LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
International News

ಹಿಂದೂ ದೇವಾಲಯದಲ್ಲಿ ಸಾಮೂಹಿಕ ಹತ್ಯೆಗೆ ಸಂಚು

ವಾಷಿಂಗ್ಟನ್, ಅ.15: ಅಮೆರಿಕದ ಶಿಕಾಗೋ ಸಮೀಪ ಹಿಂದೂ ದೇವಾಲಯವೊಂದರಲ್ಲಿ ಭಾರತೀಯ ಮೂಲದ ಜನರನ್ನು ಗುರಿಯಾಗಿಸಿಕೊಂಡು ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಗೆ ಸಿದ್ಧತೆ ನಡೆಸಿದ್ದ ಯುವಕನ ರೈಫಲ್ ಜಾಮ್ ಆಗಿದ್ದರಿಂದ ಭಾರಿ ದುರಂತ ತಪ್ಪಿದೆ ಎಂದು ವರದಿಯಾಗಿದೆ.

ಇಲಿನಾಯ್ಸ್‌ನ ಪಲಾಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಬಂಧಿತ ಆರೋಪಿ. ಅಕ್ಟೋಬರ್ 11ರಂದು ಅರೋರಾ ಪ್ರದೇಶದ ಹಿಂದೂ ದೇವಾಲಯವೊಂದರ ಮೇಲೆ ದಾಳಿ ನಡೆಸಲು ಆತ ಯೋಜಿಸಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ದಾಳಿಗೆ ಉದ್ದೇಶಿಸಿದ್ದ ನಿಖರ ಸ್ಥಳವನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

ಪಲಾಟೈನ್‌ನ ಟ್ಯಾಕೋ ಬೆಲ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಪಪೊರಾಕಿಸ್ ಸಾಮೂಹಿಕ ಗುಂಡಿನ ದಾಳಿಗೆ ಸಂಚು ರೂಪಿಸುತ್ತಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ದಾಳಿಯ ಯೋಜನೆ ವಿವರಿಸುವ ದಾಖಲೆ, ರೈಫಲ್, ಗುಂಡು ತುಂಬಿದ ಮ್ಯಾಗಜೀನ್‌ಗಳು ಹಾಗೂ ರಕ್ಷಣಾ ಕವಚದ ಚಿತ್ರಗಳನ್ನು ಆತ ಮತ್ತೊಬ್ಬ ವ್ಯಕ್ತಿಯೊಂದಿಗೆ ಹಂಚಿಕೊಂಡಿದ್ದ ಎನ್ನಲಾಗಿದೆ.

ಅಕ್ಟೋಬರ್ 11ರಂದು ವಿಶೇಷ ದಿನವಾಗಲಿದೆ ಎಂದು ಸಹೋದ್ಯೋಗಿಗಳಿಗೆ ತಿಳಿಸಿದ್ದ ಆರೋಪಿ, ಅಂದು ಬೆಳಿಗ್ಗೆ ತನ್ನ ಬಂದೂಕು ಜಾಮ್ ಆಗಿರುವುದಾಗಿ ಸಹೋದ್ಯೋಗಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ಹೇಳಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅದೇ ದಿನ ಸಂಜೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು. ಆತನ ಮನೆಯಲ್ಲಿ ಶೋಧ ನಡೆಸಿದಾಗ ರೈಫಲ್, ಗುಂಡು ತುಂಬಿದ ಹಲವು ಮ್ಯಾಗಜೀನ್‌ಗಳು, ನೂರಾರು ಗುಂಡುಗಳು, ರಕ್ಷಣಾ ಕವಚ ಹಾಗೂ ಇತರ ಉಪಕರಣಗಳು ಪತ್ತೆಯಾಗಿವೆ.

ಆರೋಪಿಯ ಎಲೆಕ್ಟ್ರಾನಿಕ್ ದಾಖಲೆಗಳಲ್ಲಿ ಬಿಳಿಯರ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಉಗ್ರವಾದಿ ವಿಚಾರಧಾರೆಗಳು ಹಾಗೂ ಭಾರತೀಯ ಮೂಲದ ಜನರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದಿಸುವ ಬರಹಗಳು ಪತ್ತೆಯಾಗಿವೆ. ‘ಅರೋರಾ ಶೂಟರ್ಸ್ ಮ್ಯಾನಿಫೆಸ್ಟೊ’ ಎಂಬ ದಾಖಲೆಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ವಿರುದ್ಧ ಭಯೋತ್ಪಾದಕ ಬೆದರಿಕೆ ಒಡ್ಡಿದ ಹಾಗೂ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಬುಧವಾರ ಕುಕ್ ಕೌಂಟಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. ಮುಂದಿನ ವಿಚಾರಣೆ ಅಕ್ಟೋಬರ್ 30ರಂದು ನಡೆಯಲಿದೆ.

ಪೊಲೀಸರು ಹಿಂದೂ ದೇವಾಲಯಗಳ ಆಡಳಿತ ಮಂಡಳಿಗಳಿಗೆ ಸಂಭವನೀಯ ಬೆದರಿಕೆಯ ಕುರಿತು ಎಚ್ಚರಿಕೆ ನೀಡಿದ್ದಾರೆ. ಪ್ರಕರಣದ ತನಿಖೆಯಲ್ಲಿ ಎಫ್‌ಬಿಐ ಕೂಡ ಸಹಕರಿಸುತ್ತಿದೆ.

ಹಿಂದೂ ಅಮೆರಿಕನ್ ಫೌಂಡೇಶನ್ ಪೊಲೀಸರ ಕ್ರಮವನ್ನು ಶ್ಲಾಘಿಸಿದ್ದು, ಆರೋಪಿ ಈಗಾಗಲೇ ದೇವಾಲಯಕ್ಕೆ ತಲುಪಿ ಗುಂಡಿನ ದಾಳಿಗೆ ಯತ್ನಿಸಿದ್ದರೂ ರೈಫಲ್ ಜಾಮ್ ಆಗಿದ್ದರಿಂದ ದುರಂತ ತಪ್ಪಿದೆ ಎಂದು ಹೇಳಿಕೊಂಡಿದೆ. ಆದರೆ, ಈ ಹೇಳಿಕೆಯನ್ನು ಪೊಲೀಸರು ದೃಢಪಡಿಸಿರುವ ಮಾಹಿತಿ ಲಭ್ಯವಾಗಿಲ್ಲ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST