LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ವಾರದಲ್ಲಿ ಎರಡು ದಿನ ʼವರ್ಕ್ ಫ್ರಂ ಹೋಮ್ : ದಿಲ್ಲಿ ಸರಕಾರ ಘೋಷಣೆ

ಹೊಸದಿಲ್ಲಿ, ಮೇ 14 : ದೇಶದಲ್ಲಿ ಉಂಟಾಗಿರುವ ಇಂಧನ ಬಿಕ್ಕಟ್ಟು ಹಾಗೂ ಪೆಟ್ರೋಲ್‌ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೀಡಿದ ಮನವಿಗೆ ಸ್ಪಂದಿಸಿರುವ ದಿಲ್ಲಿ ಸರಕಾರ ಗುರುವಾರ ಪ್ರಕಟಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, ದಿಲ್ಲಿ ಸರಕಾರದ ಎಲ್ಲಾ ನೌಕರರು ವಾರದಲ್ಲಿ ಎರಡು ದಿನಗಳ ಕಾಲ ಮನೆಯಿಂದಲೇ ಕೆಲಸ ನಿರ್ವಹಿಸಲಿದ್ದಾರೆ. ಕಚೇರಿಗಳಿಗೆ ಆಗಮಿಸುವ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ವಾಹನ ಸಂಚಾರ ಮತ್ತು ಇಂಧನ ಬಳಕೆಯನ್ನು ನಿಯಂತ್ರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಇದರ ಜೊತೆಗೆ ಸರಕಾರಿ ಇಲಾಖೆಗಳ ಸಭೆಗಳಲ್ಲಿ ಕನಿಷ್ಠ 50 ಶೇಕಡಾ ಸಭೆಗಳನ್ನು ಆನ್‌ಲೈನ್‌ ಮೂಲಕ ನಡೆಸಲು ತೀರ್ಮಾನಿಸಲಾಗಿದೆ. ಅಧಿಕಾರಿಗಳು ಅನಗತ್ಯ ಪ್ರಯಾಣ ತಪ್ಪಿಸಿ ಡಿಜಿಟಲ್‌ ವ್ಯವಸ್ಥೆಯನ್ನು ಹೆಚ್ಚು ಬಳಸುವಂತೆ ಸೂಚಿಸಲಾಗಿದೆ.

ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ದಿಲ್ಲಿ ಸರಕಾರ ಹಾಗೂ ದಿಲ್ಲಿ ಮಹಾನಗರ ಪಾಲಿಕೆ ತಮ್ಮ ಕಚೇರಿ ವೇಳಾಪಟ್ಟಿಗಳಲ್ಲೂ ಬದಲಾವಣೆ ತರಲಿವೆ. ವಿವಿಧ ಇಲಾಖೆಗಳ ಕಚೇರಿ ಸಮಯವನ್ನು ಹಂತ ಹಂತವಾಗಿ ನಿಗದಿಪಡಿಸುವ ಮೂಲಕ ಒಂದೇ ಸಮಯದಲ್ಲಿ ವಾಹನಗಳ ಒತ್ತಡ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಇಂಧನ ಬಳಕೆ ತಗ್ಗಿಸುವ ಉದ್ದೇಶದಿಂದ ಸರಕಾರಿ ವಾಹನಗಳ ಬಳಕೆಯ ಮೇಲೂ ನಿಯಂತ್ರಣ ಹೇರಲಾಗಿದೆ. ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ಪೆಟ್ರೋಲ್‌ ಮಿತಿಯನ್ನು ಶೇ.20ರಷ್ಟು ಕಡಿತಗೊಳಿಸಲಾಗಿದ್ದು, ಮಾಸಿಕ ಪೆಟ್ರೋಲ್‌ ಬಳಕೆಗೆ ನಿಗದಿಪಡಿಸಿದ್ದ 200 ಲೀಟರ್‌ ಮಿತಿಯನ್ನು ಇಳಿಕೆ ಮಾಡಲಾಗಿದೆ.

ಮುಂದಿನ ಆರು ತಿಂಗಳ ಅವಧಿಯಲ್ಲಿ ಯಾವುದೇ ಹೊಸ ಸರಕಾರಿ ವಾಹನಗಳನ್ನು ಖರೀದಿಸಬಾರದು ಎಂದು ದಿಲ್ಲಿ ಸರಕಾರ ಆದೇಶ ಹೊರಡಿಸಿದೆ. ಈಗಿರುವ ವಾಹನಗಳ ಬಳಕೆಯನ್ನು ಮಾತ್ರ ಅಗತ್ಯಕ್ಕೆ ಅನುಗುಣವಾಗಿ ನಿರ್ವಹಿಸುವಂತೆ ಸೂಚಿಸಲಾಗಿದೆ.

ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸಲು ವಿಶೇಷ ಕ್ರಮಗಳನ್ನೂ ಘೋಷಿಸಲಾಗಿದೆ. ಸರಕಾರಿ ನೌಕರರು ಖಾಸಗಿ ವಾಹನಗಳ ಬದಲು ಬಸ್‌ಗಳ ಮೂಲಕ ಪ್ರಯಾಣಿಸಲು ಅನುಕೂಲವಾಗುವಂತೆ 58 ವಿಶೇಷ ಬಸ್‌ಗಳನ್ನು ನಿಯೋಜಿಸಲಾಗುವುದು ಎಂದು ಸರಕಾರ ತಿಳಿಸಿದೆ.

ಇಂಧನ ಉಳಿತಾಯ, ಮಾಲಿನ್ಯ ನಿಯಂತ್ರಣ ಮತ್ತು ನಗರ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಈ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ದಿಲ್ಲಿ ಸರಕಾರ ಸ್ಪಷ್ಟಪಡಿಸಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST