ಬೆಂಗಳೂರು, ಅ. 16 (ಸಮದರ್ಶಿ ಸುದ್ದಿ): ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ ಶುಕ್ರವಾರ ಬೆಂಗಳೂರಿನ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದರು. ಕರ್ನಾಟಕ ಹೈಕೋರ್ಟ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಪ್ರಮಾಣವಚನ ಬೋಧಿಸಿದರು.
ನಿರ್ಗಮಿತ ರಾಜ್ಯಪಾಲ ಥಾವರಚಂದ್ ಗೆಹ್ಲೋಟ ಅವರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುಧಾ ಯಾದವ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜ್ಯಪಾಲರನ್ನಾಗಿ ನೇಮಿಸಿದ್ದರು. ಇದರೊಂದಿಗೆ ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ವಿ.ಎಸ್. ರಮಾದೇವಿ 1999ರಿಂದ 2002ರವರೆಗೆ ರಾಜ್ಯಪಾಲರಾಗಿದ್ದರು.
ಸುಧಾ ಯಾದವ ಅವರ ಪತಿ ಸುಖಬೀರ ಸಿಂಗ್ ಯಾದವ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಡೆಪ್ಯುಟಿ ಕಮಾಂಡೆಂಟ್ ಆಗಿದ್ದರು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಿ ಪಡೆಗಳ ಫಿರಂಗಿ ದಾಳಿಯಲ್ಲಿ ಹುತಾತ್ಮರಾಗಿದ್ದರು. ಮರಣೋತ್ತರವಾಗಿ ಅವರಿಗೆ ಸೇನಾ ಪದಕ ನೀಡಿ ಗೌರವಿಸಲಾಗಿತ್ತು. ಪತಿಯ ನಿಧನದ ಬಳಿಕ ಸುಧಾ ಯಾದವ ರಾಜಕೀಯ ಪ್ರವೇಶಿಸಿದರು.
1999ರಲ್ಲಿ ಹರಿಯಾಣದ ಮಹೇಂದ್ರಗಢ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಅವರು, 2004ರವರೆಗೆ ಸಂಸತ್ ಸದಸ್ಯೆಯಾಗಿದ್ದರು. ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿರುವ ಅವರು, ರೂರ್ಕಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯೊಂದಿಗೆ ಚಿನ್ನದ ಪದಕ ಗಳಿಸಿದ್ದರು.
ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಸುಧಾ ಯಾದವ್, ಪಕ್ಷದ ಒಬಿಸಿ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ. 2022ರಲ್ಲಿ ಬಿಜೆಪಿಯ ಸಂಸದೀಯ ಮಂಡಳಿಗೆ ನೇಮಕಗೊಂಡ ಅವರು, ಸುಷ್ಮಾ ಸ್ವರಾಜ್ ಬಳಿಕ ಈ ಮಂಡಳಿಯಲ್ಲಿ ಸ್ಥಾನ ಪಡೆದ ಎರಡನೇ ಮಹಿಳೆಯಾಗಿದ್ದರು.
ಲೋಕಭವನದ ಗ್ಲಾಸ್ ಹೌಸ್ನಲ್ಲಿ ನಡೆದ ಸಮಾರಂಭದಲ್ಲಿ ನಿರ್ಗಮಿತ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಸಚಿವರಾದ ಶರಣ ಪ್ರಕಾಶ ಪಾಟೀಲ, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.