LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
State News

ಶೃಂಗೇರಿ ಮತ ಎಣಿಕೆ ವಿಡಿಯೊ ನಾಪತ್ತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ ತರಾಟೆ

ಹೊಸದಿಲ್ಲಿ, ಅ.15: ಕರ್ನಾಟಕದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಗೆ ಸಂಬಂಧಿಸಿದ ವಿಡಿಯೊ ದೃಶ್ಯಾವಳಿಗಳು ನಾಪತ್ತೆಯಾಗಿರುವ ವಿಚಾರವನ್ನು ಸುಪ್ರೀಂ ಕೋರ್ಟ ಗಂಭೀರವಾಗಿ ಪರಿಗಣಿಸಿದ್ದು, ದಾಖಲೆಗಳ ಸಂರಕ್ಷಣೆಯಲ್ಲಿ ಲೋಪವಾಗಿರುವ ಕುರಿತು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದೆ.

ಚುನಾವಣಾ ಅರ್ಜಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಮತ ಎಣಿಕೆಯ ವಿಡಿಯೊ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು ಎಂಬುದು ಚುನಾವಣಾ ಆಯೋಗದ ಮಾರ್ಗಸೂಚಿಗಳಲ್ಲೇ ಇದೆ. ಹೀಗಿರುವಾಗ ದೃಶ್ಯಾವಳಿಗಳು ಲಭ್ಯವಿಲ್ಲ ಎಂಬ ಆಯೋಗದ ಹೇಳಿಕೆ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಶೃಂಗೇರಿ ಕ್ಷೇತ್ರದಲ್ಲಿ 1,247 ಅಂಚೆ ಮತಗಳಿದ್ದು, ಕೇವಲ 201 ಮತಗಳ ಅಂತರದಿಂದ ಫಲಿತಾಂಶ ನಿರ್ಧಾರವಾಗಿದೆ. ಹೀಗಾಗಿ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದ್ದರೆ ಫಲಿತಾಂಶದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಮತ ಎಣಿಕೆಯ ಸಂಪೂರ್ಣ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು, ನಮೂನೆ 20 ಹಾಗೂ ಅಂಚೆ ಮತಗಳ ಲೆಕ್ಕಪತ್ರಗಳನ್ನು ಸಲ್ಲಿಸುವಂತೆ ಅರ್ಜಿದಾರರು ಮನವಿ ಮಾಡಿದರು.

ಈ ಹಿನ್ನೆಲೆಯಲ್ಲಿ ಮತ ಎಣಿಕೆಯ ದಾಖಲೆಗಳನ್ನು ಎಷ್ಟು ಕಾಲ ಸಂರಕ್ಷಿಸಲಾಗುತ್ತದೆ, ವಿಡಿಯೊ ದೃಶ್ಯಾವಳಿಗಳನ್ನು ಯಾವಾಗ ಅಳಿಸಲಾಗಿದೆ, ಅದಕ್ಕೆ ಯಾರು ಅನುಮತಿ ನೀಡಿದ್ದಾರೆ ಹಾಗೂ ಬ್ಯಾಕಪ್ ಲಭ್ಯವಿದೆಯೇ ಎಂಬ ಕುರಿತು 2 ವಾರಗಳೊಳಗೆ ಹೊಸ ಪ್ರಮಾಣಪತ್ರ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ ನಿರ್ದೇಶನ ನೀಡಿದೆ.

ಚುನಾವಣಾ ಅರ್ಜಿ ಸಲ್ಲಿಕೆಯಾದ ಬಳಿಕ ದಾಖಲೆಗಳ ಸಂರಕ್ಷಣೆಗೆ ಕೈಗೊಂಡ ಕ್ರಮಗಳ ಕುರಿತು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯೂ ವಿವರವಾದ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿದೆ.

ದಾಖಲೆಗಳ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು 2 ವಾರಗಳ ಬಳಿಕ ನಡೆಸಲು ನಿರ್ಧರಿಸಿದೆ. ಶೃಂಗೇರಿ ಚುನಾವಣೆಗೆ ಸಂಬಂಧಿಸಿದ ಮೂಲ ಅರ್ಜಿ ಕರ್ನಾಟಕ ಹೈಕೋರ್ಟ‌ನಲ್ಲಿ ಬಾಕಿಯಿದೆ.

ಸುಪ್ರೀಂ ಕೋರ್ಟ ವಿರುದ್ಧ ಹರಿಪ್ರಸಾದ ಅಸಮಾಧಾನ

ಇದೇ ವೇಳೆ ಎಸ್‌ಐಆರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ ನೀಡಿರುವ ತೀರ್ಪಿನಿಂದಲೇ ಸಮಸ್ಯೆಗಳು ಉಂಟಾಗಿವೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ನಮೂನೆ 6ಕ್ಕೆ ತಿದ್ದುಪಡಿ ಮಾಡಲು ಚುನಾವಣಾ ಆಯೋಗ ಕೈಗೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ ಒಪ್ಪಿಕೊಂಡಿರುವುದೇ ಈ ಬೆಳವಣಿಗೆಗೆ ಕಾರಣವಾಗಿದೆ. ಇಬ್ಬರು ಚುನಾವಣಾ ಆಯುಕ್ತರು ವಿರೋಧ ವ್ಯಕ್ತಪಡಿಸಿದ್ದರೂ ತಿದ್ದುಪಡಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ದೂರಿದ್ದಾರೆ.

ಎಸ್‌ಐಆರ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ‌ನಿಂದ ನ್ಯಾಯ ದೊರೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ನ್ಯಾಯಾಂಗದ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ.

ನ್ಯಾಯಕ್ಕಾಗಿ ನಾಗರಿಕರು ಸುಪ್ರೀಂ ಕೋರ್ಟ ಮೊರೆ ಹೋಗುತ್ತಾರೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೊಣೆಗಾರಿಕೆ ನ್ಯಾಯಾಂಗದ ಮೇಲಿದೆ. ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎದುರಾಗಿರುವ ಸಂದರ್ಭದಲ್ಲಿ ನ್ಯಾಯಾಲಯ ಮೌನವಾಗಿರಬಾರದು ಎಂದು ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST