LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಜ್ಞಾನೇಶ ಬಂಧನಕ್ಕೆ ಆಗ್ರಹ

ಮೈಸೂರು, ಸೆ. 24 : (ಸಮದರ್ಶಿ ಸುದ್ದಿ) - ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ವಿರುದ್ಧ ಸುಪ್ರೀಂ ಕೋರ್ಟ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ಅವರನ್ನು ಹುದ್ದೆಯಿಂದ ತೆಗೆದು ಬಂಧಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದ್ದಾರೆ. ಇತರ ಹಲವು ವಿಪಕ್ಷ ನಾಯಕರೂ ಜ್ಞಾನೇಶ ಕುಮಾರ ಅವರನ್ನು ಹುದ್ದೆಯಿಂದ ತೆಗೆದು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ ಸಿಂಗ್ ಸಂಧು ಮತ್ತು ವಿವೇಕ ಜೋಶಿ ಹಲವು ಬಾರಿ ಆಕ್ಷೇಪ ದಾಖಲಿಸಿದ್ದಾರೆ ಎಂಬ ವರದಿ ಅತ್ಯಂತ ಗಂಭೀರವಾದದ್ದು ಎಂದರು. ಕಳೆದ 10 ತಿಂಗಳಲ್ಲಿ ಇಬ್ಬರು ಆಯುಕ್ತರು ಕನಿಷ್ಠ 14 ಬಾರಿ ಆಕ್ಷೇಪ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಚುನಾವಣಾ ಆಯೋಗವು ಆಂತರಿಕ ಚರ್ಚೆಯಲ್ಲಿ ವಿಭಿನ್ನ ಅಭಿಪ್ರಾಯಗಳು ಸಹಜವಾಗಿದ್ದು, ಕಳೆದ ಒಂದು ವರ್ಷದ ತನ್ನ ನಿರ್ಧಾರಗಳು ಸರ್ವಾನುಮತದಿಂದ ನಡೆದಿವೆ ಎಂದು ಸ್ಪಷ್ಟಪಡಿಸಿದೆ.

ಎಸ್‌ಐಆರ್‌ ಮೂಲಕ ಬಿಜೆಪಿಗೆ ಮತ ಹಾಕದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಲಕ್ಷ್ಮಣ ಆರೋಪಿಸಿದರು. ಮುಸ್ಲಿಮರು, ಕ್ರೈಸ್ತರು, ಒಬಿಸಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮತದಾರರನ್ನು ಗುರಿಯಾಗಿಸಲಾಗಿದೆ ಎಂದೂ ಅವರು ಆರೋಪಿಸಿದರು.

ಎಸ್‌ಐಆರ್‌ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು, ಎಸ್‌ಐಆರ್‌ ನಂತರ ಚುನಾವಣೆ ನಡೆದ ರಾಜ್ಯಗಳಲ್ಲಿ ಮರುಚುನಾವಣೆ ನಡೆಸಬೇಕು ಹಾಗೂ ಚುನಾವಣೆಗಳನ್ನು ಮತಪತ್ರದ ಮೂಲಕ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಚುನಾವಣಾ ಆಯುಕ್ತರ ನೇಮಕಾತಿಗೆ ಹಿಂದಿನ ಪದ್ಧತಿಯನ್ನು ಮರುಜಾರಿಗೊಳಿಸಬೇಕು ಎಂದ ಲಕ್ಷ್ಮಣ, ಚುನಾವಣಾ ವ್ಯವಸ್ಥೆಯ ಕುರಿತು ಜನರಲ್ಲಿ ವಿಶ್ವಾಸ ಉಳಿಸಿಕೊಳ್ಳಲು ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಅಗತ್ಯ ಎಂದು ಹೇಳಿದರು.

ಪತ್ರಿಕಾಗೋಷ್ಠಿಯ ವೇಳೆ ಜ್ಞಾನೇಶ ಕುಮಾರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಮುಂದಿನ ದಿನಗಳಲ್ಲಿ ಪ್ರತಿಭಟನೆಯ ಭಾಗವಾಗಿ ಶವಯಾತ್ರೆ ನಡೆಸುವುದಾಗಿಯೂ ಲಕ್ಷ್ಮಣ ತಿಳಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST