ಹೊಸದಿಲ್ಲಿ, ಸೆ. 24 : (ಸಮದರ್ಶಿ ಸುದ್ದಿ) - ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಚುನಾವಣಾ ಆಯೋಗದ ನಿರ್ಧಾರ ಪ್ರಕ್ರಿಯೆ ಕುರಿತು ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) 48 ಗಂಟೆಗಳ ಗಡುವು ನೀಡಿದೆ. ಗಡುವಿನೊಳಗೆ ರಾಜೀನಾಮೆ ನೀಡದಿದ್ದರೆ ದೇಶವ್ಯಾಪಿ ಪ್ರತಿಭಟನೆ ಆರಂಭಿಸಿ, ನಂತರ ದೆಹಲಿಯಲ್ಲಿ ‘ಜಂತರ್ ಮಂತರ್-2’ ಮಾದರಿಯ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.
ದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಸಿಜೆಪಿ ಸ್ಥಾಪಕ ಅಭಿಜೀತ ದೀಪ್ಕೆ, ವಕ್ತಾರರಾದ ಸೌರವ ದಾಸ್ ಮತ್ತು ಅಶುತೋಷ ರಂಕಾ ಅವರು ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಎಸ್‌ಐಆರ್ ಪ್ರಕ್ರಿಯೆ ಕುರಿತು ಹಲವು ಗಂಭೀರ ಆರೋಪಗಳನ್ನು ಮಾಡಿದರು.
ಚುನಾವಣಾ ಆಯುಕ್ತರಾದ ಸುಖಬೀರ ಸಿಂಗ್ ಸಂಧು ಮತ್ತು ವಿವೇಕ ಜೋಶಿ ಅವರು ಕಳೆದ 10 ತಿಂಗಳಲ್ಲಿ ಮತದಾರರ ಸೇರ್ಪಡೆ, ಹೆಸರು ಕೈಬಿಡುವಿಕೆ, ನಮೂನೆ-6ರ ಬದಲಾವಣೆ ಹಾಗೂ ಮತದಾರರ ದತ್ತಾಂಶದ ಕೇಂದ್ರೀಕರಣ ಸೇರಿದಂತೆ ವಿವಿಧ ವಿಷಯಗಳಲ್ಲಿ ಕನಿಷ್ಠ 14 ಬಾರಿ ಲಿಖಿತ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿಗಳ ಬೆನ್ನಲ್ಲೇ ಸಿಜೆಪಿ ಈ ಹೋರಾಟದ ಎಚ್ಚರಿಕೆ ನೀಡಿದೆ.
ಜ್ಞಾನೇಶ ಕುಮಾರ ಅವರನ್ನು “ದೇಶದ ಅತಿದೊಡ್ಡ ದೇಶದ್ರೋಹಿ” ಹಾಗೂ “ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆ” ಎಂದು ದೀಪ್ಕೆ ಆರೋಪಿಸಿದರು.
“ಪ್ರಜಾಪ್ರಭುತ್ವ ಎಂದರೆ ಜನರು ತಮಗೆ ಬೇಕಾದ ಸರ್ಕಾರವನ್ನು ಆಯ್ಕೆ ಮಾಡುವುದು. ಆದರೆ ಜ್ಞಾನೇಶ ಕುಮಾರ ಮುಖ್ಯ ಚುನಾವಣಾ ಆಯುಕ್ತರಾದ ನಂತರ ಯಾರು ಮತ ಚಲಾಯಿಸಬೇಕು, ಯಾರು ಮತ ಚಲಾಯಿಸಬಾರದು ಎಂಬುದನ್ನೇ ವ್ಯವಸ್ಥೆ ನಿರ್ಧರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಪ್ರಜಾಪ್ರಭುತ್ವವಲ್ಲ” ಎಂದು ಅವರು ಆರೋಪಿಸಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ದೇಶಾದ್ಯಂತ ಸುಮಾರು 13 ಕೋಟಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ವರದಿಯನ್ನು ಉಲ್ಲೇಖಿಸಿದ ದೀಪ್ಕೆ, ಈ ಪ್ರಕ್ರಿಯೆಯಿಂದ ಮತದಾನದ ಹಕ್ಕಿನ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದರು.
