LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

‘ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು: ನೂರ್ ಶ್ರೀಧರ ಆಗ್ರಹ

ಬೆಂಗಳೂರು, ಸೆ 1 : (ಸಮದರ್ಶಿ ಸುದ್ದಿ) - ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಹಲವು ಗಂಭೀರ ಪ್ರಶ್ನೆಗಳು ಉದ್ಭವಿಸಿದ್ದು, ಈ ವಿಚಾರದಲ್ಲಿ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಆಗ್ರಹಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ ಪಟ್ಟಿಯಲ್ಲಿ 1.07 ಕೋಟಿಗೂ ಅಧಿಕ ಮತದಾರರ ಹೆಸರುಗಳು ಕೈಬಿಡಲಾಗಿದೆ. ಈ ಹಿಂದೆ ರಾಜ್ಯದಲ್ಲಿದ್ದ 5.54 ಕೋಟಿ ಮತದಾರರ ಸಂಖ್ಯೆ ಇದೀಗ 4.46 ಕೋಟಿಗೆ ಇಳಿದಿದ್ದು, ಒಟ್ಟು ಮತದಾರರ ಪೈಕಿ ಶೇ.19.5ರಷ್ಟು ಮಂದಿ ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಅವರು ಹೇಳಿದರು.

ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲೂ ದೊಡ್ಡ ಪ್ರಮಾಣದ ಹೆಸರುಗಳನ್ನು ವಿವಿಧ ಕಾರಣಗಳಡಿ ವರ್ಗೀಕರಿಸಲಾಗಿದೆ. 32,74,535 ಮತದಾರರನ್ನು ‘ಶಾಶ್ವತ ಸ್ಥಳಾಂತರಗೊಂಡವರು’ ಎಂದು ಗುರುತಿಸಲಾಗಿದ್ದು, 7,27,258 ಗೈರುಹಾಜರಿ, 3,19,113 ಮೃತರು, 63,548 ನಕಲಿ ಅಥವಾ ಬೇರೆಡೆ ನೋಂದಣಿಯಾಗಿರುವವರು ಹಾಗೂ 3,04,249 ಇತರೆ ಪ್ರಕರಣಗಳೆಂದು ಗುರುತಿಸಲಾಗಿದೆ. ಈ ಪೈಕಿ ಮೃತಪಟ್ಟವರು ಮತ್ತು ಸ್ಥಳಾಂತರಗೊಂಡವರು ಎಂದು ವರ್ಗೀಕರಿಸಲಾದವರ ಸಂಖ್ಯೆ ಮಾತ್ರ 35,93,648ಕ್ಕೆ ತಲುಪಿದೆ ಎಂದು ಅವರು ತಿಳಿಸಿದರು.

‘ಲ್ಯಾಪ್‌ಟಾಪ್, ಸಾಫ್ಟ್‌ವೇರ್‌ಗಿಂತ ನೆಲದ ವಾಸ್ತವ ಮುಖ್ಯ’

ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿ ಮಾತನಾಡಿದ ನೂರ್ ಶ್ರೀಧರ್, ಚುನಾವಣಾ ಅಧಿಕಾರಿಗಳು ನೆಲದ ವಾಸ್ತವವನ್ನು ಅರಿಯದೆ ಕೇವಲ ಲ್ಯಾಪ್‌ಟಾಪ್ ಮತ್ತು ಸಾಫ್ಟ್‌ವೇರ್‌ಗಳನ್ನು ಅವಲಂಬಿಸಿದ್ದಾರೆ ಎಂದು ಟೀಕಿಸಿದರು.

“ರಾಜ್ಯದ 20 ಜಿಲ್ಲೆಗಳಿಂದ ಪ್ರತಿನಿಧಿಗಳು ಇಲ್ಲಿಗೆ ಬಂದಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಬಂದು ಅವರ ಅಹವಾಲುಗಳನ್ನು ನೇರವಾಗಿ ಆಲಿಸಬೇಕು. ‘ಮೂವರು ಮಾತ್ರ ಬಂದು ಮಾತನಾಡಿ’ ಎನ್ನುವ ರೀತಿಯ ಮುಚ್ಚಿದ ಬಾಗಿಲಿನ ಮಾತುಕತೆಯನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲವೂ ಪಾರದರ್ಶಕವಾಗಿ, ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ ಎದುರಲ್ಲೇ ನಡೆಯಬೇಕು” ಎಂದು ಅವರು ಹೇಳಿದರು.

