LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಆರೋಗ್ಯ ಗಂಭೀರವಾದರೂ ಉಪವಾಸ ಮುಂದುವರಿಸಿದ ಸೋನಮ್ ವಾಂಗ್ಚುಕ

ಹೊಸದಿಲ್ಲಿ, ಜುಲೈ 17: ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಶುಕ್ರವಾರ 20ನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿರುವ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ 20 ದಿನಗಳಿಂದ ಅನ್ನ–ನೀರು ತ್ಯಜಿಸಿ ಪ್ರತಿಭಟನೆ ನಡೆಸುತ್ತಿರುವ ವಾಂಗ್ಚುಕ್ ಅವರು 9 ಕೆ.ಜಿ.ಗೂ ಹೆಚ್ಚು ತೂಕ ಕಳೆದುಕೊಂಡಿದ್ದು, ತೀವ್ರ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ಆದರೂ ತಮ್ಮ ಬೇಡಿಕೆಗಳು ಈಡೇರುವವರೆಗೆ ಉಪವಾಸ ಕೈಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗೆ ದಿನದಿಂದ ದಿನಕ್ಕೆ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಾಮಾಜಿಕ ಹೋರಾಟಗಾರರು ಹಾಗೂ ನಾಗರಿಕ ಸಮಾಜದ ಸದಸ್ಯರ ಬೆಂಬಲ ಹೆಚ್ಚುತ್ತಿದ್ದು, ವಾಂಗ್ಚುಕ ಅವರ ಆರೋಗ್ಯದ ಬಗ್ಗೆ ದೇಶಾದ್ಯಂತ ಆತಂಕ ವ್ಯಕ್ತವಾಗಿದೆ. ವೈದ್ಯರ ತಂಡವು ಪ್ರತಿದಿನ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ದೇಹದ ತೂಕದಲ್ಲಿ ಗಣನೀಯ ಇಳಿಕೆ, ರಕ್ತದೊತ್ತಡ ಹಾಗೂ ದೈಹಿಕ ಶಕ್ತಿಯಲ್ಲಿ ಕುಸಿತ ಕಂಡುಬಂದಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಉಪವಾಸದ ನಡುವೆಯೇ ಬೆಂಬಲಿಗರನ್ನು ಉದ್ದೇಶಿಸಿ ವೀಡಿಯೊ ಸಂದೇಶ ಬಿಡುಗಡೆ ಮಾಡಿರುವ ವಾಂಗ್ಚುಕ, ಜುಲೈ 20ರಂದು ನಡೆಯಲಿರುವ ‘ಸಂಸತ್ ಚಲೋ’ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ. "ಜುಲೈ 20ರವರೆಗೆ ಹೇಗಾದರೂ ಬದುಕಿರುತ್ತೇನೆ. ನಿಮ್ಮೆಲ್ಲರೊಂದಿಗೆ ಸಂಸತ್ತಿನತ್ತ ಹೆಜ್ಜೆ ಹಾಕುತ್ತೇನೆ. ಒಂದು ವೇಳೆ ಸಾಧ್ಯವಾಗದಿದ್ದರೆ ಭೂತವಾಗಿ ಬಂದರೂ ನಿಮ್ಮೊಂದಿಗೆ ಇರುತ್ತೇನೆ" ಎಂದು ಅವರು ಹಾಸ್ಯಮಿಶ್ರಿತವಾಗಿ ಹೇಳಿದ್ದು, ಈ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ವಾಂಗ್ಚುಕ್ ಅವರ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ ಕೂಡ ಮಧ್ಯಪ್ರವೇಶಿಸಿದೆ. ಪ್ರತಿದಿನ ವೈದ್ಯಕೀಯ ತಪಾಸಣೆ ನಡೆಸಬೇಕು ಹಾಗೂ ಅಗತ್ಯವಿದ್ದರೆ ತಕ್ಷಣ ವೈದ್ಯಕೀಯ ನೆರವು ಒದಗಿಸಬೇಕು ಎಂದು ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಕೋರ್ಟ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ "ಪ್ರತಿಯೊಬ್ಬ ನಾಗರಿಕನ ಜೀವ ಅಮೂಲ್ಯ" ಎಂದು ಕೋರ್ಟ ಅಭಿಪ್ರಾಯಪಟ್ಟಿದೆ.

ಈ ನಡುವೆ, ಹಲವು ರಾಜಕೀಯ ನಾಯಕರು ಹಾಗೂ ಗಣ್ಯರು ವಾಂಗ್ಚುಕ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ಉದ್ದೇಶಕ್ಕೆ ಬೆಂಬಲ ಸೂಚಿಸಿದ ಅವರು, ಆರೋಗ್ಯದ ಹಿತದೃಷ್ಟಿಯಿಂದ ಉಪವಾಸ ಕೈಬಿಟ್ಟು ಸರ್ಕಾರದೊಂದಿಗೆ ಸಂವಾದ ನಡೆಸುವಂತೆ ಮನವಿ ಮಾಡಿದ್ದಾರೆ. ಚಿತ್ರ ನಿರ್ದೇಶಕಿ ಕಿರಣ್ ರಾವ್ ಸೇರಿದಂತೆ ಹಲವು ಗಣ್ಯರು ಸರ್ಕಾರವು ಪ್ರತಿಭಟನಾಕಾರರೊಂದಿಗೆ ತಕ್ಷಣ ಮಾತುಕತೆ ಆರಂಭಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು, ಸಾಮಾಜಿಕ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳ ಗಮನ ಸೆಳೆದಿದೆ. ದಿನನಿತ್ಯ ನೂರಾರು ಮಂದಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ವಾಂಗ್ಚುಕ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಜುಲೈ 20ರಂದು ನಡೆಯಲಿರುವ ‘ಸಂಸತ್ ಚಲೋ’ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಪ್ರತಿಭಟನಾ ಸಂಘಟಕರು ತಿಳಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