ಮೂರು ಪ್ರಮುಖ ಬೇಡಿಕೆ
ಜ್ಞಾನೇಶ ಕುಮಾರ ತಕ್ಷಣ ರಾಜೀನಾಮೆ ನೀಡಬೇಕು, ಅವರ ವಿರುದ್ಧ ಕ್ರಿಮಿನಲ್ ಕ್ರಮ ಆರಂಭಿಸಬೇಕು ಹಾಗೂ ಚುನಾವಣಾ ಆಯೋಗದಲ್ಲಿ ನಡೆದಿದೆ ಎನ್ನಲಾದ ಕಾನೂನುಬಾಹಿರ ಕ್ರಮಗಳನ್ನು ಯಾರ ಸೂಚನೆಯ ಮೇರೆಗೆ ಕೈಗೊಳ್ಳಲಾಯಿತು ಎಂಬುದನ್ನು ತನಿಖೆ ನಡೆಸಿ ಬಹಿರಂಗಪಡಿಸಬೇಕು ಎಂದು ಸಿಜೆಪಿ ಆಗ್ರಹಿಸಿದೆ.
ಮುಂಬರುವ ಚುನಾವಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು, ಎಸ್‌ಐಆರ್ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಮತದಾರರ ಪಟ್ಟಿಯನ್ನು ಜನವರಿ 2025ರ ಸ್ಥಿತಿಗೆ ಮರಳಿಸಬೇಕು ಎಂದು ಎರಡನೇ ಪ್ರಮುಖ ಬೇಡಿಕೆ ಮುಂದಿಟ್ಟಿದೆ. ಎಸ್‌ಐಆರ್‌ಗೆ ಸಂಬಂಧಿಸಿದ ಸಂಪೂರ್ಣ ನಿರ್ಧಾರ ಪ್ರಕ್ರಿಯೆಯನ್ನು ಪರಿಶೀಲಿಸಲು ಸಾರ್ವಜನಿಕ ವಿಶ್ವಾಸ ಹೊಂದಿರುವ ಸ್ವತಂತ್ರ ತನಿಖಾ ಆಯೋಗ ರಚಿಸಬೇಕು ಎಂದೂ ಒತ್ತಾಯಿಸಿದೆ.
ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಸುಪ್ರೀಂ ಕೋರ್ಟ ತನ್ನ ವಶಕ್ಕೆ ಪಡೆದು ಸುರಕ್ಷಿತವಾಗಿಡಬೇಕು. ಇದರಿಂದ ದಾಖಲೆಗಳು ನಾಶವಾಗುವ ಅಥವಾ ಕಾಣೆಯಾಗುವ ಸಾಧ್ಯತೆಯನ್ನು ತಪ್ಪಿಸಬಹುದು ಎಂದು ಸಿಜೆಪಿ ಹೇಳಿದೆ.
ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ 2023ರ ಕಾನೂನನ್ನು ರದ್ದುಪಡಿಸಿ, ನಾಗರಿಕ ಸಮಾಜದ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸುವ ಹೊಸ ಕಾನೂನು ರೂಪಿಸಬೇಕು ಎಂಬುದು ಮೂರನೇ ಬೇಡಿಕೆಯಾಗಿದೆ.
ನಮೂನೆ-6ಕ್ಕೂ ಆಕ್ಷೇಪ
ಹೊಸ ಮತದಾರರ ನೋಂದಣಿಗೆ ಬಳಸುವ ನಮೂನೆ-6ರಲ್ಲಿ ಮಾಡಲಾಗಿರುವ ಬದಲಾವಣೆಯನ್ನೂ ಸಿಜೆಪಿ ಪ್ರಶ್ನಿಸಿದೆ. ಹಿಂದಿನ ಎಸ್‌ಐಆರ್‌ನಲ್ಲಿ ಅರ್ಜಿದಾರ ಅಥವಾ ಅವರ ತಂದೆ-ತಾಯಿ, ಅಜ್ಜ-ಅಜ್ಜಿಯ ಹೆಸರು ಮತದಾರರ ಪಟ್ಟಿಯಲ್ಲಿತ್ತೇ ಎಂಬ ಮಾಹಿತಿಯನ್ನು ಕೇಳುವ ಅಂಶವನ್ನು ಸೇರಿಸಲಾಗಿದೆ.
