ಬೆಳಗಾವಿ, ಅ. 15 (ಸಮದರ್ಶಿ ಸುದ್ದಿ): ರೈತರ ಬೇಡಿಕೆಗಳ ಪರಿಶೀಲನೆಗೆ ಕೇಂದ್ರ ಸರ್ಕಾರ ಈಗ ಜಂಟಿ ಸಮಿತಿ ರಚಿಸಿದೆ. ಇಷ್ಟು ವರ್ಷ ಸರ್ಕಾರ ಏನು ಮಾಡುತ್ತಿತ್ತು? ಲಕ್ಷಾಂತರ ರೂ. ಸಂಬಳ ನೀಡುವ ಐಎಎಸ್ ಅಧಿಕಾರಿಗಳನ್ನು ದನ ಕಾಯಲು ಇಟ್ಟುಕೊಂಡಿದ್ದೀರಾ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಬ್ಬು ಬೆಳೆಗಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿಯತ್ತ ಪಾದಯಾತ್ರೆ ನಡೆಸುತ್ತಿರುವ ಅವರು, ಗುರುವಾರ ಬೆಳಗಾವಿ ತಾಲೂಕಿನ ಕಾಕತಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಷ್ಟು ವರ್ಷ ಏನು ಮಾಡುತ್ತಿದ್ದರು? ಅಧಿಕಾರಿಗಳ ಸಲಹೆ ಪಡೆದ ಬಳಿಕ ಈಗ ಸಮಿತಿ ರಚಿಸಲು ಮುಂದಾಗಿದ್ದಾರೆ. ರೈತರು ಬೀದಿಗಿಳಿದು ಹೋರಾಟ ನಡೆಸಿದ ನಂತರ ಸರ್ಕಾರಕ್ಕೆ ಜ್ಞಾನೋದಯವಾಗಿದೆಯೇ ಎಂದು ಪ್ರಶ್ನಿಸಿದರು.
ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ನೇತೃತ್ವದಲ್ಲಿ ಜಂಟಿ ಸಮಿತಿ ರಚಿಸಿರುವುದಾಗಿ ಮಾಧ್ಯಮಗಳಿಂದ ತಿಳಿದುಬಂದಿದೆ. ಆದರೆ, ನಮ್ಮ ಬೇಡಿಕೆ ಸಮಿತಿ ರಚನೆಯಲ್ಲ. ಸಕ್ಕರೆಗೆ ಪ್ರತಿ ಕೆ.ಜಿ.ಗೆ ₹60 ಕನಿಷ್ಠ ಬೆಂಬಲ ಬೆಲೆ, ಕಬ್ಬಿಗೆ ಪ್ರತಿ ಟನ್ಗೆ ₹5,500 ದರ ಹಾಗೂ ರೈತರು ಉತ್ಪಾದಿಸುವ ಎಥೆನಾಲ್ ಸಂಪೂರ್ಣ ಖರೀದಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ 2 ತಿಂಗಳಿಂದ ಬೇಡಿಕೆ ಸಲ್ಲಿಸುತ್ತಿದ್ದೇವೆ. ತಿಂಗಳ ಹಿಂದೆಯೇ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿವಾಸದ ಎದುರು ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದೇವೆ. ಆಗಲೇ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಈಗ ಸಮಿತಿ ರಚಿಸುವುದರಿಂದ ರೈತರಿಗೆ ತಕ್ಷಣ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಹೊಲಗಳಲ್ಲಿ ಕಬ್ಬು ಒಣಗುತ್ತಿದೆ. ಸಕ್ಕರೆ ಕಾರ್ಖಾನೆಗಳು ಬಂದ್ ಆಗಿವೆ. ಇನ್ನೊಂದು ವಾರ ಇದೇ ಪರಿಸ್ಥಿತಿ ಮುಂದುವರಿದರೆ ರೈತರ ಬದುಕು ಮತ್ತಷ್ಟು ದುಸ್ತರವಾಗಲಿದೆ. ಈಗಾಗಲೇ ಹಲವು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಚೂನಪ್ಪ ಪೂಜೇರಿ ಆಕ್ರೋಶ ವ್ಯಕ್ತಪಡಿಸಿದರು.