ರಾಯಚೂರು, ನ. 20: ರಾಜ್ಯದ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಉಚಿತ ನೋಟ್‌ಬುಕ್ ವಿತರಿಸಲು ಸರಕಾರ ನಿರ್ಧರಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ಬಸವೇಶ್ವರ ಸಭಾಂಗಣದಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶ ಸುಧಾರಣೆಗಾಗಿ ಆಯೋಜಿಸಿದ್ದ ‘ಮಿಷನ್ 40+ ಸಂಕಲ್ಪ 2.0’ ಕಾರ್ಯಾಗಾರ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಂದಿನ ಜೂನ್‌ನಿಂದ ಸರಕಾರಿ ಶಾಲೆಗಳಲ್ಲಿ ಕನ್ನಡದ ಜತೆಗೆ ಆಂಗ್ಲ ಮಾಧ್ಯಮವನ್ನೂ ಪರಿಚಯಿಸಲಾಗುವುದು. ಆಂಗ್ಲ ಮಾಧ್ಯಮ ಕಡ್ಡಾಯವಲ್ಲ. ಮಕ್ಕಳ ಶಿಕ್ಷಣದ ಮಾಧ್ಯಮವನ್ನು ಪೋಷಕರೇ ಆಯ್ಕೆ ಮಾಡಬಹುದು. ಆದರೆ ಕನ್ನಡ ಭಾಷೆ ಕಡ್ಡಾಯವಾಗಿರುತ್ತದೆ. ಈಗಾಗಲೇ 18ರಿಂದ 19 ಜಿಲ್ಲೆಗಳಲ್ಲಿ ದ್ವಿಭಾಷಾ ವ್ಯವಸ್ಥೆ ಜಾರಿಯಲ್ಲಿದೆ ಎಂದು ತಿಳಿಸಿದರು.
1,300ಕ್ಕೂ ಹೆಚ್ಚು ಹೊಸ ಶಾಲೆಗಳು
ರಾಜ್ಯದಲ್ಲಿ 1,300ಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಿಂದ 500, ಕಲ್ಯಾಣ ಕರ್ನಾಟಕದ ಅಕ್ಷರ ಆವಿಷ್ಕಾರ ನಿಧಿಯಿಂದ 200, ಅಲ್ಪಸಂಖ್ಯಾತರ ಇಲಾಖೆಯಿಂದ 200 ಹಾಗೂ ಗಣಿಗಾರಿಕೆ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಶಾಲೆಗಳನ್ನು ಸ್ಥಾಪಿಸಲಾಗುವುದು.
ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವುದು ಉದ್ದೇಶವಾಗಿದೆ. ಜೂನ್ 1ರಿಂದ ಕರ್ನಾಟಕ ಪಬ್ಲಿಕ್ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗುವುದು. ಇದಕ್ಕಾಗಿ 5ರಿಂದ 7 ಕಿ.ಮೀ. ವ್ಯಾಪ್ತಿಯ ಮಾರ್ಗಗಳನ್ನು ಗುರುತಿಸಲಾಗುತ್ತಿದೆ ಎಂದರು.
36 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿ
ರಾಜ್ಯದಲ್ಲಿ 17 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರ ಪರೀಕ್ಷಾ ದಿನಾಂಕ ಪ್ರಕಟಿಸಲಾಗುವುದು. ಅನುದಾನಿತ ಶಾಲೆಗಳಿಗೆ 5,500ರಿಂದ 6 ಸಾವಿರ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಪಿಯುಸಿ ಸೇರಿದಂತೆ ಒಟ್ಟು 36 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ಬಾರಿ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಶೇ.0.2ರಷ್ಟು ಉತ್ತಮ ಫಲಿತಾಂಶ ದಾಖಲಿಸಿವೆ. ಈ ಬಾರಿ ‘60 ಪ್ಲಸ್ ಮಿಷನ್’ ಮೂಲಕ ವಿದ್ಯಾರ್ಥಿಗಳು ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸುವಂತೆ ಹಾಗೂ ಶಾಲೆಗಳು ಶೇ.100ರಷ್ಟು ಫಲಿತಾಂಶ ಸಾಧಿಸುವಂತೆ ಗುರಿ ಹೊಂದಲಾಗಿದೆ ಎಂದರು.
ರಾಜ್ಯದಲ್ಲಿ ಯಾವುದೇ ಸರಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಸ್ತಾವವಿಲ್ಲ. ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆ ಮುಂದುವರಿಯಲಿದ್ದು, ಶಿಕ್ಷಕರು ಮತ್ತು ಬಿಸಿಯೂಟದ ವ್ಯವಸ್ಥೆ ಇರಲಿದೆ. ಶಾಲೆಗಳನ್ನು ಮುಚ್ಚಲಾಗುತ್ತದೆ ಎಂಬ ವದಂತಿಗಳನ್ನು ಪೋಷಕರು ನಂಬಬಾರದು ಎಂದು ಸಚಿವರು ಮನವಿ ಮಾಡಿದರು.