ಖಾನಾಪುರ, ಸೆ 11 : (ಸಮದರ್ಶಿ ಸುದ್ದಿ) - ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 400 ಲೀಟರ್ ಗೋವಾ ಮದ್ಯವನ್ನು ಅಬಕಾರಿ ತನಿಖಾ ಠಾಣೆಯ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಮದ್ಯ ಸಾಗಣೆಗೆ ಬಳಸಲಾಗುತ್ತಿದ್ದ ವಾಹನವನ್ನೂ ಜಪ್ತಿ ಮಾಡಲಾಗಿದೆ.
ಯರಗಟ್ಟಿ ತಾಲ್ಲೂಕಿನ ಮಾಡಮಗೇರಿ ಗ್ರಾಮದ ಸಿದ್ದಪ್ಪ ಮಾರುತಿ ಬೆಳ್ಳಿಕುಂಪಿ ಹಾಗೂ ಸವದತ್ತಿ ತಾಲ್ಲೂಕಿನ ಕಡಬಿ ಗ್ರಾಮದ ಮಂಜುನಾಥ ಹನಮಂತಪ್ಪ ದೇಸಾಯಿ ಬಂಧಿತರು. ಇವರ ವಿರುದ್ಧ ಖಾನಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ಕಣಕುಂಬಿ ಭಾಗದಲ್ಲಿ ನಿಗಾ ವಹಿಸಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ಬಂದ ವಾಹನವನ್ನು ತಡೆದು ಪರಿಶೀಲಿಸಿದಾಗ ಸುಮಾರು 400 ಲೀಟರ್ ಗೋವಾ ಮದ್ಯ ಪತ್ತೆಯಾಗಿದೆ. ಕೂಡಲೇ ಮದ್ಯ ಹಾಗೂ ಸಾಗಣೆಗೆ ಬಳಸಿದ್ದ ವಾಹನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜಪ್ತಿ ಮಾಡಲಾದ ಮದ್ಯ ಹಾಗೂ ವಾಹನದ ಒಟ್ಟು ಅಂದಾಜು ಮೌಲ್ಯ ₹10.4 ಲಕ್ಷ ಎಂದು ಅಬಕಾರಿ ಇಲಾಖೆ ತಿಳಿಸಿದೆ. ಬಂಧಿತರಿಂದ ಮದ್ಯವನ್ನು ಎಲ್ಲಿಂದ ತರಲಾಗಿತ್ತು ಮತ್ತು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಖಾನಾಪುರದ ಅಬಕಾರಿ ನಿರೀಕ್ಷಕ ಮಲ್ಲೇಶಿ ಉಪ್ಪಾರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ನೂರುಲ್ಲಾ ಖಾನ್, ಬಾಳಗೌಡ ಪಾಟೀಲ ಹಾಗೂ ಸಿಬ್ಬಂದಿ ಗುಂಡು ಪೂಜೇರಿ, ಬಸವರಾಜ ವಿವೇಕಿ, ಪ್ರಕಾಶ ನಂದಿಯವರ ಮತ್ತು ಗೃಹರಕ್ಷಕ ಸಿಬ್ಬಂದಿ ಪಾಲ್ಗೊಂಡಿದ್ದರು.