LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿ ಸುವರ್ಣಸೌಧ ನಿರ್ವಹಣೆಗೆ ಶಾಶ್ವತ ಯೋಜನೆ : ಯು.ಟಿ.ಖಾದರ್

ಬೆಳಗಾವಿ, ನ.7 : ಚಳಿಗಾಲದ ಅಧಿವೇಶನದಲ್ಲಿ ಮಾತ್ರ ಅಲ್ಲದೇ ವರ್ಷವಿಡೀ ಸುವರ್ಣ ಸೌಧದ ಉತ್ತಮ ನಿರ್ವಹಣೆಗೆ ಸಂಬಂಧಿಸಿದಂತೆ‌ ಶಾಶ್ವತ ಯೋಜನೆ ರೂಪಿಸಲಾಗುವುದು ಎಂದು ವಿಧಾನಸಭೆ ಸಭಾಪತಿ ಯು.ಟಿ.ಖಾದರ್ ಹೇಳಿದರು.



ಸುವರ್ಣ ಸೌಧದ ಉತ್ತಮ ನಿರ್ವಹಣೆಗೆ ಶಾಶ್ವತ ಯೋಜನೆ ರೂಪಿಸಲಾಗುವುದು. ಸೌಧವನ್ನು ಬಾಡಿಗೆ ಕೊಡುವ ವಿಚಾರವಿಲ್ಲ. ಆದರೆ, ರಾಷ್ಟ್ರಮಟ್ಟದ ಸಮ್ಮೇಳನ, ಕಾರ್ಯಾಗಾರಗಳಿಗೆ ಸೆಂಟ್ರಲ್‌ ಹಾಲ್‌ ಮತ್ತು ಇತರೆ ಸೌಕರ್ಯಗಳನ್ನು ಬಳಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಯು.ಟಿ.ಖಾದರ್‌ ಹೇಳಿದರು.



ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಸಂಬಂಧ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಕೈಗೊಂಡ ಸಿದ್ಧತೆಗಳನ್ನು ಮಂಗಳವಾರ ಪರಿಶೀಲಿಸಿದ ನಂತರ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.



ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಈ ಬಾರಿಯ ವಿಧಾನಮಂಡಲ ಅಧಿವೇಶನ ಮಾದರಿಯಾಗಲಿದ್ದು ಉತ್ತರ ಕರ್ನಾಟಕದ ಜನರಿಗೆ ಸಂತೃಪ್ತಿ ತರುವ ನಿರೀಕ್ಷೆ ಇದೆ ಎಂದು ಯು.ಟಿ.ಖಾದರ್‌ ಮತ್ತು ಹೊರಟ್ಟಿ ಹೇಳಿದರು.



ಡಿಸೆಂಬರ್‌ 4ರಿಂದ 15ರವರೆಗೆ ಅಧಿವೇಶನ ನಡೆಯುವ ಸಾಧ್ಯತೆ ಇದ್ದು ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಮುಖ್ಯಮಂತ್ರಿ ದಿನಾಂಕ ಘೋಷಿಸುತ್ತಾರೆ. ಆದರೆ, ಅಧಿವೇಶನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ವಿವಿಧ ಸಮಿತಿ ರಚಿಸುವಂತೆ ಸೂಚಿಸಿದ್ದೇವೆ. ಅಧಿವೇಶನಕ್ಕೆ ಬರುವ ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮದವರು ಮತ್ತು ವೀಕ್ಷಣೆಗೆ ಬರುವ ಜನರಿಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲಾಗುವುದು ಎಂದು ಖಾದರ್ ಹೇಳಿದರು.



ಬೆಂಗಳೂರಿನ ವಿಧಾನಸೌಧಕ್ಕೂ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೂ ಹೋಲಿಕೆ ಮಾಡಲಾಗದು. ಬೆಂಗಳೂರಿನಲ್ಲಿ ಎಲ್ಲ ರೀತಿಯ ವ್ಯವಸ್ಥೆ ಇದೆ. ಇಲ್ಲಿನ ಪರಿಸ್ಥಿತಿ ಹಾಗಿಲ್ಲ. ಇದರ ವಿನ್ಯಾಸದಲ್ಲಿ ಲೋಪವಿದೆ. ಕೆಲವೆಡೆ ಸೋರುತ್ತಿದೆ. ಆಗಿನ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣದ ಬಗ್ಗೆ ಚರ್ಚಿಸುತ್ತೇವೆ. ಮುಖ್ಯಮಂತ್ರಿ ಅವರು ಈ ಬೇಡಿಕೆ ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಬಸವರಾಜ ಹೊರಟ್ಟಿ ಹೇಳಿದರು. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ಚರ್ಚೆಯಾಗಲಿವೆ ಎಂದು ಅವರು ಹೇಳಿದರು.



ಮುಂದಿನ ವರ್ಷ ರಾಜ್ಯಪಾಲರನ್ನು ಇಲ್ಲಿಗೆ ಆಹ್ವಾನಿಸಿ, ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ನಡೆಸಲು ಪ್ರಯತ್ನಿಸುತ್ತೇವೆ. ಈ ಬಾರಿಯ ಅಧಿವೇಶನದಲ್ಲೂ ಸಾಧ್ಯವಾದಷ್ಟು ಎಲ್ಲ ರೀತಿಯ ಖರ್ಚು–ವೆಚ್ಚ ಕಡಿಮೆಗೊಳಿಸುತ್ತೇವೆ’ ಎಂದೂ ಹೇಳಿದರು.



ಮಹಾರಾಷ್ಟ್ರದ ನಾಗ್ಪುರಕ್ಕೆ ಭೇಟಿ ನೀಡಿ, ಅಲ್ಲಿನ ವಿಧಾನಸೌಧ ಮತ್ತು ಶಾಸಕರ ಭವನ ಪರಿಶೀಲಿಸುತ್ತೇವೆ. ಇಲ್ಲಿಯೂ ಅದೇ ಮಾದರಿ ಸೌಲಭ್ಯಗಳು ಬೇಕಿವೆ. ಸೌಧದ ಪ್ರತಿ ಮಹಡಿಯಲ್ಲಿ ವಿವಿಧ ಇಲಾಖೆಗಳ ಎರಡು ಕಚೇರಿಗಳು ಇರಬೇಕು. ಇದರಿಂದ ಕಟ್ಟಡದ ನಿರ್ವಹಣೆಗೆ ಅನುಕೂಲವಾಗುತ್ತದೆ. ಕೆಲವು ಕೊಠಡಿಗಳನ್ನು ಕಾಯ್ದಿರಿಸುವ ಮೂಲಕ ಶಾಸಕರ ಭವನವನ್ನು ಹೋಟೆಲ್ ಆಗಿಯೂ ಬಳಸಬಹುದು ಎಂದು ಹೊರಟ್ಟಿ ಹೇಳಿದರು.



ಸದನದ ಹೊರಗೆ ಪ್ರತಿಭಟನೆಗಳು ನಡೆಯುವ ವಿಚಾರವಾಗಿ ಕೆಲವು ಸಚಿವರು, ಶಾಸಕರಿಗೆ ಬೇಸರವಿದೆ. ಪ್ರತಿಭಟನೆಗಳ ಪ್ರಮಾಣ ಕಡಿಮೆಯಾದರೆ ವ್ಯವಸ್ಥಿತವಾಗಿ ಅಧಿವೇಶನ ನಡೆಸಲು ಹೆಚ್ಚಿನ ಸಮಯ ಸಿಗುತ್ತದೆ. ಹೀಗಾಗಿ ಮುಂಚಿತವಾಗಿಯೇ ಪ್ರತಿಭಟನಾಕಾರರನ್ನು ಕರೆಯಿಸಿ, ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಸಚಿವರು ಮತ್ತು ಅಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು. ಪ್ರತಿಭಟನೆ ನಡೆಯಲೇ ಬಾರದು ಎಂದೇನಿಲ್ಲ. ಆದರೆ, ಸಕಾರಾತ್ಮಕ ಪ್ರತಿಭಟನೆಗಳು ನಡೆಯಲಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ ಸೇಟ ಇದ್ದರು.



ಆರಂಭದಲ್ಲಿ ಸುವರ್ಣ ವಿಧಾನಸೌಧ ಕಟ್ಟಡವನ್ನು ವೀಕ್ಷಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಪಶ್ಚಿಮ ಪ್ರವೇಶ ದ್ವಾರದ ಕೆಲವು ಕಡೆಗಳಲ್ಲಿ ಬಣ್ಣ ಮಾಸಿರುವುದು ಹಾಗೂ ಕಲೆಗಳಿರುವುದನ್ನು ಸರಿಪಡಿಸಲು ಸೂಚಿಸಿದರಲ್ಲದೇ ವರ್ಷವಿಡೀ ಸುವರ್ಣ ಸೌಧದ ಉತ್ತಮ ನಿರ್ವಹಣೆಗೆ ಸಂಬಂಧಿಸಿದಂತೆ‌ ಶಾಶ್ವತ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.



ಇದಾದ ಬಳಿಕ ವಿಧಾನಸಭೆ ಸಭಾಂಗಣ, ಸಭಾಧ್ಯಕ್ಷರ ಕೊಠಡಿಗಳನ್ನು ಪರಿಶೀಲಿಸಿದರು. ಧ್ವನಿವರ್ಧಕ, ಸ್ವಚ್ಛತೆ, ಆಸನ ವ್ಯವಸ್ಥೆ, ವಿದ್ಯುಚ್ಛಕ್ತಿ, ಅಂತರ್ಜಾಲ ಸಂಪರ್ಕ, ಟಿವಿ ಪರದೆ, ಕಂಪ್ಯೂಟರ್ ಸೇರಿದಂತೆ ಅಧಿವೇಶನ ಸಂದರ್ಭದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು. ವಿಧಾನಸಭೆ ಸಭಾಂಗಣದಲ್ಲಿ ದೊಡ್ಡ ಪರದೆಯ ಟಿವಿ ಅಳವಡಿಸಬೇಕು. ಸಭಾಧ್ಯಕ್ಷರ ಕುರ್ಚಿ ಎದುರು ಎಲ್ಲ ಶಾಸಕರ ಹೆಸರು ಹಾಗೂ ಆಸನ ಸಂಖ್ಯೆಯ ಮಾಹಿತಿಯನ್ನು ಪ್ರದರ್ಶಿಸುವ ಚಾರ್ಟ್ ಅಳವಡಿಸಬೇಕು ಎಂದು ತಿಳಿಸಿದರು.



ನಂತರ ಸೆಂಟ್ರಲ್ ಹಾಲ್, ಪರಿಷತ್ ಸಭಾಂಗಣ, ಸಭಾಪತಿ ಕೊಠಡಿ. ವಿರೋಧ ಪಕ್ಷದ ಮೊಗಸಾಲೆ, ಮಂತ್ರಿಗಳ ಮೊಗಸಾಲೆ, ಕ್ಯಾಬಿನೆಟ್ ಹಾಲ್, ಆಡಿಟೋರಿಯಂ ಮತ್ತಿತರ ಸ್ಥಳಗಳನ್ನು ಪರಿಶೀಲಿಸಿದರು. ಸುವರ್ಣ ವಿಧಾನಸೌಧವನ್ನು ಬೆಂಗಳೂರಿನ ವಿಧಾನಸೌಧದ ಮಾದರಿಯಲ್ಲಿ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.



ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ, ಜಿಲ್ಲಾ ಪಂಚಾಯತ್ ಮುಖ್ಯ‌ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ, ವಿಧಾನಸಭೆ ಕಾರ್ಯದರ್ಶಿವಿಶಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.



ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸೊಬರದ ಹಾಗೂ ಇತರೆ ಅಧಿಕಾರಿಗಳು, ಸುವರ್ಣ ವಿಧಾನಸೌಧದ ನಿರ್ವಹಣೆಯ ಕುರಿತು ವಿವರಿಸಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವುಡಿಸೇಲ್ ದರ ಏರಿಕೆ ಹೊಡೆತದ ಮೇಲೆ ಖಾಸಗಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳದ ಪ್ರಹಾರಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂಧನ ಬೆಲೆ ಇಳಿದಾಗ ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡ ಕಂಪನಿಗಳಿಂದ ಈಗ ಜನರ ಮೇಲೆ ಮತ್ತಷ್ಟು ಹೊರೆ2027ರಿಂದ ಕಂಪ್ಯೂಟರ್‌ ಆಧಾರಿತ ನೀಟ್‌ ಪರೀಕ್ಷೆಅದಾನಿ ಉಳಿಸಲು ಅಮೇರಿಕದೊಂದಿಗೆ ರಾಜಿ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿಯುಎಇ ಸೇರಿ 5 ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಹಿಂಪಡೆಯಲು ಸಿದ್ದರಾಮಯ್ಯ ಒತ್ತಾಯಜಾಮೀನು ನಿರಾಕರಣೆ: ನಟ ದರ್ಶನ್‌ಗೆ ಜೈಲೇ ಗತಿಭಾರಿ ಗಾಳಿ-ಮಳೆಗೆ ಮನೆ ಗೋಡೆ ಕುಸಿತ: ಒಂದೇ ಕುಟುಂಬದ 4 ಮಂದಿ ಸಾವು