ಬೆಳಗಾವಿ, ಅ. 15 (ಸಮದರ್ಶಿ ಸುದ್ದಿ): ಕಬ್ಬು ಬೆಳೆಗಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿದ್ದರಿಂದ ನೂರಾರು ಕೋಟಿ ರೂ. ಹಾನಿಯಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಎಲ್ಲ ಹಾನಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಎ–1 ಆರೋಪಿ. ಅವರ ಕುತಂತ್ರದಿಂದಾಗಿಯೇ ರೈತರು ಬೀದಿಗಿಳಿಯುವಂತಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಆರೋಪಿಸಿದರು.
ಹುಬ್ಬಳ್ಳಿಯತ್ತ ಪಾದಯಾತ್ರೆ ನಡೆಸುತ್ತಿದ್ದ ವೇಳೆ ಬೆಳಗಾವಿ ತಾಲೂಕಿನ ಕಾಕತಿ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2 ದಿನಗಳಿಂದ ರಾಜ್ಯದ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿರುವುದು ನಮಗೂ ತಿಳಿದಿದೆ. ಆದರೆ, ದೇಶದ ಜನರೆಲ್ಲರೂ ರೈತ ಬೆಳೆದ ಅನ್ನವನ್ನೇ ತಿನ್ನುತ್ತಾರೆ. ಅನ್ನದಾತನೇ ಬದುಕಲು ಸಾಧ್ಯವಾಗದಿದ್ದರೆ ಉಳಿದವರು ಹೇಗೆ ಬದುಕುತ್ತಾರೆ ಎಂದು ಪ್ರಶ್ನಿಸಿದರು.
ರೈತರ ಹೋರಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಲಿಲ್ಲ. ರೈತರನ್ನು ಸಮಾಧಾನಪಡಿಸುವ ಕನಿಷ್ಠ ಪ್ರಯತ್ನವನ್ನೂ ಮಾಡಲಿಲ್ಲ. ಸರ್ಕಾರಗಳ ಈ ನಿರ್ಲಕ್ಷ್ಯ ರೈತರ ಬದುಕನ್ನೇ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸುವಾಗ ಸರ್ಕಾರ ಯಾರನ್ನೂ ಕರೆದು ಜಂಟಿ ಸಮಿತಿ ರಚಿಸುವುದಿಲ್ಲ. ಬೀಜ, ಗೊಬ್ಬರದ ಬೆಲೆ ಏರಿಸುವಾಗ ರೈತರ ಅಭಿಪ್ರಾಯ ಕೇಳುವುದಿಲ್ಲ. ಆದರೆ, ಕಬ್ಬು, ಸಕ್ಕರೆ ಹಾಗೂ ಎಥೆನಾಲ್ಗೆ ನ್ಯಾಯಯುತ ಬೆಲೆ ಕೇಳಿದಾಗ ಮಾತ್ರ ಸಮಿತಿ ರಚನೆಯ ನೆಪ ಹೇಳಲಾಗುತ್ತಿದೆ. ಇದು ರೈತರನ್ನು ವಂಚಿಸುವ ತಂತ್ರ ಎಂದು ಟೀಕಿಸಿದರು.
ಮುಖ್ಯಮಂತ್ರಿ ಬುಧವಾರ ಸಂಜೆ ದೂರವಾಣಿ ಮೂಲಕ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಧರಣಿ ಕೈಬಿಡುವಂತೆ ಮನವಿ ಮಾಡಿದರು. ಅವರ ಮಾತಿಗೆ ಗೌರವ ನೀಡಿ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದೇವೆ. ಮತ್ತೊಂದು ಬದಿಯಲ್ಲಿ ಪಾದಯಾತ್ರೆ ಮುಂದುವರಿಸಿದ್ದೇವೆ. ಆದರೆ, ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಬ್ಬು ಬೆಳೆಗಾರರಿಗೆ ನ್ಯಾಯಯುತ ದರ ದೊರಕಿಸಿಕೊಡುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕೂ ಇದೆ. ರಾಜ್ಯದ ಪಾಲಿನ ಅನುದಾನವನ್ನು ಸರ್ಕಾರ ನೀಡಬೇಕು. ರೈತರಿಗೆ ಪ್ರಸ್ತುತ ಕೇವಲ 3 ತಾಸು ವಿದ್ಯುತ್ ಪೂರೈಸಲಾಗುತ್ತಿದ್ದು, ಹಗಲಿನ ವೇಳೆ ಕನಿಷ್ಠ 7 ತಾಸು ನಿರಂತರ ವಿದ್ಯುತ್ ನೀಡಬೇಕು ಎಂಬ ಬೇಡಿಕೆಯನ್ನೂ ಮುಖ್ಯಮಂತ್ರಿಗಳ ಮುಂದಿಟ್ಟಿದ್ದೇನೆ ಎಂದು ಚೂನಪ್ಪ ಪೂಜೇರಿ ತಿಳಿಸಿದರು.