ಬೆಂಗಳೂರು, ಅ.15 (ಸಮದರ್ಶಿ ಸುದ್ದಿ): ಸ್ಟಿಂಗ್ ಆಪರೇಷನ್ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗುರುವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ನಡೆಸಿದರು.
ಮಾಜಿ ಮುಖ್ಯಮಂತ್ರಿಯ ವಿರುದ್ಧ ಅಪಪ್ರಚಾರ ನಡೆಸಿದ ವ್ಯಕ್ತಿಯನ್ನು ರಕ್ಷಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಪ್ರಕರಣದ ಹಿಂದಿರುವ ಮೂಲ ವ್ಯಕ್ತಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
‘ನಮ್ಮ ಪಕ್ಷದ ಕಾರ್ಯಕರ್ತರನ್ನಾಗಲಿ, ನನ್ನನ್ನಾಗಲಿ ವಿಚಾರಣೆಗೆ ಕರೆಯುವುದಾದರೆ ಸಿದ್ಧರಿದ್ದೇವೆ. ಯಾವ ಕಾರ್ಯಕರ್ತನ ಮೇಲೆ ಅನುಮಾನವಿದೆ ಎಂಬುದನ್ನು ತಿಳಿಸಿದರೆ ನಾವೇ ಕಳುಹಿಸುತ್ತೇವೆ. ನನ್ನ ವಿಚಾರಣೆ ಅಗತ್ಯವಿದ್ದರೂ ಹಾಜರಾಗುತ್ತೇನೆ. ಆದರೆ, ಮೂಲ ಆರೋಪಿಯನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.
‘ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದ್ದೇವೆ. ಆದರೆ, ಅವರೇ ಮೌನವಾಗಿದ್ದಾರೆ. ನಮ್ಮನ್ನು ಬೆದರಿಸುವ ಪ್ರಯತ್ನಗಳಿಗೆ ಹೆದರುವುದಿಲ್ಲ’ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದ ಕುರಿತು ಎಲ್ಲ ಆಯಾಮಗಳಿಂದ ತನಿಖೆ ನಡೆಸುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತರು ಭರವಸೆ ನೀಡಿದ ಬಳಿಕ ಕುಮಾರಸ್ವಾಮಿ ಧರಣಿ ಹಿಂಪಡೆದರು.
ಇದಕ್ಕೂ ಮುನ್ನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಸ್ಟಿಂಗ್ ಆಪರೇಷನ್ ಕುರಿತು ವಿಚಾರಣೆಗೆ ಹಾಜರಾಗಲು ಸಿದ್ಧನಿದ್ದೇನೆ. ಬನ್ನಿ, ನನ್ನನ್ನು ಮುಟ್ಟಿ ನೋಡೋಣ’ ಎಂದು ಸವಾಲು ಹಾಕಿದರು.
ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೆಪಿಎಸ್ಸಿ ನೇಮಕಾತಿ ಅಕ್ರಮಗಳ ಕುರಿತು ತನಿಖಾ ಸಂಸ್ಥೆಗಳು ಮಧ್ಯಪ್ರವೇಶಿಸದಿದ್ದರೆ ಪ್ರಕರಣಗಳನ್ನು ಮುಚ್ಚಿಹಾಕಲಾಗುತ್ತಿತ್ತು ಎಂದು ಆರೋಪಿಸಿದರು.
ಪಂಚಾಯತ್ ರಾಜ್ ಇಲಾಖೆಯಲ್ಲಿ 24 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕುರಿತು ದಾಖಲೆಗಳನ್ನು ನೀಡಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಪಕ ಉತ್ತರ ನೀಡಿಲ್ಲ ಎಂದು ದೂರಿದರು.
ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಗೆ ತಪ್ಪು ಮಾಹಿತಿ ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಯೇ ತಮ್ಮ ವಿರುದ್ಧ ಯಾವುದೇ ಆರೋಪವಿಲ್ಲ ಎಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.