ಬೆಂಗಳೂರು, ಅ. ೮ (ಸಮದರ್ಶಿ ಸುದ್ದಿ): ದೇಶದಲ್ಲಿ ‘ಮತಗಳ ಕಳ್ಳತನ’ ನಡೆಯುತ್ತಿದೆ ಎಂಬುದಕ್ಕೆ ಮೂರು ಸಾಕ್ಷ್ಯಗಳನ್ನು ನೀಡುವುದಾಗಿ ಹೇಳಿರುವ ಜರ್ಮನಿಯಲ್ಲಿ ನೆಲೆಸಿರುವ ಖ್ಯಾತ ಭಾರತೀಯ ಯೂಟ್ಯೂಬರ್ ಹಾಗೂ ರಾಜಕೀಯ ವಿಶ್ಲೇಷಕ ಧ್ರುವ ರಾಠಿ, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ ಶಾ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆ ಹಾಗೂ ‘ಜನತಾ ನ್ಯಾಯಾಲಯ’ ಸಮಾವೇಶದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು ಎಂದು ತಿಳಿಸಿದರು.
ನಾನು ಸರ್ಕಾರ ಬದಲಿಸಲು ಬೆಂಗಳೂರಿಗೆ ಬಂದಿದ್ದೇನೆ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಆದರೆ ಸರ್ಕಾರ ಬದಲಿಸುವ ಉದ್ದೇಶದಿಂದ ಬಂದಿಲ್ಲ. ಉದ್ಯಮಿ ಎಲಾನ್ ಮಸ್ಕ್ ಅಥವಾ ಜಾರ್ಜ್ ಸೊರೊಸ್ ಅವರಿಂದ ಯಾವುದೇ ಹಣ ಪಡೆದಿಲ್ಲ. ಸಾಮಾನ್ಯ ನಾಗರಿಕನಾಗಿ ಮತದಾನದ ಹಕ್ಕುಗಳ ರಕ್ಷಣೆಗಾಗಿ ಧ್ವನಿ ಎತ್ತುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಎಸ್‌ಐಆರ್ ಪ್ರಕ್ರಿಯೆ ಎಲ್ಲ ನಾಗರಿಕರ ಮೇಲೂ ಪರಿಣಾಮ ಬೀರುವ ವಿಷಯವಾಗಿದೆ. ಬಿಜೆಪಿ ಬೆಂಬಲಿಗರು ಸೇರಿದಂತೆ ಪ್ರತಿಯೊಬ್ಬ ಮತದಾರರೂ ಈ ಹೋರಾಟವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಪಶ್ಚಿಮ ಬಂಗಾಳದಲ್ಲಿ ಸುಮಾರು ೭೦ ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಚುನಾವಣೆಗೆ ಮೊದಲು ಪಟ್ಟಿಯಲ್ಲಿದ್ದ ಹೆಸರುಗಳು ಮತದಾನದ ಸಂದರ್ಭದಲ್ಲಿ ಕಾಣೆಯಾಗಿದ್ದು, ಚುನಾವಣೆ ಮುಗಿದ ಬಳಿಕ ಮತ್ತೆ ಕಾಣಿಸಿಕೊಂಡಿವೆ ಎಂದು ಆರೋಪಿಸಿದರು.
ಬಿಹಾರದಲ್ಲಿ ಸುಮಾರು ೭೫ ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿತ್ತು. ಸುಪ್ರೀಂ ಕೋರ್ಟ ಪ್ರಶ್ನಿಸುವವರೆಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಈ ಕುರಿತು ವಿವರ ನೀಡಿರಲಿಲ್ಲ. ನಂತರ ಸುಮಾರು ೧೪ ಲಕ್ಷ ಹೆಸರುಗಳನ್ನು ಸೇರಿಸಲಾಗಿದ್ದರೂ, ಯಾರನ್ನು ಕೈಬಿಡಲಾಗಿದೆ ಹಾಗೂ ಯಾರನ್ನು ಸೇರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ದೂರಿದರು.
ಗೋವಾದಲ್ಲಿಯೂ ೧೦೦ ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರಿಸಲು ಸಹಾಯಕ ಚುನಾವಣಾ ನೋಂದಣಾಧಿಕಾರಿಗೆ (ಎಆರ್‌ಒ) ಸಾಧ್ಯವಾಗದಿರುವುದನ್ನು ಉಲ್ಲೇಖಿಸಿದ ಅವರು, ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ತಮಗೆ ಬೇಕಾದಂತೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ ಧ್ರುವ ರಾಠಿ, ಇದರ ವಿರುದ್ಧ ಜಿಲ್ಲೆಯಿಂದ ಜಿಲ್ಲೆಗೆ ತೆರಳಿ ಜನಜಾಗೃತಿ ಮೂಡಿಸುತ್ತಿರುವ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಇದು ಯಾವುದೇ ರಾಜಕೀಯ ಪಕ್ಷದ ಹೋರಾಟವಲ್ಲ. ದೇಶದ ಪ್ರಜಾಪ್ರಭುತ್ವ ಹಾಗೂ ಮತದಾನದ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ನಾಗರಿಕ ಹೋರಾಟವಾಗಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರನ್ನು ಸಮರ್ಥಿಸಲು ಮುಂದಾಗಿರುವವರ ನಿಲುವನ್ನೂ ಅವರು ಟೀಕಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿರುವವರಿಗಿಂತ ದೊಡ್ಡ ದೇಶಭಕ್ತರು ಯಾರೂ ಇಲ್ಲ ಎಂದು ಹೇಳಿದ ಧ್ರುವ ರಾಠಿ, ‘ವೋಟ್ ಚೋರ್, ಗದ್ದಿ ಛೋಡ್’ ಹಾಗೂ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳೊಂದಿಗೆ ಭಾಷಣ ಮುಕ್ತಾಯಗೊಳಿಸಿದರು.