ಹೊಸದಿಲ್ಲಿ, ನ. 28: ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ, ವಿಚಾರಣೆಯಿಲ್ಲದೆ ವರ್ಷಗಟ್ಟಲೆ ಆರೋಪಿಗಳನ್ನು ಜೈಲಿನಲ್ಲಿಡುತ್ತಿರುವುದು ಹಾಗೂ ನಾಗರಿಕ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳ ಕುರಿತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ‘ಹ್ಯೂಮನ್ ರೈಟ್ಸ್ ವಾಚ್’ ಗಂಭೀರ ಆತಂಕ ವ್ಯಕ್ತಪಡಿಸಿದೆ.
ಕಾನೂನು ತಿದ್ದುಪಡಿಗಳು, ರಾಜಕೀಯ ಪ್ರೇರಿತ ನೇಮಕಾತಿಗಳು ಹಾಗೂ ನಾಗರಿಕ ಸಮಾಜದೊಂದಿಗೆ ಸಮರ್ಪಕ ಸಹಕಾರದ ಕೊರತೆಯಿಂದ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯಕ್ಷಮತೆ ದುರ್ಬಲಗೊಂಡಿದೆ ಎಂದು ಸಂಸ್ಥೆಯ ಏಷ್ಯಾ ವಿಭಾಗದ ನಿರ್ದೇಶಕಿ ಎಲೈನ್ ಪಿಯರ್ಸನ್ ಹೇಳಿದ್ದಾರೆ.
‘ದಿ ವೈರ್’ ಸುದ್ದಿಜಾಲತಾಣದ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟವು ಭಾರತದ ಮಾನವ ಹಕ್ಕುಗಳ ಆಯೋಗದ ‘ಎ’ ಶ್ರೇಣಿಯನ್ನು ‘ಬಿ’ ಶ್ರೇಣಿಗೆ ಇಳಿಸಲು ಶಿಫಾರಸು ಮಾಡಿರುವುದು ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಎದುರಾಗಿರುವ ಗಂಭೀರ ಎಚ್ಚರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಆಯುಕ್ತರ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ, ನಾಗರಿಕ ಸಂಘಟನೆಗಳೊಂದಿಗೆ ಸಹಕಾರದ ಕೊರತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳಿದ್ದಾರೆ.
ವಿಚಾರಣೆಯಿಲ್ಲದೆ ವರ್ಷಗಟ್ಟಲೆ ಜೈಲು
ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ದೀರ್ಘಕಾಲದಿಂದ ಜಾಮೀನು ನಿರಾಕರಿಸಿರುವುದನ್ನು ಪ್ರಸ್ತಾಪಿಸಿದ ಪಿಯರ್ಸನ್, ಪ್ರಕರಣಗಳ ವಿಚಾರಣೆಯೇ ಆರಂಭವಾಗದೆ ವರ್ಷಗಟ್ಟಲೆ ಜೈಲಿನಲ್ಲಿಡುವುದು ನ್ಯಾಯಯುತ ವಿಚಾರಣೆಯ ಸಂವಿಧಾನಬದ್ಧ ಹಕ್ಕಿನ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಭಿವ್ಯಕ್ತಿ ಮತ್ತು ಸಂಘಟನಾ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಕೋರ್ಟುಗಳ ಕಾರ್ಯವೈಖರಿಯ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹೆಸರಿನಲ್ಲಿ ನಾಗರಿಕ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳಿಗೆ ಕೋರ್ಟುಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ಆರೋಪಿಸಿದ್ದಾರೆ.
ನ್ಯಾಯಮೂರ್ತಿಗಳ ನೇಮಕಾತಿ, ವರ್ಗಾವಣೆ ಮತ್ತು ಬಡ್ತಿಗಳಲ್ಲಿ ಕಾರ್ಯಾಂಗದ ರಾಜಕೀಯ ಹಸ್ತಕ್ಷೇಪ ಹೆಚ್ಚುತ್ತಿರುವ ಕುರಿತು ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳು, ವಕೀಲರು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ತಮ್ಮ ಸಂಸ್ಥೆಯೊಂದಿಗೆ ಆತಂಕ ಹಂಚಿಕೊಂಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಇದೇ ವೇಳೆ, ಸಂದರ್ಶನದಲ್ಲಿ ಪ್ರಸ್ತಾಪಿಸಲಾದ ಕೆಲವು ಆರೋಪಗಳಿಗೆ ಸಂಬಂಧಿಸಿದಂತೆ ವರದಿ ಪ್ರಕಟಿಸುವ ಮುನ್ನ ಭಾರತ ಸರ್ಕಾರದ ಪ್ರತಿಕ್ರಿಯೆ ಕೋರಿ ಅಧಿಕೃತ ಪತ್ರ ಬರೆದಿಲ್ಲ ಎಂಬುದನ್ನು ಪಿಯರ್ಸನ್ ಒಪ್ಪಿಕೊಂಡಿದ್ದಾರೆ. ಭಾರತ ಸರ್ಕಾರದೊಂದಿಗೆ ಮುಕ್ತ ಚರ್ಚೆ ನಡೆಸಲು ತಮ್ಮ ಸಂಸ್ಥೆ ಸದಾ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.