LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಬೆಳಗಾವಿ, ಭಾಲ್ಕಿ ಕ್ಷೇತ್ರಗಳಲ್ಲಿ ಫಾರಂ-7 ವಿವಾದ

ಬೆಳಗಾವಿ, ಸೆ. 24 : (ಸಮದರ್ಶಿ ಸುದ್ದಿ) - ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಯುತ್ತಿರುವ ನಡುವೆಯೇ ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಫಾರಂ-7 ಮೂಲಕ ಪ್ರಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬೀದರ ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲೂ ಇದೇ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 194, 195, 196 ಮತ್ತು 199ರಲ್ಲಿ ನೂರಾರು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಫಾರಂ-7 ಸಲ್ಲಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಕುರಿತು ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿರುವ ಸ್ಥಳೀಯರು, ಮತದಾರರ ಹೆಸರುಗಳನ್ನು ಕೈಬಿಡಲು ಸಲ್ಲಿಸಲಾಗಿದೆ ಎನ್ನಲಾದ ನೂರಾರು ಫಾರಂ-7 ಅರ್ಜಿಗಳು ಹಾಗೂ ಅವುಗಳಲ್ಲಿ ಹೆಸರಿಸಲಾದ ಮತದಾರರ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಬೆಳಗಾವಿ ಉತ್ತರದಲ್ಲಿ ಸಲ್ಲಿಕೆಯಾದ ಕೆಲವು ಫಾರಂ-7 ಅರ್ಜಿಗಳಲ್ಲಿ ಮುಸ್ಲಿಂ ಮತದಾರರ ಹೆಸರುಗಳಿರುವುದಾಗಿ ಆರೋಪಿಸಲಾಗಿದೆ. ಪರಿಶೀಲನೆಗೆ ಒಳಪಟ್ಟ ಎಂಟು ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ಶಿವಂ, ಒಂದು ಅರ್ಜಿಯನ್ನು ಮಹಾದೇವ ಮತ್ತು ಮತ್ತೊಂದು ಅರ್ಜಿಯನ್ನು ವಿನೋದ ಸಲ್ಲಿಸಿರುವುದಾಗಿ ದಾಖಲಾಗಿದೆ. ಇನ್ನೊಂದು ಅರ್ಜಿಯಲ್ಲಿ ಅರ್ಜಿದಾರರ ಹೆಸರು ನಮೂದಿಸಿಲ್ಲ ಎಂದು ವರದಿಯಾಗಿದೆ.

ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ಅಮಾನ ಸೇಠ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ವೀರಭದ್ರನಗರದ ಉರ್ದು ಶಾಲೆಯಲ್ಲಿ ಈ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದವೂ ನಡೆದಿದೆ.

ಕಾಂಗ್ರೆಸ್ ಮುಖಂಡರು ಬಿಜೆಪಿ ಕಾರ್ಯಕರ್ತರು ಸಾಮೂಹಿಕವಾಗಿ ಫಾರಂ-7 ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದರೆ, ಬಿಜೆಪಿ ಈ ಆರೋಪವನ್ನು ನಿರಾಕರಿಸಿದೆ. ಅನುಮಾನಾಸ್ಪದ ಮತದಾರರ ಸೇರ್ಪಡೆ ಕುರಿತು ಆಕ್ಷೇಪ ಸಲ್ಲಿಸುವ ಹಕ್ಕು ನಾಗರಿಕರಿಗೆ ಇದೆ ಎಂದು ಬಿಜೆಪಿ ಮುಖಂಡರು ಪ್ರತಿಪಾದಿಸಿದ್ದಾರೆ.

ಬೆಳಗಾವಿ ದಕ್ಷಿಣದಲ್ಲೂ 2 ಸಾವಿರ ಮತಗಳ ವಿವಾದ

ಇದೇ ವೇಳೆ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 2 ಸಾವಿರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವಂತೆ ಶಾಸಕ ಅಭಯ ಪಾಟೀಲ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಹರಿಪ್ರಸಾದ, ಎಸ್‌ಐಆರ್‌ ಪ್ರಕ್ರಿಯೆ ವೇಳೆ ಬೆಳಗಾವಿ ದಕ್ಷಿಣ ಕ್ಷೇತ್ರದ 2 ಸಾವಿರ ಮತದಾರರ ಹೆಸರುಗಳನ್ನು ಕೈಬಿಡುವಂತೆ ಅಭಯ ಪಾಟೀಲ ಪತ್ರ ಬರೆದಿದ್ದಾರೆ ಎಂದು ಆರೋಪಿಸಿ, ಅದಕ್ಕೆ ಸಂಬಂಧಿಸಿದ ದಾಖಲೆ ಪ್ರದರ್ಶಿಸಿದ್ದಾರೆ.

