ಬೆಂಗಳೂರು, ಸೆ. 19 : ರಾಜ್ಯದ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಪಾವತಿಸುವುದನ್ನು ಸ್ಥಗಿತಗೊಳಿಸುವ ಸಂಬಂಧ ಲೆಕ್ಕ ಪರಿಶೋಧನಾ, ಪೌರಾಡಳಿತ ಹಾಗೂ ಪಂಚಾಯತ್ ರಾಜ್ ಇಲಾಖೆಗಳು ಹೊರಡಿಸಿದ್ದ ಮೂರು ಪ್ರತ್ಯೇಕ ಸುತ್ತೋಲೆಗಳಿಗೆ ಹೈಕೋರ್ಟ ಮಧ್ಯಂತರ ತಡೆ ನೀಡಿದೆ.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸಮಿತಿ ಹಾಗೂ ಅದರ ಅಧೀನದ ವಿವಿಧ ಕಾರ್ಮಿಕ ಸಂಘಟನೆಗಳು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಮೂರು ಸುತ್ತೋಲೆಗಳ ಜಾರಿಗೆ ಮಧ್ಯಂತರ ತಡೆ ನೀಡಿ, ಮುಂದಿನ ವಿಚಾರಣೆಯನ್ನು ಸೆ. 21ಕ್ಕೆ ಮುಂದೂಡಿದೆ.
ರಾಜ್ಯ ಸರ್ಕಾರವು 2026ರ ಮೇ 22ರಂದು ರಾಜ್ಯದ 83 ನಿಗದಿತ ಉದ್ಯೋಗಗಳಿಗೆ ಕನಿಷ್ಠ ವೇತನ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿತ್ತು. ಸರ್ಕಾರದ ಹಲವು ಇಲಾಖೆಗಳು ಈ ಅಧಿಸೂಚನೆಯಂತೆ ಪರಿಷ್ಕೃತ ವೇತನ ಜಾರಿಗೆ ಕ್ರಮ ಕೈಗೊಂಡಿದ್ದವು.
ಆದರೆ, ಜುಲೈ 15ರಂದು ಹಣಕಾಸು ಇಲಾಖೆ ಆದೇಶ ಹೊರಡಿಸಿ, ಪರಿಷ್ಕೃತ ಕನಿಷ್ಠ ವೇತನ ಜಾರಿಯಿಂದ ಉಂಟಾಗಬಹುದಾದ ಹಣಕಾಸಿನ ಹೊರೆ ಹಾಗೂ ಹೂಡಿಕೆಯ ಮೇಲಿನ ಪರಿಣಾಮವನ್ನು ಪರಿಗಣಿಸಿ ಅದರ ಜಾರಿಯನ್ನು ಸ್ಥಗಿತಗೊಳಿಸುವಂತೆ ಶಿಫಾರಸು ಮಾಡಿತ್ತು.
ಇದರ ಆಧಾರದ ಮೇಲೆ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರತ್ಯೇಕ ಸುತ್ತೋಲೆಗಳನ್ನು ಹೊರಡಿಸಿ ಪರಿಷ್ಕೃತ ಕನಿಷ್ಠ ವೇತನ ಜಾರಿಯನ್ನು ಸ್ಥಗಿತಗೊಳಿಸಿದ್ದವು.
ಈ ಕ್ರಮವನ್ನು ಪ್ರಶ್ನಿಸಿ ಸಿಐಟಿಯು ರಾಜ್ಯ ಸಮಿತಿ, ಕರ್ನಾಟಕ ರಾಜ್ಯ ಸರ್ಕಾರಿ ಕಾಯಮೇತರ ನೌಕರರ ಒಕ್ಕೂಟ, ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ, ತುಮಕೂರು ಜಿಲ್ಲಾ ನೀರು ಸರಬರಾಜು ನೌಕರರ ಸಂಘ ಹಾಗೂ ತುಮಕೂರು ನಗರ ಪಾಲಿಕೆ ಕಸದ ಆಟೊ ರಿಕ್ಷಾ ಚಾಲಕರು ಮತ್ತು ಸಹಾಯಕರ ಸಂಘಗಳು ಹೈಕೋರ್ಟ ಮೆಟ್ಟಿಲೇರಿದ್ದವು.
ಸರ್ಕಾರದ ಅಧಿಸೂಚನೆಯ ಮೂಲಕ ದೊರೆತ ಪರಿಷ್ಕೃತ ಕನಿಷ್ಠ ವೇತನವನ್ನು ಇಲಾಖಾ ಸುತ್ತೋಲೆಗಳ ಮೂಲಕ ತಡೆಹಿಡಿಯುವುದು ಕಾನೂನುಬಾಹಿರ ಎಂದು ಅರ್ಜಿದಾರ ಸಂಘಟನೆಗಳು ವಾದಿಸಿದ್ದು, ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣ ಜಾರಿಗೊಳಿಸಲು ನಿರ್ದೇಶಿಸಬೇಕೆಂದು ಕೋರಿವೆ.