ಎಸ್‌ಐಆರ್ ಪ್ರಕ್ರಿಯೆ ಸರಿಯಾಗಿದೆ ಎಂದು ಚುನಾವಣಾ ಆಯೋಗ ಭಾವಿಸಿದರೆ, ಅದನ್ನು ಸಾರ್ವಜನಿಕವಾಗಿ ಸಮರ್ಥಿಸಬೇಕು. ಹೋರಾಟಗಾರರ ಆರೋಪಗಳು ತಪ್ಪಾಗಿದ್ದರೆ ಅದನ್ನೂ ಜನರ ಮುಂದೆಯೇ ಸಾಬೀತುಪಡಿಸಬೇಕು. ಆಯೋಗದ ಅಧಿಕಾರಿಗಳು ಹೊರಗೆ ಬಂದು ಜನರ ಮಾತು ಕೇಳಬೇಕು; ಇಲ್ಲದಿದ್ದರೆ ಶಾಂತಿಯುತವಾಗಿ ಆಯೋಗದ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.

ರಾಜ್ಯ ಸರ್ಕಾರದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಮತದಾರರ ಹಕ್ಕು ರಕ್ಷಣೆಗೆ ಸರ್ಕಾರದ ಬಳಿ ಸಮಗ್ರ ಯೋಜನೆಯಿಲ್ಲ ಎಂದು ಆರೋಪಿಸಿದರು. ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸರ್ಕಾರ ಕೈಚೆಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ರಕ್ಷಣೆಗೆ ಸ್ಪಷ್ಟ ಯೋಜನೆ ರೂಪಿಸಬೇಕು ಅಥವಾ ನಾಗರಿಕ ಸಮಾಜದ ಸಲಹೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

‘ಅಗತ್ಯವಿದ್ದರೆ ಜೈಲಿಗೂ ಸಿದ್ಧ’

ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಿರುವುದಾಗಿ ನೂರ್ ಶ್ರೀಧರ್ ತಿಳಿಸಿದರು. ಬೇಡಿಕೆಗಳ ಕುರಿತು ತೀರ್ಮಾನವಾಗುವವರೆಗೆ ಸ್ಥಳದಿಂದ ತೆರಳುವುದಿಲ್ಲ. ಪೊಲೀಸರು ಬಂಧಿಸಿದರೂ ಹೋರಾಟ ಮುಂದುವರಿಯಲಿದೆ. ಅಗತ್ಯವಿದ್ದರೆ ಜಾಮೀನು ಪಡೆಯದೆ ಪರಪ್ಪನ ಅಗ್ರಹಾರ ಜೈಲಿನಲ್ಲೂ ಕಾಲ ಕಳೆಯಲು ಸಿದ್ಧರಿದ್ದೇವೆ ಎಂದು ಹೇಳಿದರು.

ಹೋರಾಟ ಸಮಿತಿಯು ಅರ್ಹ ಮತದಾರರನ್ನು ಸಮರ್ಪಕ ಕಾರಣವಿಲ್ಲದೆ ಪಟ್ಟಿಯಿಂದ ಕೈಬಿಡಬಾರದು, ಈಗಾಗಲೇ ಹೆಸರು ಡಿಲೀಟ್ ಆಗಿರುವವರಿಗೆ ಮೇಲ್ಮನವಿ ಸಲ್ಲಿಸಿ ಮರುಸೇರ್ಪಡೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದೆ. ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಲು ಪ್ರತಿ ಬೂತ್‌ನ ಪ್ರತಿಯೊಂದು ಮನೆಗೂ ತಲುಪುವ ವಿಶೇಷ ಅಭಿಯಾನ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ಸ್ಥಳಾಂತರಗೊಂಡ ಮತದಾರರಿಗೆ ನಮೂನೆ-8 ಮೂಲಕ ಪ್ರಸ್ತುತ ವಿಳಾಸಕ್ಕೆ ಮತದಾರರ ನೋಂದಣಿ ವರ್ಗಾಯಿಸಿಕೊಳ್ಳಲು ಅವಕಾಶ ನೀಡಬೇಕು. 43 ಲಕ್ಷ ಮತದಾರರಿಗೆ ನೀಡಿರುವ ನೋಟಿಸ್‌ಗಳ ವಿವರಗಳನ್ನು ಕಾರಣಗಳ ಸಮೇತ ಸಾರ್ವಜನಿಕಗೊಳಿಸಬೇಕು ಹಾಗೂ ಅವರಿಗೆ ಅನಗತ್ಯ ದಾಖಲೆಗಳ ಒತ್ತಾಯದ ಮೂಲಕ ಕಿರುಕುಳ ನೀಡಬಾರದು ಎಂದು ಸಮಿತಿ ಆಗ್ರಹಿಸಿದೆ.

