ನವದೆಹಲಿ, ಅ. 30: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಮತ ಕಳ್ಳತನದ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ವಿರುದ್ಧ ‘ಇಂಡಿಯಾ’ ಮೈತ್ರಿಕೂಟ ಶುಕ್ರವಾರ ನಡೆಸಲು ಉದ್ದೇಶಿಸಿದ್ದ ಸಾಂಕೇತಿಕ ‘ಸಾರ್ವಜನಿಕ ವಾಗ್ದಂಡನೆ’ ಕಾರ್ಯಕ್ರಮವನ್ನು ಪ್ರತಿಕೂಲ ಹವಾಮಾನದ ಕಾರಣ ಶನಿವಾರಕ್ಕೆ ಮುಂದೂಡಲಾಗಿದೆ.
ಚುನಾವಣಾ ಆಯೋಗದ ಕಾರ್ಯವೈಖರಿ ವಿರುದ್ಧ ಪ್ರತಿಭಟಿಸಲು ವಿರೋಧ ಪಕ್ಷಗಳ ಸಂಸದರು ಶುಕ್ರವಾರ ಮಧ್ಯಾಹ್ನ 3.30ಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಹವಾಮಾನ ವೈಪರೀತ್ಯದಿಂದ ಕಾರ್ಯಕ್ರಮ ಮುಂದೂಡಲಾಗಿದೆ.
ಇದಕ್ಕೂ ಮುನ್ನ ಗುರುವಾರ ಖರ್ಗೆ ಅವರ ನಿವಾಸದಲ್ಲಿ ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ನಡೆದಿತ್ತು. ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ, ಜೈರಾಮ ರಮೇಶ, ಕೆ.ಸಿ. ವೇಣುಗೋಪಾಲ, ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಯಾನ್, ಸಮಾಜವಾದಿ ಪಕ್ಷದ ಹರೇಂದ್ರ ಮಲಿಕ್, ಜಾರ್ಖಂಡ್ ಮುಕ್ತಿ ಮೋರ್ಚಾದ ಮಹುವಾ ಮಾಝಿ, ಸಿಪಿಎಂನ ಜಾನ್ ಬ್ರಿಟ್ಟಾಸ್ ಹಾಗೂ ಸಿಪಿಐನ ಸಂತೋಷ ಕುಮಾರ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಸಾಂಕೇತಿಕ ಸಾರ್ವಜನಿಕ ವಾಗ್ದಂಡನೆ ಕಾರ್ಯಕ್ರಮವನ್ನು ಯಾವ ರೀತಿಯಲ್ಲಿ ನಡೆಸಬೇಕು ಎಂಬ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ತಿಳಿಸಿದ್ದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಮತ ಕಳ್ಳತನದ ಆರೋಪಗಳಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯವೂ ಸಾರ್ವಜನಿಕ ಚರ್ಚೆಗೆ ಬರಬೇಕು. ಪ್ರಜಾಪ್ರಭುತ್ವದ ರಕ್ಷಣೆಗಾಗಿ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ನಡೆಸಲಿವೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ ಗೊಗೊಯ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮೈತ್ರಿಕೂಟದ ಪ್ರತಿಯೊಂದು ಪಕ್ಷದ ಪ್ರತಿನಿಧಿಯೂ ಮಾತನಾಡಲಿದ್ದಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಹರೇಂದ್ರ ಮಲಿಕ್ ತಿಳಿಸಿದ್ದಾರೆ.
ದೆಹಲಿಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಖರ್ಗೆ ಅವರ ನಿವಾಸದಲ್ಲಿಯೇ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿತ್ತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ತಿಳಿಸಿದ್ದರು.
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಚುನಾವಣಾ ಆಯೋಗದ ಹೊಣೆಗಾರಿಕೆ ಕುರಿತು ವಿರೋಧ ಪಕ್ಷಗಳು ಪ್ರಶ್ನೆಗಳನ್ನು ಎತ್ತುತ್ತಿವೆ. ಆದರೆ ಪರಿಷ್ಕರಣೆ ಪ್ರಕ್ರಿಯೆ ಕಾನೂನುಬದ್ಧವಾಗಿದೆ ಎಂಬುದು ಚುನಾವಣಾ ಆಯೋಗದ ನಿಲುವಾಗಿದೆ.
ಈ ಕಾರ್ಯಕ್ರಮವು ಸಾಂಕೇತಿಕ ರಾಜಕೀಯ ಪ್ರತಿಭಟನೆಯಾಗಿದ್ದು, ಸಂವಿಧಾನದ ಅಡಿಯಲ್ಲಿ ನಡೆಯುವ ಅಧಿಕೃತ ಪದಚ್ಯುತಿ ಪ್ರಕ್ರಿಯೆಯಲ್ಲ.