ಹೊಸದಿಲ್ಲಿ, ಮೇ 15 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಗೌತಮ್ ಅದಾನಿ ವಿರುದ್ಧದ ಆರೋಪಗಳನ್ನು ಕೈಬಿಡಲು ರಾಜಿ ಮಾಡಿಕೊಂಡು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಗೌತಮ್ ಅದಾನಿ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಕೈಬಿಡಲು ಅಮೆರಿಕದ ನ್ಯಾಯಾಂಗ ಇಲಾಖೆ ಮುಂದಾಗಿದೆ ಎಂಬ ವರದಿಗಳ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ರಾಜಿ ಮಾಡಿಕೊಂಡ ಪ್ರಧಾನಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿಲ್ಲ, ಅದಾನಿ ಬಿಡುಗಡೆಗೆ ಚೌಕಾಶಿ ನಡೆಸಿದ್ದಾರೆ ಎಂದು ಟೀಕಿಸಿದ್ದಾರೆ.
ಭಾರತದ ಸರ್ಕಾರಿ ಸ್ವಾಮ್ಯದ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಸೌರ ವಿದ್ಯುತ್ ಪೂರೈಸುವ ಯೋಜನೆಗಾಗಿ ಅದಾನಿ ಗ್ರೀನ್ ಎನರ್ಜಿ ಸಂಸ್ಥೆ 2021ರಿಂದ 2024ರ ಅವಧಿಯಲ್ಲಿ ಅಮೆರಿಕದ ಬ್ಯಾಂಕ್‌ಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ₹25 ಸಾವಿರ ಕೋಟಿಗೂ ಅಧಿಕ ಬಂಡವಾಳ ಸಂಗ್ರಹಿಸಿದೆ ಎಂದು ಅಮೆರಿಕದಲ್ಲಿ ಆರೋಪಿಸಲಾಗಿದೆ.
ಈ ಮೊತ್ತದಲ್ಲಿ ₹2,100 ಕೋಟಿಯನ್ನು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಕ್ರಿಯೆ ನೀಡಿದ್ದು, ಅಮೆರಿಕಕ್ಕೆ ಲಾಭವಾಗಿರುವ ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ಮೋದಿ ಯಾಕೆ ಒಪ್ಪಿಕೊಂಡರು ಎಂಬುದು ಇದೀಗ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಆಪರೇಶನ್ ಸಿಂಧೂರ್ ಅನ್ನು ಏಕಾಏಕಿ ಸ್ಥಗಿತಗೊಳಿಸಿದ ಹಿನ್ನೆಲೆಯೂ ಇದೀಗ ಅರ್ಥವಾಗುತ್ತಿದೆ. ರಾಷ್ಟ್ರದ ಹಿತಕ್ಕಿಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡಕ್ಕೆ ಮಣಿದು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಟ್ರಂಪ್ ಆಡಳಿತವು ಮೊದಾನಿ ವಿರುದ್ಧದ ಎಲ್ಲ ಭ್ರಷ್ಟಾಚಾರ ಆರೋಪಗಳನ್ನು ಕೈಬಿಡಲು ಸಿದ್ಧವಾಗಿದೆ ಎಂಬ ವರದಿಗಳು ಬರುತ್ತಿವೆ. ಪ್ರಧಾನಿ ಮೋದಿ ಇನ್ನೆಷ್ಟು ರಾಜಿ ಮಾಡಿಕೊಳ್ಳಲಿದ್ದಾರೆ ಎಂದು ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.