LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಕರಾವಳಿ-ಮಲೆನಾಡು ಪ್ರವಾಸೋದ್ಯಮಕ್ಕೆ ₹500 ಕೋಟಿ

ಬೆಂಗಳೂರು, ಸೆ. 19 : ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ದೇಶದ ಪ್ರಮುಖ ಪ್ರವಾಸೋದ್ಯಮ ಹೂಡಿಕೆ ವಲಯಗಳಾಗಿ ರೂಪಿಸುವ ಉದ್ದೇಶದಿಂದ ರಾಜ್ಯ ಸರಕಾರ ‘ಕರಾವಳಿ-ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026’ ಜಾರಿಗೆ ಮುಂದಾಗಿದೆ. ಹೊಸ ನೀತಿಯಡಿ ₹500 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದ್ದು, ಖಾಸಗಿ ಹೂಡಿಕೆ ಆಕರ್ಷಿಸಲು ವಿಶೇಷ ಪ್ರೋತ್ಸಾಹ, ಸರಳ ಅನುಮೋದನಾ ವ್ಯವಸ್ಥೆ ಹಾಗೂ ಹಲವು ಹಣಕಾಸು ಮತ್ತು ಆಡಳಿತಾತ್ಮಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನೀತಿಗೆ ಅನುಮೋದನೆ ನೀಡಲಾಗಿದೆ. ಸುಮಾರು 320 ಕಿ.ಮೀ. ಉದ್ದದ ರಾಜ್ಯದ ಕರಾವಳಿ ಪ್ರದೇಶದ ಜೊತೆಗೆ ಮಲೆನಾಡಿನ ಪ್ರವಾಸಿ ತಾಣಗಳ ಸಾಮರ್ಥ್ಯವನ್ನು ಸಮಗ್ರವಾಗಿ ಬಳಸಿಕೊಂಡು ಪ್ರವಾಸೋದ್ಯಮವನ್ನು ಪ್ರಮುಖ ಆರ್ಥಿಕ ಚಟುವಟಿಕೆಯನ್ನಾಗಿ ಬೆಳೆಸುವುದು ನೀತಿಯ ಉದ್ದೇಶವಾಗಿದೆ.

ಪ್ರವಾಸೋದ್ಯಮ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ ಹಾಗೂ ಮೂಲಸೌಕರ್ಯ ಸ್ಥಾನಮಾನ ನೀಡಲು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಆಡಳಿತಾತ್ಮಕ ಅಡೆತಡೆಗಳನ್ನು ಕಡಿಮೆ ಮಾಡಿ, ಪ್ರವಾಸೋದ್ಯಮ ಯೋಜನೆಗಳಿಗೆ ಹೆಚ್ಚಿನ ಖಾಸಗಿ ಬಂಡವಾಳ ಸೆಳೆಯಲು ಸರಕಾರ ಉದ್ದೇಶಿಸಿದೆ.

ಹೂಡಿಕೆದಾರರು ವಿವಿಧ ಇಲಾಖೆಗಳ ಅನುಮತಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಪ್ರವಾಸೋದ್ಯಮ ಹೂಡಿಕೆ ಸೌಲಭ್ಯ ಘಟಕ ಹಾಗೂ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಯೋಜನೆಯ ಪ್ರಸ್ತಾವನೆಯಿಂದ ಅನುಮೋದನೆ ಮತ್ತು ಅನುಷ್ಠಾನದವರೆಗೆ ಮಾರ್ಗದರ್ಶನ, ವಿವಿಧ ಇಲಾಖೆಗಳ ನಡುವಿನ ಸಮನ್ವಯ ಹಾಗೂ ಸಮಸ್ಯೆಗಳ ಪರಿಹಾರವನ್ನು ಒಂದೇ ವ್ಯವಸ್ಥೆಯಡಿ ಒದಗಿಸಲಾಗುತ್ತದೆ.

ಭೂಮಿ ಒಗ್ಗೂಡಿಸುವಿಕೆ ಕಾರ್ಯಕ್ರಮ, ಭೂ ಗುತ್ತಿಗೆ ನೀತಿ, ಭೂ ಪರಿವರ್ತನೆ ನಿಯಮಗಳ ಸರಳೀಕರಣ ಹಾಗೂ ಭೂ ಪರಿವರ್ತನೆ ಶುಲ್ಕ ಮರುಪಾವತಿ ಸೇರಿದಂತೆ ಹೂಡಿಕೆದಾರರಿಗೆ ಹಲವು ಸೌಲಭ್ಯಗಳನ್ನು ಪ್ರಸ್ತಾಪಿಸಲಾಗಿದೆ. ಆದ್ಯತೆಯ ಪ್ರವಾಸೋದ್ಯಮ ಯೋಜನೆಗಳಿಗೆ ಭೂ ಬಳಕೆ ಬದಲಾವಣೆ ಪ್ರಕ್ರಿಯೆಯನ್ನು ಸರಳಗೊಳಿಸುವುದು ಹಾಗೂ ಗುರುತಿಸಲಾದ ಪ್ರವಾಸೋದ್ಯಮ ಹೂಡಿಕೆ ಉತ್ತೇಜನ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವವೂ ನೀತಿಯಲ್ಲಿದೆ.

