ಬೆಂಗಳೂರು, ನ. 25: ‘ಬಸವ ಮಂಟಪ’ ಕೃತಿಯಲ್ಲಿ ಬಸವಣ್ಣನವರನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ಕೃತಿಯ ಲೇಖಕ ರವಿ ಹಂಜ್ ಅಲಿಯಾಸ್ ರವಿ ಹಂಜಗಿಮಠ ಹಾಗೂ ಪ್ರಕಾಶಕ, ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಗೆ ಬೆಂಗಳೂರಿನ 56ನೇ ಸೆಷನ್ಸ್ ಕೋರ್ಟ ಬುಧವಾರ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಕುರಿತು ಕೃತಿಯಲ್ಲಿ ಬಳಸಿರುವ ಪದಗಳು ಹಾಗೂ ಸಂದರ್ಶನವೊಂದರಲ್ಲಿ ರವಿ ಹಂಜ್ ವ್ಯಕ್ತಪಡಿಸಿದ್ದ ಅಭಿಪ್ರಾಯಗಳಿಗೆ ಬಸವಪರ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಲೇಖಕ ಹಾಗೂ ಪ್ರಕಾಶಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಂಧನದ ಭೀತಿ ಎದುರಿಸುತ್ತಿದ್ದ ಇಬ್ಬರೂ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ ಮೆಟ್ಟಿಲೇರಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ವಿವಾದ ತೀವ್ರಗೊಂಡ ಬೆನ್ನಲ್ಲೇ ರವಿ ಹಂಜ್ ತಮ್ಮ ಹೇಳಿಕೆಗಳ ಕುರಿತು ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದರು.
ಕೃತಿಯ ಮುದ್ರಣ, ಪ್ರಸಾರಕ್ಕೆ ನಿರ್ಬಂಧ
ಕೃತಿಯನ್ನು ವಿರೋಧಿಸಿ ರಾಜ್ಯದ ವಿವಿಧೆಡೆ ಬಸವಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಶಿವಮೊಗ್ಗದಲ್ಲಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಬಸವಭಕ್ತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಲೇಖಕ ಮತ್ತು ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು.
ವಿವಾದಿತ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿತ್ತು. ಅದರಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಕೃತಿಯ ಮುದ್ರಣ, ಪ್ರಕಟಣೆ ಹಾಗೂ ಡಿಜಿಟಲ್ ಪ್ರಸಾರಕ್ಕೂ ನಿರ್ಬಂಧ ವಿಧಿಸಿದೆ.