ಮುಂಬಯಿ, ನ. 19: ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಬೆದರಿಕೆ ಹಾಕಿರುವ ಧ್ವನಿಮುದ್ರಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮುಂಬಯಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
2024ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ ಹತ್ಯೆ ಪ್ರಕರಣದ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ಜೀಶನ್ ಅಖ್ತರ ಹೆಸರಿನಲ್ಲಿ ಬೆದರಿಕೆ ಸಂದೇಶ ಹರಿದಾಡುತ್ತಿದೆ. ರೋಹಿತ್ ಗೋದಾರ ಅಪರಾಧಿ ತಂಡದ ಹೆಸರಿನಲ್ಲಿ ಪ್ರಸಾರವಾಗಿರುವ ಧ್ವನಿಮುದ್ರಣ ನೈಜವಾದುದೇ ಅಥವಾ ಯಾರಾದರೂ ನಕಲಿಯಾಗಿ ಸೃಷ್ಟಿಸಿದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದಲ್ಲಿ ಜೀಶನ್ ಅಖ್ತರನನ್ನು ಲಾರೆನ್ಸ ಬಿಷ್ಣೋಯ ತಂಡದೊಂದಿಗೆ ಸಂಪರ್ಕ ಹೊಂದಿದ್ದ ಆರೋಪಿ ಎಂದು ಗುರುತಿಸಲಾಗಿತ್ತು. ಬಳಿಕ ವಿದೇಶಕ್ಕೆ ಪರಾರಿಯಾಗಿರುವುದಾಗಿ ಹಾಗೂ ರೋಹಿತ್ ಗೋದಾರ ತಂಡದೊಂದಿಗೆ ಗುರುತಿಸಿಕೊಂಡಿರುವುದಾಗಿ ಆತ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದ ಎನ್ನಲಾಗಿದೆ.
ಸೈಫ್ ಅವರ ಪತ್ನಿ ಕರೀನಾ ಕಪೂರ್‌ಗೆ ಸಂಬಂಧಿಸಿದ ಇತ್ತೀಚಿನ ವಿವಾದದ ಹಿನ್ನೆಲೆಯಲ್ಲಿ ಬೆದರಿಕೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಬೆದರಿಕೆಯ ಮೂಲ ಮತ್ತು ಉದ್ದೇಶ ಇನ್ನೂ ದೃಢಪಟ್ಟಿಲ್ಲ.
ಧ್ವನಿಮುದ್ರಣದ ನೈಜತೆ ಪತ್ತೆಹಚ್ಚಲು ವಿಧಿವಿಜ್ಞಾನ ಹಾಗೂ ಸೈಬರ್ ಅಪರಾಧ ತನಿಖಾ ತಂಡಗಳು ಧ್ವನಿಯ ಮಾದರಿಗಳನ್ನು ವಿಶ್ಲೇಷಿಸುತ್ತಿವೆ. ಕೃತಕ ಬುದ್ಧಿಮತ್ತೆ ಬಳಸಿ ನಕಲಿ ಬೆದರಿಕೆ ಸಂದೇಶಗಳನ್ನು ಸೃಷ್ಟಿಸುವ ಪ್ರಕರಣಗಳೂ ಹೆಚ್ಚುತ್ತಿರುವುದರಿಂದ ಪೊಲೀಸರು ಈ ಸಾಧ್ಯತೆಯನ್ನೂ ಪರಿಶೀಲಿಸುತ್ತಿದ್ದಾರೆ.
ಇತ್ತೀಚೆಗೆ ನಟರಾದ ಆಯುಷ್ಮಾನ ಖುರಾನಾ ಮತ್ತು ತುಷಾರ ಕಪೂರ ಅವರಿಗೆ ಬೆದರಿಕೆ ಸಂದೇಶ ಕಳುಹಿಸಿದ ಆರೋಪದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ವೈಭವ ಮಿಶ್ರಾ ಎಂಬ ತಂತ್ರಜ್ಞನನ್ನು ಮುಂಬಯಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು.
ಈ ಹಿಂದೆ ಸೈಫ ಅಲಿ ಖಾನ್ ತಮ್ಮ ಬಾಂದ್ರಾ ನಿವಾಸದಲ್ಲಿ ನಡೆದ ಇರಿತದ ದಾಳಿಯಿಂದ ಪಾರಾಗಿದ್ದರು. ನಟರಾದ ಸಲ್ಮಾನ ಖಾನ್, ಟೈಗರ್ ಶ್ರಾಫ್ ಹಾಗೂ ಅಮಿತಾಭ ಬಚ್ಚನ್ ಅವರ ನಿವಾಸಗಳ ಬಳಿಯೂ ಗುಂಡಿನ ದಾಳಿ ನಡೆದಿರುವ ಪ್ರಕರಣಗಳು ವರದಿಯಾಗಿವೆ. ಬಾಲಿವುಡ್ ನಟರನ್ನು ಗುರಿಯಾಗಿಸಿಕೊಂಡಿರುವ ಬೆದರಿಕೆ ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.