ಲಖನೌ, ನ. 11: ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತದೆ ಎಂಬ ಟೀಕೆಗಳನ್ನು ತಳ್ಳಿಹಾಕಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ‘‘ಮಾಲಿನ್ಯ ಹೆಚ್ಚಾದರೆ ಏನಾಯಿತು? ಅದು ತಾನಾಗಿಯೇ ಕಡಿಮೆಯಾಗುತ್ತದೆ. ಅದರ ಬಗ್ಗೆ ಯಾಕೆ ಚಿಂತಿಸಬೇಕು?’’ ಎಂದು ಪ್ರಶ್ನಿಸುವ ಮೂಲಕ ಪಟಾಕಿ ಸಿಡಿಸುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಲಖನೌದಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಮೂಲಕ ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸಿದವರ ವಿರುದ್ಧ ಧ್ವನಿ ಎತ್ತದವರು, ಜನರು ಒಂದು ದಿನ ಪಟಾಕಿ ಸಿಡಿಸಿದರೆ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ ಎಂದು ಟೀಕಿಸಿದರು.
‘‘ದೀಪಾವಳಿಯಿಂದಾಗಿ ಮಾಲಿನ್ಯ ಹೆಚ್ಚಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಮಾಲಿನ್ಯ ಹೆಚ್ಚಾದರೆ ಏನಾಯಿತು? ಅದು ತಾನಾಗಿಯೇ ಕಡಿಮೆಯಾಗುತ್ತದೆ. ತಮ್ಮ ಭ್ರಷ್ಟ ಕೃತ್ಯಗಳಿಂದ ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸಿದವರನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ, ಜನರು ಒಂದು ದಿನ ಪಟಾಕಿ ಸಿಡಿಸಿ ಸಂಭ್ರಮಿಸಿದರೆ ಮಾಲಿನ್ಯವೇ ದೊಡ್ಡ ಸಮಸ್ಯೆಯಾಗಿ ಕಾಣಿಸುತ್ತದೆ’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಪ್ರದೇಶ ಸರ್ಕಾರವು ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದಕ್ಕೆ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ಜನರು ಉತ್ಸಾಹದಿಂದ ಹಬ್ಬ ಆಚರಿಸಿರುವುದು ಸರಿಯಾದ ಕ್ರಮ ಎಂದು ಯೋಗಿ ಸಮರ್ಥಿಸಿಕೊಂಡರು.
2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ಉತ್ತರ ಪ್ರದೇಶದಲ್ಲಿ ಹೋಳಿ, ದೀಪಾವಳಿ, ವಿಜಯದಶಮಿ, ಈದ್ ಹಾಗೂ ಕ್ರಿಸ್‌ಮಸ್ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಕೋಮು ಗಲಭೆಗಳು ನಡೆಯುತ್ತಿದ್ದವು. ಹಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗುತ್ತಿತ್ತು ಎಂದು ಅವರು ಆರೋಪಿಸಿದರು.
‘‘ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆ ನಡೆದಿಲ್ಲ. ಎಲ್ಲಿಯೂ ಕರ್ಫ್ಯೂ ಜಾರಿಯಾಗಿಲ್ಲ. ಜನರು ಶಾಂತಿಯುತ ವಾತಾವರಣದಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದಾರೆ’’ ಎಂದು ಪ್ರತಿಪಾದಿಸಿದರು.
ಪಟಾಕಿಗಳಿಂದ ಉಂಟಾಗುವ ವಾಯುಮಾಲಿನ್ಯ ಹಾಗೂ ಅದರ ಆರೋಗ್ಯ ಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಯೋಗಿ ಆದಿತ್ಯನಾಥ ಅವರ ಈ ಹೇಳಿಕೆ ಗಮನ ಸೆಳೆದಿದೆ. ಪಟಾಕಿಗಳ ಹೊಗೆಯಲ್ಲಿರುವ ಸೂಕ್ಷ್ಮ ಕಣಗಳು ಉಸಿರಾಟದ ಸಮಸ್ಯೆಗಳನ್ನು ಉಲ್ಬಣಗೊಳಿಸುವ ಅಪಾಯವಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.