ಎಫ್‌ಎಆರ್‌/ಎಫ್‌ಎಸ್‌ಐ ನಿಯಮಗಳಲ್ಲಿ ಸಡಿಲಿಕೆ, ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು, ಸಾರ್ವಜನಿಕ ಮೂಲಸೌಕರ್ಯದಲ್ಲಿ ಖಾಸಗಿ ವಲಯದ ಸಹಭಾಗಿತ್ವ ಹಾಗೂ ಯೋಜನೆಗಳ ಕಾರ್ಯಸಾಧ್ಯತೆಗಾಗಿ ಹಣಕಾಸು ನೆರವಿಗೂ ಅವಕಾಶ ಕಲ್ಪಿಸಲಾಗಿದೆ. ನಿರ್ದಿಷ್ಟ ಯೋಜನೆಗಳಿಗೆ ಬಡ್ಡಿ ಸಹಾಯಧನ ಮತ್ತು ಹೆಚ್ಚುವರಿ ಬಂಡವಾಳ ಹೂಡಿಕೆ ಸಹಾಯಧನ ನೀಡುವುದರ ಜೊತೆಗೆ ವೈದ್ಯಕೀಯ ಹಾಗೂ ಶೈಕ್ಷಣಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗುತ್ತದೆ.

ಹೊಸ ನೀತಿಗೆ ₹500 ಕೋಟಿ ಅನುದಾನ ಅನುಮೋದಿಸಲಾಗಿದೆ. ಸಂಬಂಧಿತ ಇಲಾಖೆಗಳು ಮತ್ತು ಸಂಸ್ಥೆಗಳ ಅನುದಾನ, ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳು, ಸಿಎಸ್‌ಆರ್‌ ನಿಧಿ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಿಸಲಾಗುತ್ತದೆ. ಸರಕಾರದ ಈ ಹೂಡಿಕೆಯನ್ನು ಆರಂಭಿಕ ಬಂಡವಾಳವಾಗಿ ಬಳಸಿಕೊಂಡು ಹೆಚ್ಚಿನ ಪ್ರಮಾಣದ ಖಾಸಗಿ ಹೂಡಿಕೆಯನ್ನು ಕರಾವಳಿ-ಮಲೆನಾಡು ಪ್ರವಾಸೋದ್ಯಮದತ್ತ ಸೆಳೆಯುವುದು ಪ್ರಮುಖ ಗುರಿಯಾಗಿದೆ.

ನೀತಿಯಡಿ ಒಂಬತ್ತು ಪ್ರವಾಸೋದ್ಯಮ ವಲಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಹಲವು ಕರಾವಳಿ ತಾಣಗಳು ಹಾಗೂ ದ್ವೀಪಗಳ ಪ್ರವಾಸೋದ್ಯಮ ಅಭಿವೃದ್ಧಿಗೂ ಸಂಪುಟ ಪ್ರತ್ಯೇಕ ಯೋಜನೆಗಳಿಗೆ ಅನುಮೋದನೆ ನೀಡಿದೆ.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ರಾಮ್ ಪ್ರಸಾತ್ ಮನೋಹರ್ ಅವರ ಪ್ರಕಾರ, ಹೂಡಿಕೆದಾರರಿಗೆ ಯೋಜನೆಯ ಆರಂಭದಿಂದ ಅನುಮೋದನೆಯವರೆಗೆ ಒಂದೇ ವೇದಿಕೆಯಲ್ಲಿ ನೆರವು ನೀಡುವುದು ಹಾಗೂ ನೀತಿಯ ಪ್ರೋತ್ಸಾಹಕ ಕ್ರಮಗಳನ್ನು ಸ್ಪಷ್ಟ ಮತ್ತು ಸಮಯಬದ್ಧವಾಗಿ ಅನುಷ್ಠಾನಗೊಳಿಸುವ ವ್ಯವಸ್ಥೆ ರೂಪಿಸುವುದು ಸರಕಾರದ ಉದ್ದೇಶವಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರಾವಳಿ-ಮಲೆನಾಡು ಪ್ರವಾಸೋದ್ಯಮಕ್ಕೆ ₹500 ಕೋಟಿಬೆಳಗ್ಗೆ ಕಣದಿಂದ ಹಿಂದೆ ಸರಿದ ಅಭ್ಯರ್ಥಿ, ಮಧ್ಯಾಹ್ನ ಯೂ-ಟರ್ನಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ : ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ ಮೆಟ್ಟಿಲೇರಿದ ಮಮತಾಹಾಲಿನ ಖರೀದಿ ದರ ಹೆಚ್ಚಳ ಕುರಿತ ರೈತರ ಒತ್ತಾಯಕ್ಕೆ ಶೀಘ್ರ ತೀರ್ಮಾನಅನುದಾನ ತಂದ ಮಾಜಿ ಶಾಸಕನಿಗೇ ಉದ್ಘಾಟನೆಯ ಗೌರವಶಾಲೆಯ ಮೆಟ್ಟಿಲಿನಲ್ಲಿ ಕಾಲುಜಾರಿ ಬಿದ್ದು 4ನೇ ತರಗತಿ ವಿದ್ಯಾರ್ಥಿನಿ ಸಾವುಹಾವೇರಿ ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ₹3.43 ಕೋಟಿ ದಂಡಕನಿಷ್ಠ ವೇತನ ಜಾರಿಗೆ ತಡೆ ನೀಡಿದ್ದ ಸುತ್ತೋಲೆಗಳಿಗೆ ಹೈಕೋರ್ಟ ತಡೆಅನಾರೋಗ್ಯದ ಹಿನ್ನೆಲೆ ಕೆಎಲ್‌ಇ ಆಸ್ಪತ್ರೆ ಉದ್ಘಾಟನೆಗೆ ಅಮಿತ ಶಾ ಗೈರುಅವರಾದಿ ಗ್ರಾಪಂ ಕಚೇರಿಯಲ್ಲಿ ತಂದೆ-ಮಗಳ ಹತ್ಯೆ: ಮೂವರು ಆರೋಪಿಗಳ ಬಂಧನ