ ಭಾಷಿಕ ಪ್ರದೇಶಗಳನ್ನು ಒಂದೇ ಆಡಳಿತದಡಿ ತರಬೇಕೆಂಬ ಕನಸನ್ನು ನನಸಾಗಿಸಲು ಅನೇಕ ಮಹನೀಯರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ಆಲೂರು ವೆಂಕಟರಾವ್, ಗಂಗಾಧರರಾವ್ ದೇಶಪಾಂಡೆ, ಬೆಟಗೇರಿ ಕೃಷ್ಣಶರ್ಮ, ಶಂಬಾ ಜೋಶಿ ಸೇರಿದಂತೆ ಹಲವಾರು ಮಹನೀಯರ ನಿರಂತರ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ನಂತರ 1973ರಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ವಿವರಿಸಿದರು.

ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಬೆಳವಡಿ ಮಲ್ಲಮ್ಮ ಅವರ ಸ್ವಾತಂತ್ರ್ಯ ಹೋರಾಟದ ಕೊಡುಗೆಯನ್ನು ಸ್ಮರಿಸಿದ ಅವರು, ಬೆಳಗಾವಿ ಜಿಲ್ಲೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಈ ನೆಲದ ಹೋರಾಟಗಾರರ ಆದರ್ಶಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು.

news_1793542762_0_466.webp

 

ಗಡಿಜಿಲ್ಲೆ ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧವಾಗಿದ್ದು, ಮುಖ್ಯಮಂತ್ರಿ ನೇತೃತ್ವದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಮಾಜದ ಎಲ್ಲ ವರ್ಗಗಳ ಜನರಿಗೆ ಸರಕಾರದ ಯೋಜನೆಗಳ ಪ್ರಯೋಜನ ತಲುಪಿಸುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಿತ್ತೂರು ರಾಣಿ ಚನ್ನಮ್ಮ ಅವರ ಐತಿಹಾಸಿಕ ಹೋರಾಟ ಮತ್ತು ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಇದು ಕಿತ್ತೂರು ರಾಣಿ ಚನ್ನಮ್ಮ ಅವರ ಸ್ಮರಣೆಯನ್ನು ಶಾಶ್ವತಗೊಳಿಸುವ ಮಹತ್ವದ ಕ್ರಮವಾಗಿದೆ ಎಂದು ಹೇಳಿದರು.

ಬೆಳಗಾವಿ ನಗರದಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಕ್ಕಾಗಿ 2025-26ನೇ ಸಾಲಿನಲ್ಲಿ 9.90 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪತ್ರಕರ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಕೈಗೊಂಡಿರುವ ಈ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.

ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ 215.37 ಕೋಟಿ ರೂ. ಮಂಜೂರು ಮಾಡಿವೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುವ ಈ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಯೋಜನೆಯಡಿ ಅನ್ನದಾಸೋಹ ಭವನ, ಆಡಳಿತ ಕಚೇರಿ, ಭಕ್ತರಿಗೆ ವಸತಿ ಸೌಲಭ್ಯ, ವಾಹನ ನಿಲುಗಡೆ ಸ್ಥಳ, ಶೌಚಾಲಯ, ಸ್ನಾನಗೃಹ, ಮಾಹಿತಿ ಕೇಂದ್ರ, ಉಪಾಹಾರ ಗೃಹ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈಗಾಗಲೇ 182.18 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಯೋಜನೆ ಪೂರ್ಣಗೊಂಡ ನಂತರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿವರಿಸಿದರು.

ಬೆಳಗಾವಿ ಜಿಲ್ಲೆ ಸಾಮಾಜಿಕ ಸೇವೆಯಲ್ಲಿಯೂ ಗಮನಾರ್ಹ ಸಾಧನೆ ಮಾಡಿದೆ. ಸೆಪ್ಟೆಂಬರ್ 3ರಂದು ಜಿಲ್ಲೆಯಲ್ಲಿ ಆಯೋಜಿಸಿದ್ದ ವಿಶೇಷ ರಕ್ತದಾನ ಶಿಬಿರದಲ್ಲಿ ಒಂದೇ ದಿನ 4,634 ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಈ ಸಾಧನೆಗೆ ಕಾರಣರಾದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹಾಗೂ ಜಿಲ್ಲಾ ರಕ್ತನಿಧಿ ನೋಡಲ್ ಅಧಿಕಾರಿ ಡಾ. ಚಾಂದನಿ ಜಿ. ದೇವಾಡಿ ಅವರನ್ನು ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿ ಸನ್ಮಾನಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಕೃಷಿ ಕ್ಷೇತ್ರದ ಪ್ರಗತಿ ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ ಸಚಿವರು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 7.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಇದಕ್ಕೆ ಪ್ರತಿಯಾಗಿ 7.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ಶೇ.99.70ರಷ್ಟು ಸಾಧನೆಯಾಗಿದೆ ಎಂದು ತಿಳಿಸಿದರು.

