ಕಠ್ಮಂಡು, ಮೇ 22 : ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ ಶಿಖರ ಏರಿ ತಮ್ಮ ಕನಸು ನನಸಾಗಿಸಿಕೊಂಡಿದ್ದ ಇಬ್ಬರು ಭಾರತೀಯ ಪರ್ವತಾರೋಹಿಗಳು ಇಳಿಯುವ ವೇಳೆ ಸಾವನ್ನಪ್ಪಿರುವ ದುರ್ಘಟನೆ ನೇಪಾಳದಲ್ಲಿ ನಡೆದಿದೆ.
ಮೃತರನ್ನು ಅರುಣ ಕುಮಾರ ತಿವಾರಿ ಮತ್ತು ಸಂದೀಪ ಅರೆ ಎಂದು ಗುರುತಿಸಲಾಗಿದೆ. ತೀವ್ರ ಆಯಾಸವೇ ಸಾವಿಗೆ ಕಾರಣ ಎಂದು ಹೇಳಲಾಗಿದೆ.
ನೇಪಾಳದ ಯಾತ್ರೆ ನಿರ್ವಾಹಕರ ಸಂಘದ ಪ್ರಧಾನ ಕಾರ್ಯದರ್ಶಿ ರಿಷಿ ಭಂಡಾರಿ ಮಾಹಿತಿ ನೀಡಿ, ಶಿಖರ ಇಳಿಯುವಾಗ ಇಬ್ಬರೂ ತೀವ್ರ ದಣಿವಿನಿಂದ ಬಳಲುತ್ತಿದ್ದರು. ಮಾರ್ಗದರ್ಶಕರು ಅವರನ್ನು ರಕ್ಷಿಸಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಸಂದೀಪ ಅರೆ ಬುಧವಾರ ಎವರೆಸ್ಟ ಶಿಖರ ತಲುಪಿದ್ದರೆ, ಅರುಣ ಕುಮಾರ ತಿವಾರಿ ಗುರುವಾರ ಸಂಜೆ ಸುಮಾರು 5.30ರ ವೇಳೆಗೆ ಶಿಖರ ಏರಿದ್ದರು. ಮಾರ್ಗದರ್ಶಕರು ಕೊನೆಯವರೆಗೂ ರಕ್ಷಣಾ ಕಾರ್ಯ ಮುಂದುವರಿಸಿದರೂ ಇಬ್ಬರನ್ನೂ ಉಳಿಸಲಾಗಲಿಲ್ಲ ಎಂದು ರಿಷಿ ಭಂಡಾರಿ ಹೇಳಿದ್ದಾರೆ.
ಸಂದೀಪ್ ಅರೆ ಗುರುವಾರ ಮೃತಪಟ್ಟಿದ್ದು, ಅರುಣ ಕುಮಾರ ತಿವಾರಿ ಯಾವ ಸಮಯದಲ್ಲಿ ಸಾವನ್ನಪ್ಪಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಬುಧವಾರ ಒಂದೇ ದಿನದಲ್ಲಿ 274 ಪರ್ವತಾರೋಹಿಗಳು 8,848.86 ಮೀಟರ್ ಎತ್ತರದ ಎವರೆಸ್ಟ ಶಿಖರ ಏರಿದ್ದು, ಇದು ಹೊಸ ದಾಖಲೆಯಾಗಿದೆ. ಆ ತಂಡದಲ್ಲಿ ಸಂದೀಪ್ ಅರೆ ಮತ್ತು ಅರುಣ ಕುಮಾರ ತಿವಾರಿ ಕೂಡ ಸೇರಿದ್ದರು.
ಇನ್ನಿಬ್ಬರು ಭಾರತೀಯ ಪರ್ವತಾರೋಹಿಗಳಾದ ತುಳಸಿ ರೆಡ್ಡಿ ಪಲ್ಪುನುರಿ ಮತ್ತು ಅಜಯ ಪಾಲ್ ಸಿಂಗ್ ಧಲಿವಾಲ್ ಸಹ ಯಶಸ್ವಿಯಾಗಿ ಶಿಖರ ತಲುಪಿದ್ದರು. ಗುರುವಾರ ಭಾರತದ ಲಕ್ಷ್ಮಿಕಾಂತ ಮಂಡಲ್ ಕೂಡ ವಿಶ್ವದ ಅತಿ ಎತ್ತರದ ಶಿಖರ ಏರಿದ ಸಾಧನೆ ಮಾಡಿದರು.