ಚೆನ್ನೈ, ಅ. 16: ತಮಿಳುನಾಡಿನ 128 ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಅಕ್ಟೋಬರ್ 25 ಹಾಗೂ ನವೆಂಬರ್ 1ರಂದು ಪಥಸಂಚಲನ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಲು ಅನುಮತಿ ನೀಡುವಂತೆ ಮದ್ರಾಸ್ ಹೈಕೋರ್ಟ ಶುಕ್ರವಾರ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದೆ.
ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಆರ್ಎಸ್ಎಸ್ ರಾಜ್ಯ ಕಾರ್ಯದರ್ಶಿ ವಿ.ಜಿ. ಜಗದೀಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣನ್ ಈ ಆದೇಶ ನೀಡಿದ್ದಾರೆ.
ಈ ಹಿಂದೆ ಹೈಕೋರ್ಟ ಹಾಗೂ ಸುಪ್ರೀಂ ಕೋರ್ಟ ನೀಡಿರುವ ಆದೇಶಗಳ ಹೊರತಾಗಿಯೂ ಪೊಲೀಸರು ಪದೇಪದೇ ಅನುಮತಿ ನಿರಾಕರಿಸುತ್ತಿರುವುದಕ್ಕೆ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಮೆರವಣಿಗೆ ನಡೆಯುವ ಮಾರ್ಗದಲ್ಲಿ ಮಸೀದಿ ಅಥವಾ ಚರ್ಚ್ಗಳಿವೆ ಎಂಬ ಕಾರಣಕ್ಕೆ ಅನುಮತಿ ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಕ್ಟೋಬರ್ 19ರೊಳಗೆ ಪಥಸಂಚಲನದ ಸಮಯ, ಮಾರ್ಗ ಹಾಗೂ ಸಾರ್ವಜನಿಕ ಸಭೆಗಳ ಸ್ಥಳಗಳನ್ನು ಅಂತಿಮಗೊಳಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ನ್ಯಾಯಾಲಯ ಈ ಹಿಂದೆ ರೂಪಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಆರ್ಎಸ್ಎಸ್ ಸಂಘಟಕರು ಭರವಸೆ ನೀಡಿದ್ದಾರೆ.