LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಅಚ್ಚುಕಟ್ಟಾಗಿ ಬೆಳಗಾವಿ ಅಧಿವೇಶನ ನಡೆಸಲು ಯು.ಟಿ.ಖಾದರ್ ಸೂಚನೆ

ಬೆಳಗಾವಿ, ನ. 7 : ವಿಧಾನ ಮಂಡಳದ ಕಲಾಪಗಳನ್ನು ಸುಗಮವಾಗಿ ನಡೆಸಲು ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.



ವಿಧಾನ ಮಂಡಳ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಮತ್ತು ವಿವಿಧ ಸಮಿತಿಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಧಿವೇಶನ ಸಂದರ್ಭದಲ್ಲಿ ಯಾವುದೇ ರೀತಿಯ ಅವ್ಯವಸ್ಥೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಏನೇ ಸಮಸ್ಯೆಗಳಿದ್ದರೆ ಅಥವಾ ಹೆಚ್ಚಿನ ಅನುಕೂಲತೆ ಬೇಕಾದರೆ ತಮ್ಮ ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿಗಳು ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂದರು.



ಪ್ರತಿವರ್ಷದಂತೆ ವಿಧಾನಮಂಡಳ ಚಳಿಗಾಲ ಅಧಿವೇಶನಕ್ಕೆ ಸಚಿವರು, ಶಾಸಕರು, ಅಧಿಕಾರಿಗಳು, ಪತ್ರಕರ್ತರು, ಗಣ್ಯರು ಸೇರಿದಂತೆ ಸಾವಿರಾರು ಜನರು ಆಗಮಿಸುತ್ತಾರೆ. ಆದ್ದರಿಂದ ಉತ್ತಮ ಹಾಗೂ ಗುಣಮಟ್ಟದ ಆಹಾರ, ವಸತಿ, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು.



ಮದುವೆ ಸಮಾರಂಭಗಳು ಅದೇ ಸಮಯದಲ್ಲಿ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ಕೆಲವು ನಿರ್ದಿಷ್ಟ ಹೋಟೆಲ್ ಗಳಲ್ಲಿ ಸಾರ್ವಜನಿಕರಿಗೆ ಶೇ.10 ರಷ್ಟು ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಮುಂಚಿತವಾಗಿ ಹೋಟೆಲ್ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ತಿಳಿಸಿದರು.



ವಸತಿ, ಊಟೋಪಹಾರ ಮತ್ತು ಸಾರಿಗೆ ವ್ಯವಸ್ಥೆಯನ್ನು ಕಳೆದ ಬಾರಿಯಂತೆಯೇ ಮುಂದುವರಿಸಬೇಕು. ಕೆಲವು ಹೊಸ ಹೊಸ ಬೇಡಿಕೆಗಳಿರಬಹುದು. ಆದರೆ ಪ್ರತಿವರ್ಷದ ಪದ್ಧತಿಯನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.



ಮುದ್ರಣ, ಲೇಖನ ಸಾಮಗ್ರಿಗಳನ್ನು ಅಗತ್ಯತೆ ಆಧರಿಸಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಲಭ್ಯವಾಗಿಟ್ಟುಕೊಳ್ಳಬೇಕು. ಸುವರ್ಣ ವಿಧಾನಸೌಧ, ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ತಂಗುವ ಹೋಟೆಲ್ ಗಳ ಬಳಿ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಲು ತಂಡಗಳನ್ನು ನಿಯೋಜಿಸಬೇಕು ಎಂದರು.



ಸಂಪೂರ್ಣ ವಿಧಾನಸೌಧ ಕಾಣಿಸುವಂತಹ ಸೆಲ್ಫಿ ಸ್ಪಾಟ್ ನಿಗದಿಪಡಿಸಬೇಕು. ಅಧಿವೇಶನ ಕಲಾಪ ವೀಕ್ಷಣೆಗೆ ಆಗಮಿಸುವ ಜನರಿಗೆ ಇದೊಂದು ಸ್ಮರಣೀಯ ಅವಕಾಶವಾಗಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರು ಹೇಳಿದರು.



ಸುವರ್ಣ ಸೌಧ ಮುಂಭಾಗ ಸುಂದರ ಉದ್ಯಾನ ನಿರ್ಮಾಣಕ್ಕೆ ಸಭಾಪತಿ ಹೊರಟ್ಟಿ ಸೂಚನೆ:



ಅಧಿವೇಶನ ಸಂದರ್ಭದಲ್ಲಿ ವಿಧಾನಸೌಧದ ಹೊರಗಡೆ ಆವರಣದಲ್ಲಿ ಚಾಲಕರು, ಇತರೆ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಸಾಧ್ಯವಾದರೆ ಕೂಪನ್‌ ನೀಡಬಹುದು ಎಂದು ಬಸವರಾಜ ಹೊರಟ್ಟಿ ಹೇಳಿದರು. ಕಲಾಪ ವೀಕ್ಷಣೆಗೆ ಆಗಮಿಸುವ ಶಾಲಾ ಮಕ್ಕಳ ಬಸ್ ಗಳಿಗೆ ವಿಧಾನಸೌಧದ ಒಳಗಡೆಯ ಮುಖ್ಯದ್ವಾರದ ವರೆಗೆ ಅವಕಾಶ ಕಲ್ಪಿಸಬೇಕು ಎಂದು ಪೊಲೀಸ್ ಇಲಾಖೆಯ ಆಯುಕ್ತರಿಗೆ ತಿಳಿಸಿದರು.



ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಸುಂದರ ಉದ್ಯಾನ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆಯವರು ಪರಿಶೀಲನೆ ನಡೆಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು. ಈಗಾಗಲೇ ಅನುಮೋದನೆಯಾಗಿರುವ ಉದ್ಯಾನ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು. ಈ ಬಗ್ಗೆ ಒಂದು ವಾರದೊಳಗೆ ವರದಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.



ಸಭೆಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು, ಡಿಸೆಂಬರ್ ನಲ್ಲಿ ಮದುವೆ ಸಮಾರಂಭಗಳು ಇರುವುದರಿಂದ ಕೆಲವು ವಸತಿಗೃಹಗಳಲ್ಲಿ ಸಾರ್ವಜನಿಕರಿಗೂ ಸ್ವಲ್ಪ ಪ್ರಮಾಣದಲ್ಲಿ ಕೊಠಡಿಗಳನ್ನು ಒದಗಿಸಲು ಅವಕಾಶ ಕಲ್ಪಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.



ಅಧಿವೇಶನದ ಪೂರ್ವಸಿದ್ಧತೆ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು  ಸಭೆಯಲ್ಲಿ ಮಾಹಿತಿ ನೀಡಿದರು. ವಸತಿ, ಊಟೋಪಹಾರ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಲಾಗಿದ್ದು, ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.



ಕಳೆದ ವರ್ಷ ಖಾಸಗಿ ವಾಹನಗಳನ್ನು ಪಡೆಯದೇ ಸರಕಾರಿ ವ್ಯವಸ್ಥೆ ಬಳಸಿಕೊಂಡು ಕಾರ್ಯನಿರ್ವಹಿಸಲಾಗಿದೆ. ಕಳೆದ ಬಾರಿಯಂತೆ ಶಾಸಕರ ಆಪ್ತ ಸಹಾಯಕರು, ಗನ್ ಮ್ಯಾನ್ ಮತ್ತಿತರರಿಗೆ ಪಾವತಿ ಆಧಾರದ ಮೇಲೆ ಕೆಲವೊಂದು ಹೋಟೆಲ್ ಗಳನ್ನು ನಿಗದಿಪಡಿಸಲಾಗಿತ್ತು. ಈ ಬಾರಿಯೂ ಕೂಡ ಅದೇ ರೀತಿ ಮಾಡಲಾಗುವುದು. ಅಧಿವೇಶನದ ವಸತಿ ಹಂಚಿಕೆ, ಅಧಿಕಾರಿಗಳ ವಿವರ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಒಳಗೊಂಡ ಕ್ಯೂಆರ್ ಕೋಡ್ ಪುಸ್ತಿಕೆಯ ಸಾಫ್ಟ್ ಪ್ರತಿಯನ್ನು ಪ್ರತಿಯೊಬ್ಬರಿಗೂ ವಿತರಿಸಲಾಗುವುದು. ಇದಲ್ಲದೇ ಕ್ಯೂಆರ್ ಕೋಡ್ ಅನ್ನು ಸುವರ್ಣ ವಿಧಾನಸೌಧದ ಮೂಲೆ ಮೂಲೆಗಳಲ್ಲಿ ಪ್ರದರ್ಶಿಸಲಾಗುವುದು. ಆರೋಗ್ಯ ಸಮಿತಿಯು ಸುವರ್ಣ ವಿಧಾನಸೌಧ, ವಸತಿಗೃಹಗಳು ಸೇರಿದಂತೆ ಪ್ರತಿಯೊಂದು ಕಡೆಗಳಲ್ಲಿ ವೈದ್ಯಕೀಯ ತಂಡಗಳನ್ನು ಮತ್ತು ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.



ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಮಾತನಾಡಿ, ಪೊಲೀಸ್ ವಸತಿಗೆ ವಿಶೇಷ ತಾತ್ಕಾಲಿಕ ಟೌನಶಿಪ್ ನಿರ್ಮಿಸಿ ಕೊಡಲಾಗುತ್ತಿದೆ. ಒಟ್ಟು 22 ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದ್ದು, ಜಿಲ್ಲಾಡಳಿತದ ಸಮನ್ವಯದೊಂದಿಗೆ ಸಮರ್ಪಕ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.



ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಉಪಸ್ಥಿತರಿದ್ದರು. ವಸತಿ, ಊಟ, ಸಾರಿಗೆ, ಆರೋಗ್ಯ ಸೇರಿದಂತೆ ವಿವಿಧ ಸಮಿತಿಗಳ ಮುಖ್ಯಸ್ಥರು, ಇದುವರೆಗಿನ ಸಿದ್ಧತೆಗಳನ್ನು ಸಭೆಯಲ್ಲಿ ವಿವರಿಸಿದರು.



 
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಎಪಿ ನಾಯಕ ದೀಪಕ ಸಿಂಗ್ಲಾ ಮನೆ ಮೇಲೆ ಇ.ಡಿ ದಾಳಿಮೇ 20ರ ಸಾರಿಗೆ ಮುಷ್ಕರ ನಿಲ್ಲದು : ನೌಕರರ ಪಟ್ಟು ಮುಸ್ಲಿಮರ 10 ಪ್ರಮುಖ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿ: ಸಮಾವೇಶದಲ್ಲಿ ಒತ್ತಾಯಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ : ಶಿವಾನಂದ ನೀಲಣ್ಣನವರ್‌ ಆಸ್ತಿ ಜಪ್ತಿ ಶುರುನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ : ಎನ್‌ಟಿಎ ಪ್ರಶ್ನೆಪತ್ರಿಕೆ ಸಮಿತಿಯ ಜೀವಶಾಸ್ತ್ರ ಉಪನ್ಯಾಸಕಿ ಬಂಧನಮಾಲ್ಡೀವ್ಸ್‌ನಲ್ಲಿ ಕೇವ್‌ ಸ್ಕೂಬಾ ಡೈವಿಂಗ್ ದುರಂತ : ಇಟಲಿಯ 5 ಪ್ರಜೆಗಳ ಸಾವುಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ಏನು ಮಾಡಿದ್ದಾರೆ : ಸಚಿವೆ ಹೆಬ್ಬಾಳ್ಕರ ಪ್ರಶ್ನೆಸುದೀರ್ಘ ವಿಚಾರಣೆ ನಂತರ ಶಿವಂ ಅಸೋಸಿಯೇಟ್ಸ ಶಿವಾನಂದ‌ ನೀಲಣ್ಣವರ ಬಂಧನ : ಸಾವಿರಾರು ಕೋಟಿ ಅಕ್ರಮ ಹಣ ಸಂಗ್ರಹ ಶಂಕೆಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವು