ಶಿವಪುರಿ (ಮಧ್ಯಪ್ರದೇಶ), ಜುಲೈ 17: ಸುಮಾರು 400 ವರ್ಷಗಳಷ್ಟು ಪುರಾತನವಾದ ಐತಿಹಾಸಿಕ ಫಿರಂಗಿಯೊಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ನರ್ವರ್ ಕೋಟೆಯಿಂದ ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ನಸುಕಿನ ವೇಳೆ ಈ ಕಳವು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕೆಲ ದುಷ್ಕರ್ಮಿಗಳು ವಾಹನದಲ್ಲಿ ಕೋಟೆಯ ಹಿಂಭಾಗಕ್ಕೆ ಬಂದು, ಅಲ್ಲಿದ್ದ ಫಿರಂಗಿ ಕದ್ದು ಪರಾರಿಯಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಈ ಕೃತ್ಯದ ಹಿಂದೆ ಅಂತಾರಾಜ್ಯ ಅಥವಾ ಅಂತಾರಾಷ್ಟ್ರೀಯ ಪುರಾತನ ವಸ್ತುಗಳ ಕಳ್ಳಸಾಗಣೆ ಜಾಲದ ಕೈವಾಡವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಕರೇರಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪ್ರಶಾಂತ ಶರ್ಮ ತಿಳಿಸಿದ್ದಾರೆ.
ಕಳವಾಗಿರುವ ಫಿರಂಗಿಯು ಕೆಲವು ದಿನಗಳ ಹಿಂದೆ ಅದನ್ನು ಅಳವಡಿಸಿದ್ದ ಸ್ಥಳದಿಂದ ಕೆಳಗೆ ಬಿದ್ದಿತ್ತು. ಆದರೆ, ಅದನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸದ ಕಾರಣ ದುಷ್ಕರ್ಮಿಗಳು ಅದನ್ನು ಸುಲಭವಾಗಿ ಕಳವು ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಪುರಾತತ್ವ ಇಲಾಖೆಯ ಉಪ ನಿರ್ದೇಶಕ ತರುಣ ಕುಮಾರ ಶ್ರೀವಾಸ್ತವ, ಇದು ಅತ್ಯಂತ ಗಂಭೀರ ಬೆಳವಣಿಗೆಯಾಗಿದ್ದು, ನರ್ವರ್ ಕೋಟೆಯ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲು ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
10ನೇ ಶತಮಾನದಲ್ಲಿ ಕಛ್ವಾಹ ರಜಪೂತರಿಂದ ಮರುನಿರ್ಮಾಣಗೊಂಡ ನರ್ವರ್ ಕೋಟೆಯಲ್ಲಿ ಮೂಲತಃ 14 ಐತಿಹಾಸಿಕ ಫಿರಂಗಿಗಳಿದ್ದವು. ಈ ಕಳವು ಬಳಿಕ ಕೋಟೆಯಲ್ಲಿ ಉಳಿದಿರುವ ಫಿರಂಗಿಗಳ ಸಂಖ್ಯೆ 13ಕ್ಕೆ ಇಳಿದಿದೆ.
ಪ್ರಕರಣದ ಸುಳಿವು ಪತ್ತೆಹಚ್ಚಲು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳು, ಸಂಭಾವ್ಯ ಸಂಚಾರ ಮಾರ್ಗಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.