ಧಾರವಾಡ, ನ. 25: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಸೇರಿದಂತೆ ಇತರರಿಗೆ ಹೈಕೋರ್ಟ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ ರದ್ದುಗೊಳಿಸಿದ್ದು, 15 ದಿನಗಳೊಳಗೆ ಶರಣಾಗುವಂತೆ ಆದೇಶಿಸಿದೆ.
ಸುಪ್ರೀಂ ಕೋರ್ಟ ಆದೇಶದ ವಿಷಯ ತಿಳಿಯುತ್ತಿದ್ದಂತೆ ಡೇರಿಯಿಂದ ಮನೆಗೆ ಆಗಮಿಸಿದ ವಿನಯ ಕುಲಕರ್ಣಿ, ಬಳಿಕ ಬೆಂಗಳೂರಿಗೆ ತೆರಳಿದರು. ಮನೆಯ ಆವರಣದಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಹಾಗೂ ಆಪ್ತರ ಎದುರು ಭಾವುಕರಾದ ಅವರು, ಕೈಮುಗಿದು ನಿರ್ಗಮಿಸಿದರು. ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಸುಪ್ರೀಂ ಕೋರ್ಟ ಆದೇಶ ಸಂತಸ ತಂದಿದ್ದು, ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಮೃತ ಯೋಗೀಶ ಗೌಡ ಅವರ ಸಹೋದರ ಗುರುನಾಥ ಗೌಡ ತಿಳಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ ವಿಧಿಸಿದ್ದ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ ಹೈಕೋರ್ಟ ಜಾಮೀನು ಮಂಜೂರು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ ಮೆಟ್ಟಿಲೇರಿದ್ದೆವು. ಜಾಮೀನು ರದ್ದಾಗಿರುವುದು ನಮ್ಮ ಹೋರಾಟಕ್ಕೆ ದೊರೆತ ಗೆಲುವು. ಆದರೆ ಇದು ಅಂತಿಮ ಗೆಲುವಲ್ಲ. ಹೈಕೋರ್ಟನಲ್ಲಿ ಕಾನೂನು ಹೋರಾಟವನ್ನು ಮತ್ತಷ್ಟು ಬಲವಾಗಿ ಮುಂದುವರಿಸುತ್ತೇವೆ ಎಂದು ಹೋರಾಟಗಾರ ಬಸವರಾಜ ಕೊರವರ ತಿಳಿಸಿದ್ದಾರೆ.