ಬೆಂಗಳೂರು, ಜೂ. 5 : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ನೂತನ ಸಚಿವ ಸಂಪುಟಕ್ಕೆ ಖಾತೆ ಹಂಚಿಕೆ ನಡೆದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಧ್ವನಿಗಳು ಹೆಚ್ಚುತ್ತಿವೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಹಿರಿಯ ಸಚಿವ ಕೆ.ಎಚ್.ಮುನಿಯಪ್ಪ ಕೂಡ ತಮಗೆ ನೀಡಲಾದ ಖಾತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ಖಾತೆ ಹಂಚಿಕೆ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ.
ತಮಗೆ ಸಮಾಜ ಕಲ್ಯಾಣ ಅಥವಾ ಕೃಷಿ ಖಾತೆ ನೀಡುವಂತೆ ಪಕ್ಷದ ನಾಯಕತ್ವವನ್ನು ಮನವಿ ಮಾಡಿರುವುದಾಗಿ ಹೇಳಿದ ಅವರು, ಸಚಿವ ಸಂಪುಟದಲ್ಲಿ ಹಿರಿಯ ನಾಯಕರಿಗೆ ಸಿಗಬೇಕಾದ ಗೌರವ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ರಾಜಕೀಯ ಹಿರಿತನ ಮತ್ತು ಅನುಭವವನ್ನು ಪರಿಗಣಿಸಿ ಸೂಕ್ತ ಖಾತೆ ನೀಡುವವರೆಗೆ ಈಗ ಹಂಚಿಕೆ ಮಾಡಿರುವ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಾಯಕತ್ವ ಈ ತಪ್ಪನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಆದರೆ ಪಕ್ಷದ ವಿರುದ್ಧ ಯಾವುದೇ ಬಂಡಾಯದ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಮುನಿಯಪ್ಪ, ಕಾಂಗ್ರೆಸ್ ನನಗೆ ತಾಯಿಯ ಸಮಾನ. ಆದ್ದರಿಂದ ಸಚಿವ ಸ್ಥಾನಕ್ಕೆ ಅಥವಾ ಪಕ್ಷಕ್ಕೆ ರಾಜೀನಾಮೆ ನೀಡುವ ವಿಚಾರವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಸಚಿವ ಸಂಪುಟದ ಖಾತೆ ಹಂಚಿಕೆ ವಿಚಾರ ಕಾಂಗ್ರೆಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ನಾಯಕತ್ವ ಈ ಭಿನ್ನಮತಗಳನ್ನು ಹೇಗೆ ಬಗೆಹರಿಸುತ್ತದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.