ಇದು ಐಚ್ಛಿಕ ಎಂದು ಚುನಾವಣಾ ಆಯೋಗ ಹೇಳಿದ್ದರೂ, ಉತ್ತರಿಸದೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಸ್ಥಿತಿ ಇತ್ತು ಎಂದು ವರದಿಯಾಗಿದೆ. ಚುನಾವಣಾ ಆಯುಕ್ತರಾದ ವಿವೇಕ ಜೋಶಿ ಮತ್ತು ಸುಖಬೀರ ಸಿಂಗ್ ಸಂಧು ಕೂಡ ಕಾನೂನು ನಿಯಮಗಳಿಗೆ ತಿದ್ದುಪಡಿ ಮಾಡದೆ ನಮೂನೆ-6 ಬದಲಾಯಿಸಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದ್ದರು. ಸಂಧು ಅವರು ಈ ಬದಲಾವಣೆಯನ್ನು “ಅಧಿಕೃತವಲ್ಲದ ಮತ್ತು ಕಾನೂನುಬಾಹಿರ” ಎಂದು ದಾಖಲಿಸಿದ್ದರು.
ದೆಹಲಿಯಿಂದ ‘ರಿಮೋಟ್ ಕಂಟ್ರೋಲ್’ ಆರೋಪ
ಮತದಾರರ ಹೆಸರು ಸೇರ್ಪಡೆ ಮತ್ತು ಕೈಬಿಡುವ ಅಧಿಕಾರ ಕ್ಷೇತ್ರಮಟ್ಟದ ಚುನಾವಣಾ ನೋಂದಣಿ ಅಧಿಕಾರಿಗಳ ಬಳಿಯೇ ಇದೆ ಎಂಬ ಚುನಾವಣಾ ಆಯೋಗದ ನಿಲುವನ್ನೂ ಸಿಜೆಪಿ ಪ್ರಶ್ನಿಸಿದೆ.
ಮತದಾರರ ದತ್ತಾಂಶದ ಮೇಲಿನ ನಿಯಂತ್ರಣ ಕ್ರಮೇಣ ಕೇಂದ್ರೀಕರಣಗೊಳ್ಳುತ್ತಿದೆ ಎಂಬ ಆತಂಕವನ್ನು ಇಬ್ಬರು ಚುನಾವಣಾ ಆಯುಕ್ತರೂ ದಾಖಲಿಸಿದ್ದರು. ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡುವ ಅಧಿಕಾರ ಕಾನೂನಿನ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳ ಬಳಿಯೇ ಇರಬೇಕು ಎಂದು ಅವರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ “ಮತದಾರರ ಹೆಸರು ಸೇರ್ಪಡೆ ಮತ್ತು ಕೈಬಿಡುವಿಕೆಯ ಹಿಂದೆ ದೆಹಲಿಯ ರಿಮೋಟ್ ಕಂಟ್ರೋಲ್ ಇದೆ” ಎಂದು ದೀಪ್ಕೆ ಆರೋಪಿಸಿದರು.
ವಿಪಕ್ಷಗಳಿಗೆ ಸಂದೇಶ
ಚುನಾವಣಾ ಪ್ರಕ್ರಿಯೆ ನ್ಯಾಯಸಮ್ಮತವಾಗಿಲ್ಲ ಎಂದು ವಿರೋಧ ಪಕ್ಷಗಳು ನಂಬುತ್ತಿದ್ದರೆ, ಕೇವಲ ಆರೋಪ ಮಾಡುವುದರಿಂದ ಪ್ರಯೋಜನವಿಲ್ಲ; ಅವು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ದೀಪ್ಕೆ ಕರೆ ನೀಡಿದರು.
“ಇದು ಯಾವುದೇ ಒಂದು ರಾಜಕೀಯ ಪಕ್ಷದ ಪ್ರಶ್ನೆಯಲ್ಲ. ಇದು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕಿನ ಪ್ರಶ್ನೆ” ಎಂದು ಅವರು ಹೇಳಿದರು.
48 ಗಂಟೆಗಳೊಳಗೆ ಜ್ಞಾನೇಶ ಕುಮಾರ ರಾಜೀನಾಮೆ ನೀಡದಿದ್ದರೆ ಮೊದಲು ದೇಶವ್ಯಾಪಿ ಹೋರಾಟ ಆರಂಭಿಸಿ, ನಂತರ ದೆಹಲಿಯತ್ತ ತೆರಳುವುದಾಗಿ ಸಿಜೆಪಿ ಎಚ್ಚರಿಸಿದೆ.