“ಮತದಾರರ ಹೆಸರುಗಳನ್ನು ಕೈಬಿಡುವಂತೆ ಪತ್ರ ಬರೆಯಲು ಇವರು ಯಾರು? ಅಭಯ ಪಾಟೀಲ ಬರೆದಿರುವ ಪತ್ರ ನಮ್ಮ ಬಳಿ ಇದೆ” ಎಂದು ಹರಿಪ್ರಸಾದ ಹೇಳಿದ್ದಾರೆ.

ಸಾಮೂಹಿಕವಾಗಿ ಮತದಾರರ ಹೆಸರುಗಳನ್ನು ಕೈಬಿಡುವಂತೆ ಕೋರಿ ಪತ್ರ ಬರೆಯುವುದು ಕಾನೂನುಬಾಹಿರ ಎಂದು ಆರೋಪಿಸಿದ ಅವರು, ಶಾಸಕ ಅಭಯ ಪಾಟೀಲ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಭಾಲ್ಕಿಯಲ್ಲೂ ನೂರಾರು ಅರ್ಜಿ

ಬೀದರ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಸಲ್ಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಭಾಲ್ಕಿ ಕ್ಷೇತ್ರದ ಬೂತ್ ಸಂಖ್ಯೆ 107ರಲ್ಲಿ 200, 114ರಲ್ಲಿ 198, 111ರಲ್ಲಿ 200, 115ರಲ್ಲಿ 230 ಹಾಗೂ 129ರಲ್ಲಿ 200 ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.

ಸೆ. 22ರಂದು ಈ ಅರ್ಜಿಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎನ್ನಲಾಗಿದೆ. “ಬೆಂಗಳೂರು ಕಚೇರಿಯಿಂದ ಬಂದಿದ್ದೇವೆ, ಇವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಬೇಕು” ಎಂದು ಕೆಲವರು ತಿಳಿಸಿದ್ದರು ಎಂಬ ಆರೋಪವನ್ನೂ ಸ್ಥಳೀಯ ಬೂತ್ ಮಟ್ಟದ ಅಧಿಕಾರಿಯೊಬ್ಬರು ಮಾಡಿದ್ದಾರೆ ಎಂದು ವರದಿಯಾಗಿದೆ.

ಭಾಲ್ಕಿಯಲ್ಲಿಯೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಆರೋಪ ಕೇಳಿಬಂದಿದ್ದು, ಈ ಆರೋಪಗಳ ಕುರಿತು ಅಧಿಕೃತ ತನಿಖೆಯಿಂದಷ್ಟೇ ಸ್ಪಷ್ಟತೆ ಸಿಗಬೇಕಾಗಿದೆ.

ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಹೆಸರು ಅಳಿಸುವಂತಿಲ್ಲ

ಫಾರಂ-7 ಸಲ್ಲಿಕೆಯಾದ ಮಾತ್ರಕ್ಕೆ ಮತದಾರರ ಹೆಸರು ಪಟ್ಟಿಯಿಂದ ಸ್ವಯಂಚಾಲಿತವಾಗಿ ಅಳಿಸುವುದಿಲ್ಲ. ಹೆಸರು ಕೈಬಿಡುವ ಪ್ರಸ್ತಾವದ ಕುರಿತು ಸಂಬಂಧಿಸಿದ ಮತದಾರರಿಗೆ ನೋಟಿಸ್ ನೀಡಿ, ಪರಿಶೀಲನೆ ನಡೆಸಿ, ನಿಗದಿತ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರವೇ ಚುನಾವಣಾ ನೋಂದಣಿ ಅಧಿಕಾರಿ ತೀರ್ಮಾನ ಕೈಗೊಳ್ಳಬೇಕಾಗಿದೆ.

ಬೆಳಗಾವಿ ಉತ್ತರ, ದಕ್ಷಿಣ ಹಾಗೂ ಭಾಲ್ಕಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲು ಪ್ರಯತ್ನಿಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಫಾರಂ-7 ಅರ್ಜಿಗಳನ್ನು ಯಾರು ಸಲ್ಲಿಸಿದ್ದಾರೆ, ಯಾವ ಆಧಾರದ ಮೇಲೆ ಸಲ್ಲಿಸಿದ್ದಾರೆ ಮತ್ತು ಅವುಗಳಲ್ಲಿ ಎಷ್ಟು ಅರ್ಜಿಗಳು ಮಾನ್ಯವಾಗಿವೆ ಎಂಬ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST