ಹೊಸದಿಲ್ಲಿ, ನ. 28: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಅದರ ಜಾರಿಗೆ ಎದುರಾಗುವ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸಂಸತ್ತಿನ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ಶನಿವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ಅವರು, ದೇಶದ ಮಹಿಳೆಯರಿಗೆ ನೀಡಿರುವ ಭರವಸೆಯನ್ನು ಈಡೇರಿಸುವ ಸಂಕಲ್ಪದಿಂದ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಹೋರಾಟ ದಶಕಗಳಿಂದ ನಡೆಯುತ್ತಿದೆ. ಈ ಹೋರಾಟದಲ್ಲಿ ನಾನೂ ಭಾಗಿಯಾಗಿದ್ದೇನೆ. ಅನೇಕ ಮಹಿಳೆಯರು ಈ ಕುರಿತು ನನ್ನೊಂದಿಗೆ ಚರ್ಚಿಸಿದ್ದು, ಪತ್ರಗಳ ಮೂಲಕವೂ ತಮ್ಮ ಆಶಯಗಳನ್ನು ವ್ಯಕ್ತಪಡಿಸಿದ್ದಾರೆ. ಮಹಿಳಾ ಮೀಸಲಾತಿ ಜಾರಿಗೊಳಿಸುವ ನಮ್ಮ ಸಂಕಲ್ಪ ಅಚಲವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಮತ್ತೊಮ್ಮೆ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಪ್ರಧಾನಿಯವರ ಈ ಹೇಳಿಕೆ ಹೊರಬಿದ್ದಿದೆ.
2023ರಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಕಾನೂನಿನ ಜಾರಿಯನ್ನು ಕ್ಷೇತ್ರ ಪುನರ್ವಿಂಗಡಣೆಗೆ ಜೋಡಿಸಲಾಗಿದೆ. 2029ರ ಲೋಕಸಭೆ ಚುನಾವಣೆ ವೇಳೆಗೆ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲಿಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.
ಸೋಮವಾರ ಮಸೂದೆ ಮಂಡನೆ
ಸೋಮವಾರ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸಂವಿಧಾನದ 132ನೇ ತಿದ್ದುಪಡಿ ಮಸೂದೆ-2026ನ್ನು ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಲೋಕಸಭಾ ಸ್ಥಾನಗಳ ಸಂಖ್ಯೆ ಹಾಗೂ ವಿಧಾನಸಭೆಗಳ ಸದಸ್ಯಬಲವನ್ನು ಶೇ. 50ರಷ್ಟು ಹೆಚ್ಚಿಸಿ, ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡುವ ಪ್ರಸ್ತಾವನೆ ಮಸೂದೆಯಲ್ಲಿದೆ.
ಲೋಕಸಭೆಯ ಗರಿಷ್ಠ ಸದಸ್ಯಬಲವನ್ನು 850ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ರಾಜ್ಯಗಳಿಗೆ ಗರಿಷ್ಠ 815 ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 35 ಸ್ಥಾನಗಳನ್ನು ನಿಗದಿಪಡಿಸುವ ಪ್ರಸ್ತಾವನೆಯಿದೆ. ರಾಜ್ಯ ವಿಧಾನಸಭೆಗಳ ಗರಿಷ್ಠ ಸದಸ್ಯಬಲದ ಮಿತಿಯನ್ನು 500ರಿಂದ 650ಕ್ಕೆ ಏರಿಸಲೂ ಉದ್ದೇಶಿಸಲಾಗಿದೆ.
ಪುನರ್ವಿಂಗಡಣೆಯ ಬಳಿಕ ನಿಗದಿಯಾಗುವ ಸ್ಥಾನಗಳ ಹಂಚಿಕೆ ಮತ್ತು ಕ್ಷೇತ್ರಗಳ ಗಡಿಗಳನ್ನು 2051ರವರೆಗೆ ಯಥಾಸ್ಥಿತಿಯಲ್ಲಿ ಮುಂದುವರಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.