ವಿಶ್ವಸಂಸ್ಥೆ, ಅ. 17: ಭಾರತದಲ್ಲಿ ರಾಜಕೀಯ ವಿಡಂಬನಾ ಚಳವಳಿಯಲ್ಲಿ ತೊಡಗಿರುವ ಯುವಕರು ಪ್ರತೀಕಾರ ಹಾಗೂ ಕಳಂಕ ಎದುರಿಸುತ್ತಿದ್ದಾರೆ ಎಂಬ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರ ವರದಿಯನ್ನು ಭಾರತ ಆಧಾರರಹಿತ ಎಂದು ತಳ್ಳಿಹಾಕಿದೆ. ಯಾವುದೇ ದೇಶದ ವಿರುದ್ಧ ಆರೋಪ ಮಾಡುವ ಮೊದಲು ಸತ್ಯಾಸತ್ಯತೆ ಪರಿಶೀಲಿಸುವಂತೆ ಒತ್ತಾಯಿಸಿದೆ.
ವಿಶ್ವಸಂಸ್ಥೆಯ ಮಹಾಸಭೆಯ 81ನೇ ಅಧಿವೇಶನದಲ್ಲಿ ಭಾರತದ ಶಾಶ್ವತ ನಿಯೋಗದ ಕಾರ್ಯದರ್ಶಿ ಅನುಜ ಸ್ವರೂಪ್ ಅವರು ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಶಾಂತಿಯುತ ಸಭೆ ಮತ್ತು ಸಂಘಟನೆಯ ಸ್ವಾತಂತ್ರ್ಯ’ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಜಿನಾ ರೊಮೆರೊ ಸಲ್ಲಿಸಿರುವ ವರದಿಯಲ್ಲಿ, ಭಾರತದ ಯುವಕರು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮೂಲಕ ರಾಜಕೀಯ ವಿಡಂಬನಾ ಚಳವಳಿ ನಡೆಸುತ್ತಿದ್ದಾರೆ. ಮಾನಸಿಕ ಆರೋಗ್ಯ ಹಾಗೂ ಲಿಂಗ ಸಮಾನತೆಯಂತಹ ವಿಷಯಗಳ ಬಗ್ಗೆ ಮಾತನಾಡಿದರೆ ಪ್ರತೀಕಾರ ಅಥವಾ ಸಾಮಾಜಿಕ ಕಳಂಕ ಎದುರಿಸಬೇಕಾಗುತ್ತದೆ ಎಂಬ ಆತಂಕವನ್ನು ಯುವಕರು ವ್ಯಕ್ತಪಡಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಆರೋಪಗಳನ್ನು ನಿರಾಕರಿಸಿರುವ ಸ್ವರೂಪ್, ‘ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಅನಾಮಧೇಯ ಹೇಳಿಕೆಗಳನ್ನು ವರದಿಯಲ್ಲಿ ಬಳಸಲಾಗಿದೆ. ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿರುವ ಭಾರತದ ವಿರುದ್ಧ ಇಂತಹ ಆರೋಪಗಳನ್ನು ಮಾಡುವುದು ಸರಿಯಲ್ಲ. ವಿಶ್ವಸಂಸ್ಥೆಯ ಅಧಿಕೃತ ವರದಿಯ ಹೆಸರಿನಲ್ಲಿ ಗಾಳಿಸುದ್ದಿಗಳನ್ನು ಹರಡಲಾಗುತ್ತಿದೆ. ಭಾರತ ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ’ ಎಂದು ಹೇಳಿದ್ದಾರೆ.
‘ಅನಧಿಕೃತ ಮಾಹಿತಿಗಳನ್ನು ಆಧರಿಸಿ ವರದಿ ಸಿದ್ಧಪಡಿಸುವುದು ವಿಶೇಷ ವರದಿಗಾರರ ಹುದ್ದೆಯ ಜವಾಬ್ದಾರಿಗೆ ವಿರುದ್ಧವಾಗಿದೆ. ಯಾವುದೇ ದೇಶದ ಕುರಿತು ಆರೋಪಿಸುವ ಮೊದಲು ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು. ವರದಿಗಳಲ್ಲಿ ನಿಷ್ಪಕ್ಷಪಾತತೆ ಕಾಪಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಇಂತಹ ಆಧಾರರಹಿತ ವರದಿಗಳು ವಿಶ್ವಸಂಸ್ಥೆ ಹಾಗೂ ಅದರ ಅಂಗಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತವೆ ಎಂದು ಎಚ್ಚರಿಸಿದ್ದಾರೆ.
ಭಾರತದ ಸಂವಿಧಾನದ 19ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಶಾಂತಿಯುತವಾಗಿ ಸಭೆ ಸೇರುವ ಹಾಗೂ ಸಂಘಟನೆ ರಚಿಸುವ ಹಕ್ಕುಗಳನ್ನು ಖಾತರಿಪಡಿಸಿದೆ. ಈ ಹಕ್ಕುಗಳ ರಕ್ಷಣೆಗೆ ಸ್ವತಂತ್ರ ನ್ಯಾಯಾಂಗ, ಮುಕ್ತ ಪತ್ರಿಕಾರಂಗ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಂತಹ ಸಂಸ್ಥೆಗಳಿವೆ ಎಂದು ಸ್ವರೂಪ್ ಪ್ರತಿಪಾದಿಸಿದ್ದಾರೆ.