ಬೆಂಗಳೂರು, ನ. 12: ಮೆಟ್ರೊ ಯೋಜನೆಗೆ ಕರ್ನಾಟಕ ಸರ್ಕಾರವೇ ಹೆಚ್ಚಿನ ಹಣ ವೆಚ್ಚ ಮಾಡುತ್ತಿದ್ದರೂ, ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವನಿಗೇ ಮಾತನಾಡಲು ಅವಕಾಶ ನಿರಾಕರಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹೊರಹಾಕಿರುವ ಅವರು, ರಾಜ್ಯಕ್ಕೆ ನ್ಯಾಯಯುತ ಪಾಲು ನೀಡುವಂತೆ ಒತ್ತಾಯಿಸಿದ್ದಕ್ಕೆ ಪ್ರತಿಯಾಗಿ ತಮ್ಮ ಭಾಷಣವನ್ನು ಕಾರ್ಯಕ್ರಮದಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ.
ಮೆಟ್ರೊ ಉದ್ಘಾಟನಾ ಸಮಾರಂಭದ ಕರಡು ಕಾರ್ಯಕ್ರಮ ಪಟ್ಟಿಯಲ್ಲಿ ತಮಗೆ ಮಾತನಾಡಲು ಅವಕಾಶ ನಿಗದಿಪಡಿಸಲಾಗಿತ್ತು. ಆದರೆ, ಬುಧವಾರ ರಾತ್ರಿ ಬಂದ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರನ್ನು ಭಾಷಣಕಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಮೆಟ್ರೊ ಯೋಜನೆಗೆ ಅಗತ್ಯವಿರುವ ಬಹುತೇಕ ಬಂಡವಾಳ ಹಾಗೂ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸುತ್ತಿದೆ. ಇಷ್ಟಾದರೂ ರಾಜ್ಯದ ನ್ಯಾಯಯುತ ಪಾಲಿಗಾಗಿ ಧ್ವನಿ ಎತ್ತಿದರೆ ಈ ರೀತಿಯ ಶಿಕ್ಷೆ ನೀಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
‘ಕರ್ನಾಟಕಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ ನನ್ನ ಭಾಷಣಕ್ಕೆ ಕತ್ತರಿ. ಬೆಂಗಳೂರು ಅಭಿವೃದ್ಧಿ ಸಚಿವನಿಗೆ ಮೆಟ್ರೊ ಉದ್ಘಾಟನೆಯಲ್ಲಿ ಮಾತನಾಡಲು ಅವಕಾಶವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಭಾಷಣವನ್ನು ತಡೆಯಬಹುದೇ ಹೊರತು ಬೆಂಗಳೂರಿನ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ರಾಜ್ಯದ ಹಿತಾಸಕ್ತಿ ಹಾಗೂ ಬೆಂಗಳೂರಿನ ಅಭಿವೃದ್ಧಿಗಾಗಿ ಇನ್ನಷ್ಟು ಪರಿಶ್ರಮದಿಂದ ಕೆಲಸ ಮಾಡುವುದಾಗಿ ಕೃಷ್ಣಬೈರೇಗೌಡ ಹೇಳಿದ್ದಾರೆ.
ಮೆಟ್ರೊ ಯೋಜನೆಯ ವೆಚ್ಚದಲ್ಲಿ ರಾಜ್ಯದ ಪಾಲು ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ನೀಡಲಾಗಿರುವ ಪ್ರಾತಿನಿಧ್ಯದ ಕುರಿತು ಸಚಿವರ ಆಕ್ಷೇಪ ಹೊಸ ಚರ್ಚೆಗೆ ಕಾರಣವಾಗಿದೆ.