ಆದರೆ ಮಳೆಯ ಕೊರತೆಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ಸುಮಾರು 5.04 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ. ಜಿಲ್ಲೆಯ 14 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಒದಗಿಸಲು 680.32 ಕೋಟಿ ರೂ. ನೆರವು ಕೋರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ರೈತರ ಹಿತಾಸಕ್ತಿ ರಕ್ಷಣೆ, ಕೃಷಿ ಉತ್ಪಾದನೆ ಹೆಚ್ಚಳ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ಸೇರಿದಂತೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಸರಕಾರ ಕೈಗೊಂಡಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮತ್ತು ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.

ರಾಜ್ಯ ಸರಕಾರದ ಶಕ್ತಿ ಯೋಜನೆಯಿಂದ ಸಾರ್ವಜನಿಕ ಸಾರಿಗೆ ಬಳಕೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಯೋಜನೆ ಜಾರಿಗೆ ಮೊದಲು ಬೆಳಗಾವಿ, ಚಿಕ್ಕೋಡಿ ಮತ್ತು ಧಾರವಾಡ ಸಾರಿಗೆ ವಿಭಾಗಗಳಲ್ಲಿ ದಿನನಿತ್ಯ ಸರಾಸರಿ 5.40 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಇದೀಗ ಈ ಸಂಖ್ಯೆ 8.06 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

news_1793542784_0_376.webp

 

2023ರ ಜೂನ್ 11ರಿಂದ 2026ರ ಸೆಪ್ಟೆಂಬರ್ 30ರವರೆಗೆ ಈ ವಿಭಾಗಗಳಲ್ಲಿ ಒಟ್ಟು 97.30 ಕೋಟಿ ಪ್ರಯಾಣಗಳು ದಾಖಲಾಗಿವೆ. ಅವುಗಳಲ್ಲಿ ಮಹಿಳೆಯರ ಪ್ರಯಾಣಗಳ ಸಂಖ್ಯೆ 65.35 ಕೋಟಿಯಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಮೂಲಕ ಅವರ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ 11.48 ಲಕ್ಷ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 10.34 ಲಕ್ಷ ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಅರ್ಹ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವ ಉದ್ದೇಶ ಹೊಂದಿವೆ ಎಂದು ತಿಳಿಸಿದರು.
ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೂ ಸರಕಾರ ವಿಶೇಷ ಆದ್ಯತೆ ನೀಡಿದೆ. ಗೋಕಾಕದಲ್ಲಿ 100 ಹಾಸಿಗೆಗಳ ನೂತನ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ 40 ಕೋಟಿ ರೂ. ಮಂಜೂರು ಮಾಡಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 245 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಮದುರ್ಗ, ಸವದತ್ತಿ ಹಾಗೂ ಕಿತ್ತೂರಿನಲ್ಲಿ ಆಸ್ಪತ್ರೆಗಳ ನಿರ್ಮಾಣ, ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಹಾಗೂ ಬೈಲಹೊಂಗಲದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ನಿರ್ಮಾಣ ಈ ಯೋಜನೆಗಳಲ್ಲಿ ಸೇರಿವೆ. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಸ್ಥಳೀಯವಾಗಿಯೇ ಒದಗಿಸುವುದು ಸರಕಾರದ ಉದ್ದೇಶವಾಗಿದೆ ಎಂದು ವಿವರಿಸಿದರು.

ಗ್ರಾಮೀಣ ಕುಡಿಯುವ ನೀರು ಪೂರೈಕೆ, ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಗತಿಯನ್ನೂ ಸಚಿವರು ವಿವರಿಸಿದರು.

news_1793542885_0_746.webp

 

ಕನ್ನಡ ಭಾಷೆ, ಸಂಸ್ಕೃತಿ, ನೆಲ ಮತ್ತು ಜಲದ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಕನ್ನಡದ ಪರಂಪರೆಯನ್ನು ಉಳಿಸಿಕೊಂಡು ಆಧುನಿಕ ಅಭಿವೃದ್ಧಿಯತ್ತ ಸಾಗಬೇಕಿದೆ. ಸಮೃದ್ಧ, ಸೌಹಾರ್ದಯುತ ಹಾಗೂ ಪ್ರಗತಿಪರ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.

ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತವು ಸಾಹಿತ್ಯ, ಕಲೆ, ಜಾನಪದ, ಶಿಕ್ಷಣ, ವಿಜ್ಞಾನ, ಕೃಷಿ, ವೈದ್ಯಕೀಯ, ಕ್ರೀಡೆ, ಸಾಹಸ, ಸಮಾಜಸೇವೆ ಹಾಗೂ ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸಿತು.

ಮಾಧ್ಯಮ ಕ್ಷೇತ್ರದಲ್ಲಿ ಲೋಕದರ್ಶನ ಸಂಪಾದಕ ಶರತಚಂದ್ರ ದೇಸಾಯಿ, ಕನ್ನಡಮ್ಮ ಸಂಪಾದಕ ರಾಜಕುಮಾರ ಟೋಪಣ್ಣವರ, ದಿ ಹಿಂದೂ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಹೃಷಿಕೇಶ ಬಹದ್ದೂರ ದೇಸಾಯಿ, ಕನ್ನಡಪ್ರಭ ನಿವಾಸಿ ಸಂಪಾದಕ ಬ್ರಹ್ಮಾನಂದ ಹಡಗಲಿ, ಪ್ರಜಾವಾಣಿಯ ಜಿಲ್ಲಾ ವರದಿಗಾರ ಇಮಾಮ್ ಹುಸೇನ್ ಗುಡುನವರ, ಲೋಕದರ್ಶನ ಛಾಯಾಗ್ರಾಹಕ ವಿಶ್ವನಾಥ ದೇಸಾಯಿ, ಆರ್ ಕನ್ನಡ ಜಿಲ್ಲಾ ವರದಿಗಾರ ಮೈಲಾರಿ ಪಟಾತ್, ನ್ಯೂಸ್18 ಚಿಕ್ಕೋಡಿ ವರದಿಗಾರ ಲೋಹಿತ್ ಶಿರೋಳಿ, ಸುವರ್ಣ ನ್ಯೂಸ್ ಕ್ಯಾಮೆರಾಮನ್ ಆದಿವಪ್ಪ ಪಾಟೀಲ, ಟಿವಿ9 ಕ್ಯಾಮೆರಾಮನ್ ಸದಾಶಿವ ಜಾಧವ, ವಿಜಯವಾಣಿ ಅಥಣಿ ವರದಿಗಾರ ರಾಜು ಗಾಳಿ ಹಾಗೂ ಪತ್ರಿಕಾ ವಿತರಕ ಭೀಮಪ್ಪ ಕೋಟೆಕರ ಅವರನ್ನು ಸನ್ಮಾನಿಸಲಾಯಿತು.

ಸಾಹಿತ್ಯ ಕ್ಷೇತ್ರದಲ್ಲಿ ಮಹಾರಾಜ ಸಿದ್ದು ಹಳ್ಳೂರ, ಆನಂದ ಪುರಾಣಿಕ, ಬಸವರಾಜ ಕುಪ್ಪಸಗೌಡರ, ಎ.ಎ. ಸನದಿ, ಮೈತ್ರೇಯಿಣಿ ಗಾಡಿಗೆಗೌಡರ ಹಾಗೂ ಅಪ್ಪಾಸಾಹೇಬ ಅಲಿಬಾದಿ ಅವರನ್ನು ಗೌರವಿಸಲಾಯಿತು.
ಜಾನಪದ ಕ್ಷೇತ್ರದಲ್ಲಿ ಇಸ್ಮಾಯಿಲ್ ಪೀರಜಾದೆ ಹಾಗೂ ಪಂಚಾಕ್ಷರಿ ಗಡ್ಡಿ ಅವರನ್ನು ಸನ್ಮಾನಿಸಲಾಯಿತು. ಸಮಾಜಸೇವೆ ಕ್ಷೇತ್ರದಲ್ಲಿ ವೀರೇಶ ಬಸಯ್ಯ ಹಿರೇಮಠ, ಪದ್ಮಪ್ರಸಾದ ಹುಳಿ, ಸುಧೀರ ಸಂಭಾಜಿ, ಸವಿತಾ ಹೆಬ್ಬಾರ, ದುರ್ಗೇಶ ಮೇತ್ರಿ, ಆರ್.ಬಿ. ಬನಶಂಕರಿ ಹಾಗೂ ಸುರೇಶ ಖಿರಾಯಿ ಅವರಿಗೆ ಗೌರವ ಸಲ್ಲಿಸಲಾಯಿತು.

ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಡಾ. ಎಚ್.ಐ. ತಿಮ್ಮಾಪುರ, ಕೃಷಿ ಕ್ಷೇತ್ರದಲ್ಲಿ ಬಾಲಪ್ಪ ಬೆಳಕುಡ, ವಿಜ್ಞಾನ ಕ್ಷೇತ್ರದಲ್ಲಿ ಮಂಜುನಾಥ ಚೌರಡ್ಡಿ, ವೈದ್ಯಕೀಯ ಕ್ಷೇತ್ರದಲ್ಲಿ ನಂದೇಶ್ವರ ಪಾಟೀಲ, ಡಾ. ಶಿವಶಂಕರಪ್ರಸಾದ ದೇವಲಾಪುರ ಹಾಗೂ ಡಾ. ಬಸವರಾಜ ಮೊಟಿಮಠ, ಕಲಾ ಕ್ಷೇತ್ರದಲ್ಲಿ ಆನಂದ ಮುರಕಿಬಾವಿ, ಶಿಕ್ಷಣ ಕ್ಷೇತ್ರದಲ್ಲಿ ಈರಣ್ಣ ಕಡಕೋಳ, ಕ್ರೀಡಾ ಕ್ಷೇತ್ರದಲ್ಲಿ ಉಮೇಶ ಕಳಘಟಗಿ ಹಾಗೂ ಸಾಹಸ ಕ್ಷೇತ್ರದಲ್ಲಿ ನೇಸರಗಿಯ ಹೊಳೆಪ್ಪ ಬಸವಣ್ಣೆ ಅವರನ್ನು ಗೌರವಿಸಲಾಯಿತು.

news_1793542912_0_954.webp

 

ಇದೇ ಸಂದರ್ಭದಲ್ಲಿ ಎಚ್‌ಐವಿ ನಿಯಂತ್ರಣ ಕಾರ್ಯಕ್ರಮದಲ್ಲಿ ಶೇ.95ರಷ್ಟು ಗುರಿ ಸಾಧಿಸಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತಕ್ಕೆ ವಿಶೇಷ ಗೌರವ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ.ಕೆ. ಗಡದ ಹಾಗೂ ಜಿಲ್ಲಾ ಎಚ್‌ಐವಿ/ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಾಂದನಿ ದೇವಾಡಿ ಅವರನ್ನು ಸಚಿವರು ಮತ್ತು ಗಣ್ಯರು ಸನ್ಮಾನಿಸಿದರು.

ಸಮಾರಂಭದಲ್ಲಿ ಶಾಸಕ ಆಸಿಫ್ ಸೇಠ್, ಮೇಯರ್ ಪ್ರೀತಿ ಕಾಮಕರ, ಉಪಮೇಯರ್ ಹನುಮಂತ ಕೊಂಗಾಲಿ, ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಸಂದೀಪ ಪಾಟೀಲ, ಪೊಲೀಸ್ ಆಯುಕ್ತ ನಿಕ್ಕಂ ಪ್ರಕಾಶ ಅಮೃತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಗಣ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಗಡಿವಿವಾದದ ಹಿನ್ನೆಲೆಯಲ್ಲಿ ಸದಾ ವಿಶೇಷ ಗಮನ ಸೆಳೆಯುವ ಬೆಳಗಾವಿಯಲ್ಲಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವವು ಕನ್ನಡಿಗರ ಒಗ್ಗಟ್ಟು, ಭಾಷಾಭಿಮಾನ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಬೃಹತ್ ಪ್ರದರ್ಶನವಾಗಿ ಹೊರಹೊಮ್ಮಿತು. ರಾಣಿ ಚನ್ನಮ್ಮ ವೃತ್ತದಲ್ಲಿ ದಿನವಿಡೀ ಮೊಳಗಿದ ಕನ್ನಡದ ಜಯಘೋಷ, ಹಳದಿ-ಕೆಂಪು ಬಾವುಟಗಳ ವೈಭವ ಹಾಗೂ ಲಕ್ಷಾಂತರ ಜನರ ಸಂಭ್ರಮ ಗಡಿನಾಡಿನ ರಾಜ್ಯೋತ್ಸವಕ್ಕೆ ವಿಶೇಷ ಮೆರುಗು ನೀಡಿತು.

news_1793542959_0_424.webp

 

news_1793542960_1_135.webp

 

news_1793542960_2_731.webp

 

news_1793542960_3_688.webp

 

 

 

Author
Samadarshi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST