ಹೊಸದಿಲ್ಲಿ, ನ. 4: ದೇಶದಲ್ಲಿ ಜನನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸುವ ಕಾನೂನುಗಳ ಪ್ರಸ್ತುತತೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ ಅಭಿಪ್ರಾಯಪಟ್ಟಿದೆ.
ಎರಡು ಮಕ್ಕಳ ನಿಯಮದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದ್ದ 2003ರ ‘ಜಾವೇದ್ ವಿರುದ್ಧ ಹರಿಯಾಣ ಸರಕಾರ’ ಪ್ರಕರಣದ ತೀರ್ಪನ್ನು ಮರುಪರಿಶೀಲಿಸಲು ವಿಸ್ತೃತ ಪೀಠಕ್ಕೆ ಒಪ್ಪಿಸಲಾಗಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠ, ಮಹಾರಾಷ್ಟ್ರದ ಕಾಕೋಡ ಗ್ರಾಮ ಪಂಚಾಯಿತಿಯ ಮಾಜಿ ಸರಪಂಚ್ ಮಂಗಳಾ ಭೀಮರಾವ್ ಅವರನ್ನು ಮೂರನೇ ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಅನರ್ಹಗೊಳಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.
ಜನನ ಪ್ರಮಾಣ 3ರಿಂದ 1.9ಕ್ಕೆ ಕುಸಿತ
2003ರಲ್ಲಿ ಎರಡು ಮಕ್ಕಳ ನಿಯಮವನ್ನು ಸುಪ್ರೀಂ ಕೋರ್ಟ ಎತ್ತಿಹಿಡಿದ ಸಂದರ್ಭದಲ್ಲಿ ದೇಶದ ಒಟ್ಟು ಫಲವತ್ತತೆ ದರ 3ರಷ್ಟಿತ್ತು. ಇದೀಗ ಅದು 1.9ಕ್ಕೆ ಇಳಿದಿದ್ದು, ಜನಸಂಖ್ಯೆಯನ್ನು ಸ್ಥಿರವಾಗಿಡಲು ಅಗತ್ಯವಿರುವ 2.1ರ ಬದಲಿ ಮಟ್ಟಕ್ಕಿಂತಲೂ ಕಡಿಮೆಯಾಗಿದೆ ಎಂದು ನ್ಯಾಯಪೀಠ ಗಮನಿಸಿದೆ.
ಜನನ ಪ್ರಮಾಣ ನಿರಂತರವಾಗಿ ಕುಸಿಯುವುದರಿಂದ ಭವಿಷ್ಯದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಳ ಹಾಗೂ ದುಡಿಯುವ ವಯಸ್ಸಿನ ಜನಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕಾಗಿ ರೂಪಿಸಲಾಗಿದ್ದ ಹಳೆಯ ಕಾನೂನುಗಳ ಅಗತ್ಯವನ್ನು ಹೊಸ ಪರಿಸ್ಥಿತಿಯಲ್ಲಿ ಪರಿಶೀಲಿಸಬೇಕಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆರು ರಾಜ್ಯಗಳಲ್ಲಿ ನಿಯಮ ಮುಂದುವರಿಕೆ
ನ್ಯಾಯಾಲಯಕ್ಕೆ ಸಲ್ಲಿಸಲಾದ ವರದಿಯ ಪ್ರಕಾರ, ಏಳು ರಾಜ್ಯಗಳು ಈಗಾಗಲೇ ಎರಡು ಮಕ್ಕಳ ನಿಯಮವನ್ನು ರದ್ದುಗೊಳಿಸಿವೆ. 15 ರಾಜ್ಯಗಳಲ್ಲಿ ಇಂತಹ ನಿಯಮ ಜಾರಿಯಲ್ಲಿಲ್ಲ. ಆದರೆ ಅಸ್ಸಾಂ, ಗೋವಾ, ಗುಜರಾತ್, ಮಹಾರಾಷ್ಟ್ರ, ಒಡಿಶಾ ಮತ್ತು ಉತ್ತರಾಖಂಡದಲ್ಲಿ ಈ ನಿರ್ಬಂಧ ಮುಂದುವರಿದಿದೆ.
ಮಹಾರಾಷ್ಟ್ರ ಗ್ರಾಮ ಪಂಚಾಯತ್ ಕಾಯಿದೆಯಡಿ ಮೂರನೇ ಮಗುವನ್ನು ಹೊಂದಿದ ಕಾರಣಕ್ಕೆ ಮಂಗಳಾ ಭೀಮರಾವ್ ಅವರನ್ನು ಅನರ್ಹಗೊಳಿಸಲಾಗಿತ್ತು. ಈ ಆದೇಶವನ್ನು ಬಾಂಬೆ ಹೈಕೋರ್ಟ ಎತ್ತಿಹಿಡಿದಿದ್ದರಿಂದ ಅವರು ಸುಪ್ರೀಂ ಕೋರ್ಟ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ, ಬದಲಾಗುತ್ತಿರುವ ಜನಸಂಖ್ಯಾ ಪರಿಸ್ಥಿತಿಯಲ್ಲಿ ಎರಡು ಮಕ್ಕಳ ನಿಯಮದ ಸಾಂವಿಧಾನಿಕ ಸಿಂಧುತ್ವವನ್ನು ಮತ್ತೊಮ್ಮೆ ಪರಿಶೀಲಿಸುವುದು ಅಗತ್ಯವೆಂದು ಅಭಿಪ್ರಾಯಪಟ್ಟಿದೆ.
ಎರಡು ಮಕ್ಕಳ ನಿಯಮವನ್ನು ಸುಪ್ರೀಂ ಕೋರ್ಟ ಸಂಪೂರ್ಣ ರದ್ದುಗೊಳಿಸಿಲ್ಲ. ಅದರ ಸಾಂವಿಧಾನಿಕ ಸಿಂಧುತ್ವದ ಮರುಪರಿಶೀಲನೆಗೆ ಮುಂದಾಗಿದೆ.