LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಅಫ್ಘಾನರ ಮೇಲೆ ಭಾರತದ ದಿಗ್ವಿಜಯ: 300 ರನ್‌ಗಳ ದಾಖಲೆಯ ಗೆಲುವು

ಮುಲ್ಲನಪುರ, ಜೂ. 8 : ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ ಇನ್ನಿಂಗ್ಸ್ ಮತ್ತು 300 ರನ್‌ಗಳ ಭರ್ಜರಿ ಅಂತರದಿಂದ ಜಯ ಸಾಧಿಸಿ, ತನ್ನ ಟೆಸ್ಟ್ ಇತಿಹಾಸದಲ್ಲೇ ಅತಿದೊಡ್ಡ ಗೆಲುವಿನ ದಾಖಲೆಯನ್ನು ನಿರ್ಮಿಸಿದೆ.

ಮೂರನೇ ದಿನದ ಆಟ ಮುಕ್ತಾಯವಾಗುವ ಮೊದಲೇ ಪಂದ್ಯವನ್ನು ತನ್ನದಾಗಿಸಿಕೊಂಡ ಭಾರತ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದಿತು. ಆರಂಭದಿಂದಲೇ ಹಿಡಿತ ಸಾಧಿಸಿದ ಭಾರತಕ್ಕೆ ಅಫ್ಘಾನಿಸ್ತಾನ ತಂಡ ಯಾವುದೇ ಹಂತದಲ್ಲೂ ಸವಾಲು ಒಡ್ಡಲು ಸಾಧ್ಯವಾಗಲಿಲ್ಲ.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ 8 ವಿಕೆಟ್‌ಗೆ 564 ರನ್ ಗಳಿಸಿ ಡಿಕ್ಲೇರ್ ಮಾಡಿತು. ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಭರ್ಜರಿ ಪ್ರದರ್ಶನ ನೀಡಿ ಬೃಹತ್ ಮೊತ್ತ ಕಲೆಹಾಕಿದರು.

ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ ಭಾರತದ ಸ್ಪಿನ್ ದಾಳಿಗೆ ತತ್ತರಿಸಿ ಕೇವಲ 152 ರನ್‌ಗಳಿಗೆ ಆಲೌಟ್ ಆಯಿತು. ಪದಾರ್ಪಣೆ ಪಂದ್ಯವನ್ನಾಡಿದ ಎಡಗೈ ಸ್ಪಿನ್ನರ್ ಮಾನವ ಸುತಾರ 6 ವಿಕೆಟ್ ಕಬಳಿಸಿ ಅಫ್ಘಾನ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

412 ರನ್‌ಗಳ ಹಿನ್ನಡೆಯಲ್ಲಿದ್ದ ಅಫ್ಘಾನಿಸ್ತಾನವನ್ನು ಭಾರತ ಫಾಲೋಆನ್‌ಗೆ ಒಳಪಡಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅಫ್ಘಾನ್ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ಮುಂದೆ ಹೆಚ್ಚು ಹೊತ್ತು ನಿಲ್ಲಲಿಲ್ಲ. ವಾಷಿಂಗ್ಟನ್ ಸುಂದರ 4 ವಿಕೆಟ್ ಹಾಗೂ ಕುಲದೀಪ ಯಾದವ್ 3 ವಿಕೆಟ್ ಪಡೆದು ಅಫ್ಘಾನಿಸ್ತಾನವನ್ನು ಕೇವಲ 112 ರನ್‌ಗಳಿಗೆ ನಿಯಂತ್ರಿಸಿದರು.

ಈ ಮೂಲಕ ಅಫ್ಘಾನಿಸ್ತಾನದ ಒಟ್ಟು ಮೊತ್ತ 264 ರನ್‌ಗಳಿಗೆ ಸೀಮಿತವಾಗಿದ್ದು, ಭಾರತ ಇನ್ನಿಂಗ್ಸ್ ಮತ್ತು 300 ರನ್‌ಗಳ ಅಂತರದಿಂದ ಐತಿಹಾಸಿಕ ಜಯ ದಾಖಲಿಸಿತು.

ಸ್ಕೋರ್ ವಿವರ

ಭಾರತ ಮೊದಲ ಇನ್ನಿಂಗ್ಸ್: 564/8 ಡಿಕ್ಲೇರ್

ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್: 152 ಆಲೌಟ್

ಅಫ್ಘಾನಿಸ್ತಾನ ಎರಡನೇ ಇನ್ನಿಂಗ್ಸ್: 112 ಆಲೌಟ್

ಫಲಿತಾಂಶ: ಭಾರತ ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಜಯ

ಈ ಗೆಲುವಿನ ಮೂಲಕ ಭಾರತವು 2018ರಲ್ಲಿ ರಾಜ್‌ಕೋಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಾಖಲಿಸಿದ್ದ ಇನ್ನಿಂಗ್ಸ್ ಮತ್ತು 272 ರನ್‌ಗಳ ಗೆಲುವಿನ ದಾಖಲೆಯನ್ನು ಹಿಂದಿಕ್ಕಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತಿದೊಡ್ಡ ಗೆಲುವು ಎಂಬ ಹೊಸ ಇತಿಹಾಸ ಮುಲ್ಲನ್‌ಪುರದಲ್ಲಿ ನಿರ್ಮಾಣವಾಗಿದೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಪದಾರ್ಪಣೆ ಪಂದ್ಯದಲ್ಲೇ 6 ವಿಕೆಟ್ ಸಾಧನೆ ಮಾಡಿದ ಯುವ ಸ್ಪಿನ್ನರ್ ಮಾನವ ಸುತಾರ ಅವರಿಗೆ ಲಭಿಸಿತು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST