ಹೊಸದಿಲ್ಲಿ, ನ. 28: ಬಿಜೆಪಿಗೆ ದೇಶದ ಹಿತಾಸಕ್ತಿಗಿಂತ ಚುನಾವಣಾ ಲಾಭವೇ ಮುಖ್ಯ. ದೇಶದ ಗಡಿಗಳಿಗಿಂತ ಲೋಕಸಭಾ ಕ್ಷೇತ್ರಗಳ ಗಡಿಗಳ ಬಗ್ಗೆಯೇ ಅದಕ್ಕೆ ಹೆಚ್ಚಿನ ಕಾಳಜಿ ಇದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅವರು ಈ ಟೀಕೆ ಮಾಡಿದ್ದಾರೆ.
ಶುಕ್ರವಾರವೂ ಮಸೂದೆಯನ್ನು ವಿರೋಧಿಸಿದ್ದ ಅಖಿಲೇಶ, ಇದು ಬಿಜೆಪಿಯ ಅತಿದೊಡ್ಡ ತಪ್ಪಾಗಲಿದೆ ಎಂದು ಹೇಳಿದ್ದರು. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಿ, ಜನಸಂಖ್ಯೆಗೆ ಅನುಗುಣವಾಗಿ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.
ಮಸೂದೆಗೆ ಯೋಗಿ ಬೆಂಬಲ
ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ನೀಡಿರುವ ಅನುಮೋದನೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸ್ವಾಗತಿಸಿದ್ದಾರೆ.
2029ರ ವೇಳೆಗೆ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಉತ್ತರ ಪ್ರದೇಶದ ಎಲ್ಲ 80 ಲೋಕಸಭಾ ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಲೋಕಸಭೆಯ ಗರಿಷ್ಠ ಸದಸ್ಯಬಲ 850ಕ್ಕೆ ಏರಿಕೆ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸದಸ್ಯಬಲವನ್ನು ಶೇ. 50ರಷ್ಟು ಹೆಚ್ಚಿಸುವುದು, 2029ರ ಚುನಾವಣೆಗೂ ಮುನ್ನ ಕ್ಷೇತ್ರ ಪುನರ್‌ವಿಂಗಡಣೆ ನಡೆಸುವುದು ಹಾಗೂ ಮಹಿಳಾ ಮೀಸಲಾತಿ ಜಾರಿಗೊಳಿಸುವುದು ಕೇಂದ್ರದ ಉದ್ದೇಶವಾಗಿದೆ.
ಲೋಕಸಭೆಯ ಗರಿಷ್ಠ ಸದಸ್ಯಬಲವನ್ನು 550ರಿಂದ 850ಕ್ಕೆ ಹಾಗೂ ವಿಧಾನಸಭೆಗಳ ಗರಿಷ್ಠ ಸದಸ್ಯಬಲದ ಮಿತಿಯನ್ನು 650ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ರಾಜ್ಯಗಳ ನಡುವಿನ ಸ್ಥಾನ ಹಂಚಿಕೆಯನ್ನು 2051ರವರೆಗೆ ಯಥಾಸ್ಥಿತಿಯಲ್ಲಿ ಉಳಿಸಲು ಉದ್ದೇಶಿಸಲಾಗಿದೆ.
ಕ್ಷೇತ್ರ ಪುನರ್‌ವಿಂಗಡಣೆಗೆ 2011ರ ಜನಗಣತಿ ಹಾಗೂ ರಾಜ್ಯಗಳ ನಡುವಿನ ಲೋಕಸಭಾ ಸ್ಥಾನಗಳ ಹಂಚಿಕೆಯ ಅನುಪಾತ ನಿರ್ಧರಿಸಲು 1971ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಳ್ಳಲು ಪ್ರಸ್ತಾಪಿಸಲಾಗಿದೆ. ಇದಕ್ಕಾಗಿ ಎರಡು ಸಂವಿಧಾನ ತಿದ್ದುಪಡಿ ಮಸೂದೆಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳ ತಿದ್ದುಪಡಿ ಮಸೂದೆ ಮಂಡಿಸಲು ಕೇಂದ್ರ ಸಿದ್ಧತೆ ನಡೆಸಿದೆ.