ಹೊಸದಿಲ್ಲಿ, ಅ.25: ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸ್ಥಳೀಯ ಉದ್ಯಮಿಗಳು, ಕುಶಲಕರ್ಮಿಗಳು ಹಾಗೂ ಉತ್ಪಾದಕರಿಗೆ ಪ್ರೋತ್ಸಾಹ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ಭಾನುವಾರ ತಮ್ಮ ಮಾಸಿಕ ‘ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದರು. ಸ್ಥಳೀಯ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕದ ತೊಗರಿ ಬೇಳೆ, ಬಿಹಾರದ ಮಖಾನಾ ಸೇರಿದಂತೆ ಹಲವು ಭಾರತೀಯ ಕೃಷಿ ಉತ್ಪನ್ನಗಳು ವಿದೇಶಗಳಲ್ಲಿಯೂ ಜನಪ್ರಿಯವಾಗುತ್ತಿವೆ. ಮಹಾರಾಷ್ಟ್ರದ ಬುಡಕಟ್ಟು ಸಮುದಾಯಗಳು ತಯಾರಿಸುವ ವಸ್ತುಗಳು ಆಕರ್ಷಕ ಪ್ಯಾಕಿಂಗ್‌ನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ ಎಂದು ತಿಳಿಸಿದರು.
ಖಾದಿ ಉತ್ಪನ್ನಗಳ ಬಳಕೆ ಹೆಚ್ಚುತ್ತಿರುವುದು ಗ್ರಾಮೀಣ ಕುಶಲಕರ್ಮಿಗಳ ಜೀವನೋಪಾಯಕ್ಕೆ ನೆರವಾಗುತ್ತಿದೆ. ದೇಶದ ಸಾಂಪ್ರದಾಯಿಕ ಕಲೆ ಹಾಗೂ ಕರಕುಶಲ ವೃತ್ತಿಗಳನ್ನು ಉಳಿಸುವಲ್ಲಿ ಗ್ರಾಹಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಪಂಜಾಬ್‌ನಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುತ್ತಿರುವ ‘ಖೇತಿ ವಿರಾಸತ್ ಮಿಷನ್’ ಸಂಸ್ಥೆಯ ಕಾರ್ಯವನ್ನು ಪ್ರಧಾನಿ ಶ್ಲಾಘಿಸಿದರು. ರಾಸಾಯನಿಕಗಳ ಬಳಕೆಯಿಲ್ಲದೆ ನೈಸರ್ಗಿಕ ಬಣ್ಣದ ಹತ್ತಿ ಬೆಳೆಯುತ್ತಿರುವುದರಿಂದ ಬಟ್ಟೆ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಅಗತ್ಯ ಕಡಿಮೆಯಾಗುತ್ತಿದೆ ಎಂದು ವಿವರಿಸಿದರು.
ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ ಸ್ಥಳೀಯ ಜನರ ಸಹಭಾಗಿತ್ವದಿಂದ ಹೆವಾಲ್ ನದಿಯನ್ನು ಪುನರುಜ್ಜೀವನಗೊಳಿಸಿರುವ ಪ್ರಯತ್ನವನ್ನೂ ಪ್ರಸ್ತಾಪಿಸಿದ ಮೋದಿ, ಪರಿಸರ ಸಂರಕ್ಷಣೆಯಲ್ಲಿ ಜನಸಾಮಾನ್ಯರ ಒಗ್ಗಟ್ಟಿನ ಕಾರ್ಯ ಮಹತ್ವದ್ದಾಗಿದೆ ಎಂದು ಹೇಳಿದರು.