LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಸರ್ಕಾರವನ್ನು ಪ್ರಶ್ನಿಸುವುದು ಅರಾಜಕತೆಯಲ್ಲ: ಅಭಿಜೀತ ದೀಪ್ಕೆ

ಹೊಸದಿಲ್ಲಿ, ಅ. 16: ಸರ್ಕಾರದ ಆಡಳಿತವನ್ನು ಪ್ರಶ್ನಿಸುವುದು ಮತ್ತು ಅಧಿಕಾರದಲ್ಲಿರುವವರಿಂದ ಉತ್ತರ ಕೇಳುವುದು ಅರಾಜಕತೆಯಲ್ಲ. ಅದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕು ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ ದೀಪ್ಕೆ ಹೇಳಿದ್ದಾರೆ.

ಶುಕ್ರವಾರ ದಿಲ್ಲಿಯಲ್ಲಿ ನಡೆಯಲಿರುವ ತಿರಂಗಾ ಮೆರವಣಿಗೆಗೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಶಾಂತಿಯುತ ಪ್ರತಿಭಟನೆಗಳನ್ನು ತಡೆಯಲು ಅಧಿಕಾರಿಗಳು ವಿಧಿಸಿರುವ ನಿರ್ಬಂಧಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.

ಪ್ರತಿಭಟನೆಗಳಿಂದ ವ್ಯಾಪಾರ, ವಹಿವಾಟು ಹಾಗೂ ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ ಎಂಬ ವಾದವನ್ನು ತಳ್ಳಿಹಾಕಿರುವ ದೀಪ್ಕೆ, ಜನಸಾಮಾನ್ಯರು ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗುತ್ತಿರುವುದು ಪ್ರತಿಭಟನೆಗಳಿಂದಲ್ಲ, ಸರ್ಕಾರದ ಕಠಿಣ ನಿರ್ಬಂಧಗಳಿಂದ ಎಂದು ಆರೋಪಿಸಿದ್ದಾರೆ.

‘ಶಾಂತಿಯುತ ಪ್ರತಿಭಟನೆಗಳಿಂದ ವ್ಯಾಪಾರಕ್ಕೆ ತೊಂದರೆಯಾಗುವುದಿಲ್ಲ. ಆದರೆ ಸರ್ಕಾರ ಇಡೀ ನಗರವನ್ನೇ ಬಂದ್ ಮಾಡಿದಾಗ, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದಾಗ, ನಾಗರಿಕರ ಸಂಚಾರ ನಿರ್ಬಂಧಿಸಿದಾಗ ಮತ್ತು ನಗರವನ್ನು ಯುದ್ಧಭೂಮಿಯನ್ನಾಗಿ ಪರಿವರ್ತಿಸಿದಾಗ ವ್ಯಾಪಾರ ವಹಿವಾಟುಗಳಿಗೆ ಅಡ್ಡಿಯಾಗುತ್ತದೆ’ ಎಂದು ಹೇಳಿದ್ದಾರೆ.

ಸಿಜೆಪಿ ಸ್ಥಾಪನೆಯಾದಾಗಿನಿಂದ ಮಹಾತ್ಮ ಗಾಂಧಿಯವರ ಶಾಂತಿ ಮತ್ತು ಅಹಿಂಸೆಯ ತತ್ವಗಳಿಗೆ ಬದ್ಧವಾಗಿದೆ. ಮುಂಬೈ, ಪುಣೆ, ಜೈಪುರ, ಲಕ್ನೋ, ಬೆಂಗಳೂರು ಹಾಗೂ ನಾಗ್ಪುರಗಳಲ್ಲಿ ಸಂಘಟನೆ ನಡೆಸಿದ ಪ್ರತಿಭಟನೆಗಳೆಲ್ಲವೂ ಶಾಂತಿಯುತವಾಗಿದ್ದವು ಎಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಪ್ರಶ್ನಿಸುವ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಶಾಂತಿಯುತ ಹೋರಾಟಕ್ಕಾಗಿ ಜೈಲಿಗೆ ಹೋಗಬೇಕಾದರೂ ಸಿದ್ಧ ಎಂಬ ನಿಲುವನ್ನು ದೀಪ್ಕೆ ವ್ಯಕ್ತಪಡಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST