LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಸತೀಶ ಜಾರಕಿಹೊಳಿ ಮೇಲಿನ ಇ.ಡಿ ಶೋಧ ರಾಜಕೀಯ ಪ್ರೇರಿತ: ಡಿ.ಕೆ.ಶಿವಕುಮಾರ

ಬೆಂಗಳೂರು, ಸೆ. 9 : ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ಶೋಧ ಕಾರ್ಯಾಚರಣೆ ರಾಜಕೀಯ ಪ್ರೇರಿತವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆರೋಪಿಸಿದ್ದಾರೆ.

ರಾಜಕೀಯ ಲಾಭಕ್ಕಾಗಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಬುಧವಾರ ಶೋಧ ನಡೆದಿರುವುದು ವರದಿಯಾಗಿದೆ.

ಸದಾಶಿವನಗರದ ನಿವಾಸದ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ಹಿರಿಯ ಸಚಿವರಾಗಿದ್ದು, ರಾಜಕಾರಣದ ಜತೆಗೆ ಉದ್ಯಮ ಮತ್ತು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅವರು ಕಾನೂನಿನ ಚೌಕಟ್ಟಿನಲ್ಲಿಯೇ ವ್ಯವಹಾರ ನಡೆಸುತ್ತಿದ್ದಾರೆ. ಜಾರಿ ನಿರ್ದೇಶನಾಲಯ ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲಿದ್ದಾರೆ. ಆದ್ದರಿಂದ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.

ಸತೀಶ್ ಜಾರಕಿಹೊಳಿ ಅವರ ಸಂಬಂಧಿಕರ ವ್ಯವಹಾರಗಳ ಕುರಿತು ತಮಗೆ ಮಾಹಿತಿ ಇಲ್ಲ. ಆದರೆ ಜಾರಕಿಹೊಳಿ ಪ್ರಾಮಾಣಿಕ ರಾಜಕಾರಣಿಯಾಗಿದ್ದು, ಅವರು ಯಾವುದೇ ತಪ್ಪು ಮಾಡಿಲ್ಲ ಎಂಬ ವಿಶ್ವಾಸ ತಮಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸುತ್ತಿರುವ ಸಂದರ್ಭದಲ್ಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕಾರ್ಯ ನಡೆಯುತ್ತಿದೆ. ಇದೇ ಸಮಯದಲ್ಲಿ ಇಂತಹ ತನಿಖಾ ಕ್ರಮಗಳನ್ನು ಕೈಗೊಳ್ಳುತ್ತಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ. ಸರ್ಕಾರ ಮತ್ತು ಪಕ್ಷವನ್ನು ಎಲ್ಲ ದಿಕ್ಕುಗಳಿಂದಲೂ ಗುರಿಯಾಗಿಸಲಾಗುತ್ತಿದೆ. ಸರ್ಕಾರದ ಸಾಧನೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು.

ಬೆಳೆಯುತ್ತಿರುವ ನಾಯಕನನ್ನು ಕುಗ್ಗಿಸುವ ಯತ್ನ

ಸತೀಶ ಜಾರಕಿಹೊಳಿ ಪ್ರಬಲ ನಾಯಕರಾಗಿ ಬೆಳೆಯುತ್ತಿರುವುದನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ರಾಜಕೀಯವಾಗಿ ಕುಗ್ಗಿಸಲು ಹಾಗೂ ತೊಂದರೆ ನೀಡಲು ಪ್ರಯತ್ನಿಸಲಾಗುತ್ತಿದೆ. ಆದರೆ ಇಂತಹ ಪ್ರಯತ್ನಗಳು ಅಂತಿಮವಾಗಿ ಅವರಿಗೇ ತಿರುಗುಬಾಣವಾಗಲಿವೆ ಎಂದು ಶಿವಕುಮಾರ ಹೇಳಿದರು. ತಮ್ಮ ಮೇಲೆಯೂ ಹಿಂದೆ ದಾಳಿ ನಡೆಸಿ ಬಂಧಿಸಲಾಗಿತ್ತು. ಆದರೆ ಇಂದು ತಾವು ರಾಜ್ಯದ ಮುಖ್ಯಮಂತ್ರಿಯಾಗಿರುವುದನ್ನು ಅವರು ಉಲ್ಲೇಖಿಸಿದರು.

ನಾಗೇಂದ್ರ ಅವರ ವಿರುದ್ಧ ನಡೆದ ತನಿಖೆಯನ್ನೂ ಪ್ರಸ್ತಾಪಿಸಿದ ಅವರು, ಆ ಪ್ರಕರಣದಲ್ಲಿ ರಾಜ್ಯ ಸರ್ಕಾರವೇ ತನಿಖೆಗೆ ಮುಂದಾಗಿತ್ತು. ₹84 ಕೋಟಿ ಅಕ್ರಮವಾಗಿ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದ ಬಳಿಕ ಸಿಐಡಿ ಹಾಗೂ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿ ₹79 ಕೋಟಿ ವಾಪಸ್ ಪಡೆದಿದ್ದು, ಇನ್ನೂ ₹5 ಕೋಟಿ ಮಾತ್ರ ಬಾಕಿ ಉಳಿದಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ ಬಳಿಕವೂ ವಿಷಯವನ್ನು ರಾಜಕೀಯಗೊಳಿಸಲಾಗುತ್ತಿದೆ. ಈಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಲಾಗುತ್ತಿದೆ. ಕೆಪಿಎಸ್‌ಸಿ ವಿಚಾರದಲ್ಲಿಯೂ ತನಿಖೆ ನಡೆಯಲಿ ಎಂದು ಶಿವಕುಮಾರ ಹೇಳಿದರು.

ಭಾರತದಲ್ಲಿರುವವರು ಕಾನೂನಿನ ನಿಯಮಗಳನ್ನು ಪಾಲಿಸಿ ವಿದೇಶಗಳಲ್ಲಿ ಹೂಡಿಕೆ ಅಥವಾ ವ್ಯಾಪಾರ ನಡೆಸಲು ಅವಕಾಶವಿದೆ. ಕುಟುಂಬದ ಸದಸ್ಯರು ವಿದೇಶದಲ್ಲಿ ವ್ಯವಹಾರ ನಡೆಸುವುದೇ ತಪ್ಪಲ್ಲ. ತಮ್ಮ ಕುಟುಂಬದ ಸದಸ್ಯರು ವಿದೇಶದಲ್ಲಿ ವ್ಯವಹಾರ ಮಾಡುವುದನ್ನು ತಾವು ನಿರ್ಬಂಧಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಇಂತಹ ಕ್ರಮಗಳಿಂದ ಉದ್ಯಮ ವಲಯದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.

ವಿರೋಧ ಪಕ್ಷಗಳು ಎಷ್ಟೇ ಪ್ರತಿಭಟನೆ, ಪತ್ರಿಕಾಗೋಷ್ಠಿ ಅಥವಾ ರಾಜಕೀಯ ಚಟುವಟಿಕೆ ನಡೆಸಿದರೂ ಹೆದರುವ ಪ್ರಶ್ನೆಯೇ ಇಲ್ಲ. ವಿರೋಧ ಹೆಚ್ಚಾದಷ್ಟೂ ಕಾಂಗ್ರೆಸ್ ನಾಯಕರು ಹೆಚ್ಚು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಾರೆ ಎಂದರು.

ಕೆಪಿಎಸ್‌ಸಿ ಪ್ರಕರಣದಲ್ಲಿ ತಪ್ಪು ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಾನೂನಿನ ಚೌಕಟ್ಟು ಮೀರಿ ಯಾರಿಗೂ ನೆರವು ನೀಡುವುದಿಲ್ಲ. ಕರ್ನಾಟಕ ಪ್ರಗತಿಪರ ರಾಜ್ಯವಾಗಿದ್ದು, ದೇಶ ಮತ್ತು ರಾಜ್ಯದ ಹಿತಾಸಕ್ತಿಯೇ ಸರ್ಕಾರಕ್ಕೆ ಮುಖ್ಯವಾಗಿದೆ ಎಂದು ಶಿವಕುಮಾರ ತಿಳಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಸತೀಶ ಜಾರಕಿಹೊಳಿ ಸುತ್ತ ಇಡಿ ಬಲೆಬಳ್ಳಾರಿ ಚಲೋ ಪಾದಯಾತ್ರೆ ನಾಳೆ ಮುಕ್ತಾಯ, ಹೋರಾಟ ಮುಂದುವರಿಯಲಿದೆ: ವಿಜಯೇಂದ್ರ5 ರಾಜ್ಯಗಳ ಚುನಾವಣೆ ವೇಳೆ ಬಿಜೆಪಿಗೆ ₹1,473 ಕೋಟಿ ದೇಣಿಗೆ!ಅಮೆರಿಕದ ಮಾನವರಹಿತ ಜಲಾಂತರ್ಗಾಮಿ ವಶಕ್ಕೆ ಪಡೆದ ಇರಾನ್ಸೌದಿ ಮೇಲೆ ಕ್ಷಿಪಣಿ ದಾಳಿ; ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಸಹಿಸುವುದಿಲ್ಲ ಎಂದ ಭಾರತಇನ್ನಷ್ಟು ನಾಯಕರ ಮೇಲೆ ದಾಳಿ ಸಾಧ್ಯತೆ, ಎಚ್ಚರಿಕೆಯಿಂದಿರಿ: ಮುಖ್ಯಮಂತ್ರಿಜಾತಿವಾದ ಕೊನೆಗೊಂಡರೆ ಮೀಸಲಾತಿಯ ಅಗತ್ಯವೂ ಇರುವುದಿಲ್ಲ: ಕೇಂದ್ರ ಸಚಿವ ಅಠವಳೆವಿದ್ಯಾರ್ಥಿಗೆ ನೋಟಿಸ್ ನೀಡಲು ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ?: ಸುಪ್ರೀಂ ಕೋರ್ಟ ಕಿಡಿಭಾರತ ರತ್ನ ಸಿ.ಎನ್.ಆರ್. ರಾವ್‌ಗೆ ನೋಟಿಸ್ : ಚುನಾವಣಾಧಿಕಾರಿ ಸ್ಪಷ್ಟನೆಸತೀಶ ಜಾರಕಿಹೊಳಿ ಮೇಲಿನ ಇ.ಡಿ ಶೋಧ ರಾಜಕೀಯ ಪ್ರೇರಿತ: ಡಿ.ಕೆ.ಶಿವಕುಮಾರ