ಬೆಳಗಾವಿ, ಅ. 11 (ಸಮದರ್ಶಿ ಸುದ್ದಿ): ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾಮಾತಾ ದೇವಿಯ ಮೂರ್ತಿಯನ್ನು ಹೊತ್ತು ಸಾಗುತ್ತಿದ್ದ ದುರ್ಗಾಮಾತಾ ದೌಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಹಿಂಬದಿಯಿಂದ ಬಂದ ಲಾರಿ ಹರಿದ ಪರಿಣಾಮ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಭೀಕರ ಘಟನೆ ಹುಕ್ಕೇರಿ ತಾಲೂಕಿನ ಮಣಗುತ್ತಿ ಹಾಗೂ ಹತ್ತರಗಿ ಟೋಲ್‌ಗೇಟ್ ಸಮೀಪ ಭಾನುವಾರ ಮುಂಜಾನೆ ಸಂಭವಿಸಿದೆ.

ಅಪಘಾತದಲ್ಲಿ ಪ್ರಕಾಶ, ಮಹೇಶ ಹಾಗೂ ದಾನೇಶ್ವರಿ ಮೃತಪಟ್ಟಿದ್ದಾರೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಕ್ಕೇರಿ ತಾಲೂಕಿನ ಹಂಜ್ಯಾನಟ್ಟಿ ಗ್ರಾಮದ ಭಕ್ತರು ಬೆಳಗಾವಿಯಿಂದ ದುರ್ಗಾಮಾತಾ ದೇವಿಯ ಮೂರ್ತಿಯನ್ನು ತಮ್ಮ ಗ್ರಾಮಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿದ್ದರು. ಭಾನುವಾರ ಮುಂಜಾನೆ ನೂರಾರು ಭಕ್ತರು ದೇವಿಯ ಮೂರ್ತಿಯೊಂದಿಗೆ ಸಾಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಹರಿದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ.

ನವರಾತ್ರಿ ಉತ್ಸವದ ಅಂಗವಾಗಿ ಮಹಾರಾಷ್ಟ್ರದಲ್ಲಿ ಪ್ರಚಲಿತದಲ್ಲಿರುವ ದುರ್ಗಾಮಾತಾ ದೌಡ ಆಚರಣೆ ಗಡಿಜಿಲ್ಲೆ ಬೆಳಗಾವಿಯಲ್ಲೂ ದಶಕಗಳಿಂದ ನಡೆದುಕೊಂಡು ಬಂದಿದೆ. ದಸರಾ ಹಬ್ಬದ ಮೊದಲ 9 ದಿನಗಳ ಕಾಲ ಮುಂಜಾನೆ ವಿವಿಧ ಪ್ರದೇಶಗಳಲ್ಲಿ ಭಕ್ತರು ಸಾಮೂಹಿಕ ಓಟ ಹಾಗೂ ಮೆರವಣಿಗೆ ನಡೆಸುತ್ತಾರೆ. ಮೊದಲ ದಿನ ದುರ್ಗಾಮಾತಾ ದೇವಿಯ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದು ಈ ಆಚರಣೆಯ ವಿಶೇಷವಾಗಿದೆ.
ಪ್ರತಿವರ್ಷ ನೂರಾರು ಭಕ್ತರು ಉತ್ಸಾಹದಿಂದ ಪಾಲ್ಗೊಳ್ಳುವ ಧಾರ್ಮಿಕ ಮೆರವಣಿಗೆ ಈ ಬಾರಿ ಭೀಕರ ಅಪಘಾತಕ್ಕೆ ಸಾಕ್ಷಿಯಾಗಿದೆ. ಭಕ್ತಿಭಾವದಿಂದ ದೇವಿಯ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಯಿಂದ ಹಂಜ್ಯಾನಟ್ಟಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ಅಪಘಾತದಲ್ಲಿ ಗಾಯಗೊಂಡ ಇತರರ ಹೆಸರುಗಳು ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.