ಛತ್ರಪತಿ ಸಂಬಾಜಿನಗರ, ಅ. 17: ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೇವಲ ₹5,000 ಮಧ್ಯಂತರ ಪರಿಹಾರ ಘೋಷಿಸಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ರೈತರೊಬ್ಬರು, ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೇ ₹5,000 ಮನಿ ಆರ್ಡರ್ ಕಳುಹಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾರೆ.
ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯ ಸುರಡಿ ಗ್ರಾಮದ ಸೋಯಾಬೀನ್ ಬೆಳೆಗಾರ ಚಾಂದ್ ಶೇಕ್ ಈ ರೀತಿಯಾಗಿ ಸರ್ಕಾರದ ಪರಿಹಾರ ನೀತಿಯನ್ನು ಖಂಡಿಸಿದ್ದಾರೆ.
ರಾಜ್ಯದ 358 ತಾಲ್ಲೂಕುಗಳ ಪೈಕಿ 305 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಬರದಿಂದ ನಷ್ಟ ಅನುಭವಿಸಿರುವ ರೈತರಿಗೆ ದೀಪಾವಳಿಗೂ ಮುನ್ನ ತಲಾ ₹5,000 ಮುಂಗಡ ಪರಿಹಾರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಫಡಣವೀಸ್ ಇತ್ತೀಚೆಗೆ ಪ್ರಕಟಿಸಿದ್ದರು.
ಬರ ಪರಿಶೀಲನೆ ಪ್ರಕ್ರಿಯೆಗಳನ್ನು ದೀಪಾವಳಿಗೂ ಮುನ್ನ ಪೂರ್ಣಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತುರ್ತು ನೆರವಿನ ರೂಪದಲ್ಲಿ ಈ ಮೊತ್ತ ನೀಡಲು ನಿರ್ಧರಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು.
ಆದರೆ, ಬೆಳೆ ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಮಾಡಿ ನಷ್ಟ ಅನುಭವಿಸಿರುವ ರೈತರಿಗೆ ₹5,000 ಪರಿಹಾರ ನೀಡುವುದು ಅವಮಾನಕರ ಎಂದು ಚಾಂದ್ ಶೇಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಒಂದೂವರೆ ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆಯಲು ₹25,000 ಖರ್ಚು ಮಾಡಿದ್ದೆ. ಆದರೆ, ಕೇವಲ 60 ಕೆ.ಜಿ. ಇಳುವರಿ ಬಂದಿದೆ. ಅದನ್ನು ಮಾರಾಟ ಮಾಡಿ ₹3,900 ಗಳಿಸಿದ್ದೇನೆ. ಉಳಿದ ₹1,100 ಸ್ನೇಹಿತನಿಂದ ಸಾಲ ಪಡೆದು ಒಟ್ಟು ₹5,000 ಮುಖ್ಯಮಂತ್ರಿಗೆ ಮನಿ ಆರ್ಡರ್ ಮಾಡಿದ್ದೇನೆ’ ಎಂದು ಸುರಡಿ ಅಂಚೆ ಕಚೇರಿ ಎದುರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೆಳೆ ನಷ್ಟದಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಎಷ್ಟು ಅತ್ಯಲ್ಪವಾಗಿದೆ ಎಂಬುದನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದಲೇ ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.