ಹೊಸದಿಲ್ಲಿ, ಮೇ 15 : ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ-ಪದವಿ (ನೀಟ್-ಯುಜಿ)ಯನ್ನು 2027ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷಾ ಮಾದರಿಗೆ ಪರಿವರ್ತಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಡುವೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಸಿಬಿಟಿ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ 2026ರ ನೀಟ್-ಯುಜಿ ಮರು ಪರೀಕ್ಷೆಯನ್ನು ಜೂನ್ 21ರಂದು ನಡೆಸಲಾಗುವುದು ಎಂದು ತಿಳಿಸಿದರು. ಆದರೆ ಈ ಮರು ಪರೀಕ್ಷೆಯನ್ನು ಆಫ್‌ಲೈನ್ ಹಾಗೂ ಪೆನ್-ಪೇಪರ್ ಮಾದರಿಯಲ್ಲಿಯೇ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಪರೀಕ್ಷೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.