ಬೆಂಗಳೂರು, ಅ. 29: ರಾಜ್ಯದ 226 ಬರಪೀಡಿತ ತಾಲೂಕುಗಳ ರೈತರಿಗೆ ಮೊದಲ ಹಂತದ ಬೆಳೆಹಾನಿ ಪರಿಹಾರವಾಗಿ ಗರಿಷ್ಠ ₹2,500 ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸುಮಾರು 45ರಿಂದ 50 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯುವ ನಿರೀಕ್ಷೆಯಿದ್ದು, ಪರಿಹಾರ ವಿತರಣೆಯಲ್ಲಿ ಅಕ್ರಮಗಳನ್ನು ತಡೆಯಲು ಸರ್ಕಾರ 17 ಷರತ್ತುಗಳನ್ನು ವಿಧಿಸಿದೆ.
ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯ (ಎನ್‌ಡಿಆರ್‌ಎಫ್) ಅನುದಾನ ಬಿಡುಗಡೆಯಾಗುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನದೇ ವಿಪತ್ತು ಪರಿಹಾರ ನಿಧಿಯಿಂದ ₹1,250 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ನೆರವು ನೀಡಲು ಮುಂದಾಗಿದೆ. ಕೇಂದ್ರದಿಂದ ಅನುದಾನ ಬಂದ ಬಳಿಕ ಅರ್ಹ ರೈತರಿಗೆ ಉಳಿದ ಪರಿಹಾರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಬರಪೀಡಿತ ತಾಲೂಕುಗಳಲ್ಲಿ ಬೆಳೆಹಾನಿ ಅನುಭವಿಸಿರುವ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿದ್ದು, ರೈತ ಗುರುತಿನ ಸಂಖ್ಯೆ ಹೊಂದಿರಬೇಕು. ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆಯಾಗಿರಬೇಕು. ಜಿಲ್ಲಾಧಿಕಾರಿಗಳು ನಡೆಸಿರುವ ಬೆಳೆಹಾನಿ ಸಮೀಕ್ಷೆಯಲ್ಲಿ ರೈತರ ಜಮೀನು ಮತ್ತು ಬೆಳೆ ವಿವರಗಳು ದಾಖಲಾಗಿರಬೇಕು. ಅರ್ಹ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಜಮೆಯಾಗಲಿದೆ.
ಸರ್ಕಾರದ ಆದೇಶದ ಪ್ರಕಾರ, ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳ ಹಾನಿಯನ್ನು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ ಮಾರ್ಗಸೂಚಿಗಳ ಅನ್ವಯ ಪರಿಗಣಿಸಲಾಗುತ್ತದೆ. ರೈತರು ಒಂದಕ್ಕಿಂತ ಹೆಚ್ಚು ತಾಲೂಕುಗಳಲ್ಲಿ ಜಮೀನು ಹೊಂದಿದ್ದರೂ ಒಟ್ಟಾರೆ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ಪರಿಹಾರ ಲೆಕ್ಕ ಹಾಕಲಾಗುತ್ತದೆ.
ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಯಾದ ಜಮೀನುಗಳು, ಸರ್ಕಾರಿ ಜಮೀನುಗಳು ಹಾಗೂ ಈಗಾಗಲೇ ಭೂಸ್ವಾಧೀನಕ್ಕೆ ಒಳಪಟ್ಟಿರುವ ಜಮೀನುಗಳಿಗೆ ಪರಿಹಾರ ದೊರೆಯುವುದಿಲ್ಲ. ಪಹಣಿಯಲ್ಲಿ ರೈತರ ಹೆಸರು ಉಳಿದಿದ್ದರೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದರೆ ಅಂತಹ ಜಮೀನುಗಳನ್ನು ಪರಿಹಾರಕ್ಕೆ ಪರಿಗಣಿಸಲಾಗುವುದಿಲ್ಲ.
ಜಂಟಿ ಖಾತೆದಾರರ ಪ್ರಕರಣಗಳಲ್ಲಿ ಫ್ರೂಟ್ಸ್ ನೋಂದಣಿ ಆಧರಿಸಿ ಪರಿಹಾರ ನೀಡಲಾಗುತ್ತದೆ. ಒಂದೇ ಜಮೀನಿಗೆ ಎರಡು ಬಾರಿ ಹಣ ಪಾವತಿಯಾಗದಂತೆ ಭೂಮಿ ಕೋಶದ ಮೂಲಕ ಪರಿಶೀಲನೆ ನಡೆಸಲಾಗುತ್ತದೆ. ಒಂದೇ ಜಮೀನಿನಲ್ಲಿ ಹಲವು ಬೆಳೆಗಳನ್ನು ಬೆಳೆದಿದ್ದರೆ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಬೆಳೆಯನ್ನು ಪರಿಹಾರ ಲೆಕ್ಕಾಚಾರಕ್ಕೆ ಪರಿಗಣಿಸಲಾಗುತ್ತದೆ.
ಪಹಣಿಯಲ್ಲಿರುವ ಹೆಸರು ಮತ್ತು ಬೆಳೆ ಸಮೀಕ್ಷೆಯಲ್ಲಿರುವ ಹೆಸರು ಹೊಂದಾಣಿಕೆಯಾಗದಿದ್ದರೆ ಗ್ರಾಮ ಆಡಳಿತಾಧಿಕಾರಿಗಳು 3 ದಿನಗಳಲ್ಲಿ ಪರಿಶೀಲನೆ ನಡೆಸಬೇಕು. ಆಧಾರ್ ಮತ್ತು ಪಹಣಿಯಲ್ಲಿನ ಹೆಸರುಗಳಲ್ಲಿ ಶೇ.70ಕ್ಕಿಂತ ಕಡಿಮೆ ಹೊಂದಾಣಿಕೆಯಿದ್ದರೆ ತಹಶೀಲ್ದಾರರು 5 ದಿನಗಳಲ್ಲಿ ಪರಿಶೀಲಿಸಿ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ವರದಿ ಸಲ್ಲಿಸಬೇಕು.
ಪರಿಹಾರ ವಿತರಣೆಗೂ ಮುನ್ನ ಜಿಲ್ಲಾಧಿಕಾರಿಗಳು ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಿ ಡಿಜಿಟಲ್ ಸಹಿ ಮೂಲಕ ಅಂತಿಮ ಅನುಮೋದನೆ ನೀಡಬೇಕು. ಜಿಲ್ಲೆ, ತಾಲೂಕು, ಗ್ರಾಮ ಹಾಗೂ ಫಲಾನುಭವಿವಾರು ಪರಿಹಾರ ವಿತರಣೆಯ ಸಂಪೂರ್ಣ ವಿವರಗಳನ್ನು ಭೂಮಿ ಕೋಶದಲ್ಲಿ ದಾಖಲಿಸಲು ಸೂಚಿಸಲಾಗಿದೆ.
ಅರ್ಹ ರೈತರು ತಮ್ಮ ಫ್ರೂಟ್ಸ್ ನೋಂದಣಿ, ಆಧಾರ್ ಜೋಡಣೆ, ಬ್ಯಾಂಕ್ ಖಾತೆ ಹಾಗೂ ಬೆಳೆ ಸಮೀಕ್ಷೆಯ ವಿವರಗಳನ್ನು ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ. ಸರ್ಕಾರ ನಿಗದಿಪಡಿಸಿರುವ ಷರತ್ತುಗಳನ್ನು ಪೂರೈಸಿದ ರೈತರಿಗೆ ಮಾತ್ರ ಮೊದಲ ಹಂತದ ಪರಿಹಾರ ದೊರೆಯಲಿದೆ.