LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಬೆಳಗಾವಿಯಲ್ಲಿ ಘೋರ ದುರಂತ: ರೆಫ್ರಿಜರೇಟರ್ ಸ್ಫೋಟಗೊಂಡು ನಾಲ್ವರು ಸಜೀವ ದಹನ

news_1789479229_0_282.webp

ಬೆಳಗಾವಿ, ಸೆ. 15 : ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿದ್ದ ಬೆಳಗಾವಿ ನಗರದಲ್ಲಿ ಮಂಗಳವಾರ ಮುಂಜಾನೆ ಮನೆಯೊಂದರಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿದ್ಯುತ್ ಶಾರ್ಟ ಸರ್ಕ್ಯೂಟ್‌ನಿಂದ ರೆಫ್ರಿಜರೇಟರ್ ಸ್ಫೋಟಗೊಂಡಿರಬಹುದೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ನಗರದ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಚವಾಟ್ ಗಲ್ಲಿಯ ದೋರ್ ಲೇನ್‌ನಲ್ಲಿರುವ ಟಿನ್‌ಶೀಟ್ ಮನೆಯಲ್ಲಿ ಬೆಳಗಿನ ಜಾವ ಸುಮಾರು 2.30ಕ್ಕೆ ಈ ದುರಂತ ಸಂಭವಿಸಿದೆ. ಕುಟುಂಬದ ಸದಸ್ಯರು ನಿದ್ರಿಸುತ್ತಿದ್ದ ವೇಳೆ ಮನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಇಡೀ ಮನೆಗೆ ವ್ಯಾಪಿಸಿದೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಒಳಗಿದ್ದವರಿಗೆ ಹೊರಗೆ ಬರಲು ಸಾಧ್ಯವಾಗದೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಶಾರದಾ ಗಜಾನನ ದಾಮಣೆ (45), ಭಾರತೀ ರಾಜಾರಾಮ ದಾಮಣೆ (50), ಪ್ರಿಯಾ ಗಜಾನನ ದಾಮಣೆ (28) ಹಾಗೂ ಗಂಗಾ ಗಜಾನನ ದಾಮಣೆ (25) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಜಾನನ ರಾಜಾರಾಮ ದಾಮಣೆ (65) ಹಾಗೂ ರೋಷನ್ ಗಜಾನನ ದಾಮಣೆ (21) ಗಾಯಗೊಂಡಿದ್ದು, ಅವರನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಜಾನನ ಅವರಿಗೆ ಶೇ.90ರಷ್ಟು ಹಾಗೂ ರೋಷನ್ ಅವರಿಗೆ ಶೇ.20ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದವರು ಗಣೇಶ ಚತುರ್ಥಿ ಅಂಗವಾಗಿ ಮನೆಯಲ್ಲಿ ಗಣೇಶನ ಪೂಜೆ ನೆರವೇರಿಸಿ ರಾತ್ರಿ ಮಲಗಿದ್ದರು. ಕೆಲವೇ ಗಂಟೆಗಳ ಬಳಿಕ ಈ ಭೀಕರ ದುರಂತ ಸಂಭವಿಸಿದೆ. ಬೆಂಕಿ ಅತ್ಯಂತ ವೇಗವಾಗಿ ವ್ಯಾಪಿಸಿದ್ದರಿಂದ ಮನೆಯಲ್ಲಿದ್ದವರ ರಕ್ಷಣೆಗೆ ಅವಕಾಶವೇ ಸಿಗಲಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಮನೆಯೊಳಗಿನ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ರೆಫ್ರಿಜರೇಟರ್ ಕೂಡ ತೀವ್ರವಾಗಿ ಹಾನಿಗೊಂಡಿದೆ.

ಶಾರ್ಟ ಸರ್ಕ್ಯೂಟ್‌ನಿಂದ ರೆಫ್ರಿಜರೇಟರ್ ಸ್ಫೋಟ?

ವಿದ್ಯುತ್ ಶಾರ್ಟ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಬಳಿಕ ರೆಫ್ರಿಜರೇಟರ್ ಸ್ಫೋಟಗೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಬೆಂಕಿ ಮೊದಲು ಹೇಗೆ ಕಾಣಿಸಿಕೊಂಡಿತು ಹಾಗೂ ರೆಫ್ರಿಜರೇಟರ್ ಸ್ಫೋಟವೇ ಬೆಂಕಿ ವ್ಯಾಪಿಸಲು ಕಾರಣವಾಯಿತೇ ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.

ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಶಾರ್ಟ ಸರ್ಕ್ಯೂಟ್‌ನಿಂದ ರೆಫ್ರಿಜರೇಟರ್ ಸ್ಫೋಟಗೊಂಡಿರುವ ಸಾಧ್ಯತೆ ಇದ್ದು, ಬೆಂಕಿಗೆ ನಿಖರ ಕಾರಣವೇನು ಎಂಬುದನ್ನು ವಿದ್ಯುತ್ ಸರಬರಾಜು ಇಲಾಖೆಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮಾರ್ಕೆಟ್ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಅಗ್ನಿ ಅವಘಡಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಮನೆಯ ವಿದ್ಯುತ್ ಸಂಪರ್ಕ, ವೈರಿಂಗ್, ರೆಫ್ರಿಜರೇಟರ್ ಹಾಗೂ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಿರಬಹುದಾದ ಇತರ ಅಂಶಗಳನ್ನೂ ಪರಿಶೀಲಿಸಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನೆರೆಹೊರೆಯವರು ಹಾಗೂ ಘಟನೆ ಕುರಿತು ಮಾಹಿತಿ ಹೊಂದಿರುವವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ.