ಇದರ ಜತೆಗೆ ಗ್ರಾಮ ಮತ್ತು ವಾರ್ಡ್ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಆಕ್ಷೇಪಣೆ ಮತ್ತು ಮೇಲ್ಮನವಿ ಸಲ್ಲಿಸಲು ನೀಡಿರುವ ಅವಧಿಯನ್ನು ಕನಿಷ್ಠ ಆರು ತಿಂಗಳಿಗೆ ವಿಸ್ತರಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಗಿದೆ.

ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿ, ಅರ್ಹ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರದ ಮೇಲಿದೆ. ತಾಂತ್ರಿಕ ಪ್ರಕ್ರಿಯೆಗಳಿಗೆ ಸೀಮಿತವಾಗದೆ ನೆಲದ ವಾಸ್ತವವನ್ನು ಪರಿಗಣಿಸಿ ಪಾರದರ್ಶಕವಾಗಿ ಕ್ರಮ ಕೈಗೊಳ್ಳಬೇಕು ಎಂದು ನೂರ್ ಶ್ರೀಧರ್ ಒತ್ತಾಯಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಎಸ್‌ಟಿ ಸಂಗ್ರಹ ಶೇ. 14.8ರಷ್ಟು ಏರಿಕೆ: ಆಗಸ್ಟನಲ್ಲಿ ₹2 ಲಕ್ಷ ಕೋಟಿ ವರಮಾನಬಿಜೆಪಿ–ಜೆಡಿಎಸ್‌ನ ನೋಬಾಲ್, ಫುಲ್‌ಟಾಸ್‌ಗೆ ನನ್ನ ವಿಕೆಟ್ ಬೀಳುವುದಿಲ್ಲ: ಪ್ರಿಯಾಂಕ್ ಖರ್ಗೆಡಿಸಿಪಿ ನೇಮಗೌಡ ಮೇಲೆ ಹಲ್ಲೆ ಆರೋಪ: ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ವಿರುದ್ಧ ಜೆಡಿಎಸ್ ವಾಗ್ದಾಳಿಜಿಡಿಪಿ ಅಂಕಿಅಂಶ ತಿರುಚಿ ಆರ್ಥಿಕ ದುಸ್ಥಿತಿ ಮರೆಮಾಚಲಾಗುತ್ತಿದೆ: ಕಾಂಗ್ರೆಸ್‘2028ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ’: ಬಿ.ವೈ. ವಿಜಯೇಂದ್ರ‘ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು: ನೂರ್ ಶ್ರೀಧರ ಆಗ್ರಹ‘ಎಸ್‌ಐಆರ್ ದೇಶವನ್ನು ಹಾಳು ಮಾಡುವ ಸಂಚು’: ನಟ ಪ್ರಕಾಶ ರಾಜ್ದೇಶಾದ್ಯಂತ ನೀಟ್ ಪ್ರತಿಭಟನಾಕಾರರ ವಿರುದ್ಧದ ಎಲ್ಲ ಎಫ್‌ಐಆರ್ ರದ್ದುಗೊಳಿಸಿದ ಸುಪ್ರೀಂ ಕೋರ್ಟದೇಶಾದ್ಯಂತ ಟೀಕೆಗೆ ಗುರಿಯಾದ ಝೀ ಗ್ರೂಪ್ ಮುಖ್ಯಸ್ಥನ ₹22,000 ಕೋಟಿ ಸಾಲ ಮನ್ನಾ ಆದೇಶಕ್ಕೆ ತಡೆಇರಾನ್ ಸಂಘರ್ಷದ ನಡುವೆಯೂ ಭಾರತದ ಜಿಡಿಪಿ ಶೇ 7.8ರ ಬೆಳವಣಿಗೆ: ಪ್ರಧಾನಿ ಮೋದಿ