ದಾಮಣೆ ಕುಟುಂಬವು ದಿನಗೂಲಿ ಕೆಲಸವನ್ನೇ ಜೀವನಾಧಾರ ಮಾಡಿಕೊಂಡಿತ್ತು ಎಂದು ತಿಳಿದುಬಂದಿದೆ. ಗಣೇಶ ಚತುರ್ಥಿ ಹಬ್ಬ ಆಚರಿಸಿ ಮಲಗಿದ್ದ ಕುಟುಂಬದ ಮೇಲೆ ಕೆಲವೇ ಗಂಟೆಗಳಲ್ಲಿ ಇಂತಹ ಘೋರ ದುರಂತ ಎರಗಿರುವುದು ಚವಾಟ್ ಗಲ್ಲಿ ಪ್ರದೇಶದ ನಿವಾಸಿಗಳನ್ನು ತೀವ್ರ ಆಘಾತಕ್ಕೆ ದೂಡಿದೆ.

ಸಚಿವ ಸತೀಶ ಜಾರಕಿಹೊಳಿ ಸ್ಥಳಕ್ಕೆ ಭೇಟಿ

ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸಿಫ ಸೇಠ್ ಅವರು ತಕ್ಷಣ ಬೆಳಗಿನ ಜಾವ 3.30ಕ್ಕೆ ಘಟನಾ ಸ್ಥಳಕ್ಕೆ ಧಾವಿಸಿ ಹೋಗಿ ಪರಿಸ್ಥಿತಿ ಪರಿಶೀಲಿಸಿದರು. ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ದುರಂತದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ದುರಂತದಲ್ಲಿ ನಾಲ್ವರನ್ನು ಕಳೆದುಕೊಂಡ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಲು ಮನವಿ ಮಾಡುವುದಾಗಿ ಸತೀಶ ಜಾರಕಿಹೊಳಿ ಹಾಗೂ ಆಸಿಫ ಸೇಠ್ ತಿಳಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಸ್ತಿ ಹಂಚಿಕೆ ವಿವಾದ: ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಮಾಜಿ ಯೋಧ, ವಕೀಲ ಪುತ್ರಿಯ ಬರ್ಬರ ಹತ್ಯೆಯುಪಿಐ ಶುಲ್ಕ ಜನರ ಜೇಬಿನ ಮೇಲೆ ‘ಸರ್ಜಿಕಲ್ ಸ್ಟ್ರೈಕ್’: ಸಚಿವ ಶಿವರಾಜ ತಂಗಡಗಿ ಟೀಕೆ‘ವಂದೇ ಮಾತರಂ’ ಪೂರ್ಣ ಹಾಡಿದರೆ ರಾಜೀನಾಮೆ: ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಸವಾಲುರೈಲ್ವೆ ಯೋಜನೆಗೆ ಭೂಸ್ವಾಧೀನ: ಎಕರೆಗೆ ₹1 ಕೋಟಿ ಪರಿಹಾರಕ್ಕೆ ರೈತರ ಆಗ್ರಹಲಾಡ್ಜನಲ್ಲಿ ಯುವತಿ ಅನುಮಾನಾಸ್ಪದ ಸಾವು₹2 ಸಾವಿರಕ್ಕಿಂತ ಹೆಚ್ಚಿನ ಯುಪಿಐ ವ್ಯಾಪಾರಿ ಪಾವತಿಗೆ ಶೇ 0.4 ಎಂಡಿಆರ್ರಾಸಾಯನಿಕ ಮಿಶ್ರಿತ ಬಣ್ಣದ ಅಡಿಕೆ ಅಕ್ರಮ ಸಾಗಣೆ; ಕಂಟೈನರ್ ಜಪ್ತಿ, ಇಬ್ಬರು ವಶಕ್ಕೆಮಣಿಪುರದಲ್ಲಿ ಮತ್ತೆ ಹಿಂಸಾಚಾರ: ನಾಗಾ ಗ್ರಾಮದ ಮೇಲೆ ಉಗ್ರರ ದಾಳಿ, ಎರಡು ಮನೆಗಳಿಗೆ ಬೆಂಕಿಯುಪಿಐ ವಹಿವಾಟಿಗೆ ಎಂಡಿಆರ್: ‘ಅಮೆರಿಕದ ಒತ್ತಡಕ್ಕೆ ಕೇಂದ್ರ ಮಣಿದಿದೆ’ ಎಂದು ಕಾಂಗ್ರೆಸ್ ಆರೋಪವಾಯುಮಾಲಿನ್ಯದಿಂದ ಆತ್ಮಹತ್ಯೆ ಆಲೋಚನೆ, ಸಾವಿನ ಅಪಾಯ ಹೆಚ್ಚಳ: ಅಧ್ಯಯನ