ಬೆಳಗಾವಿ, ಜುಲೈ 28: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಈ ಕುರಿತು ರಾಜ್ಯ ಸರ್ಕಾರ ಈಗಾಗಲೇ ತನ್ನ ಸ್ಪಷ್ಟ ನಿಲುವು ಪ್ರಕಟಿಸಿದೆ. ಹೀಗಿರುವಾಗ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕದ ಪರ ನಿರ್ಣಯ ಅಂಗೀಕರಿಸಲು ಯಾವುದೇ ಕಾನೂನು ಅಥವಾ ಆಡಳಿತಾತ್ಮಕ ಅಡೆತಡೆ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಂಗಳವಾರ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಕುರಿತು ರಾಜ್ಯ ಸರ್ಕಾರದ ನಿಲುವು ಅಚಲವಾಗಿದೆ. ಮಹಾಜನ್ ಆಯೋಗದ ವರದಿಯ ಶಿಫಾರಸುಗಳೇ ಅಂತಿಮ ಎಂಬ ನಿಲುವನ್ನು ಸರ್ಕಾರ ಹಲವು ಬಾರಿ ಪುನರುಚ್ಚರಿಸಿದ್ದು, ವಿಧಾನಸಭೆಯಲ್ಲಿಯೂ ಇದೇ ಅಭಿಪ್ರಾಯವನ್ನು ದಾಖಲಿಸಲಾಗಿದೆ. ಸರ್ಕಾರವೇ ಈ ನಿಲುವು ಹೊಂದಿರುವುದರಿಂದ ಬೆಳಗಾವಿ ಮಹಾನಗರ ಪಾಲಿಕೆಯು ರಾಜ್ಯದ ಪರ ನಿರ್ಣಯ ಅಂಗೀಕರಿಸಲು ಯಾವುದೇ ತೊಡಕು ಇಲ್ಲ ಎಂದು ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕದ ಪರ ನಿರ್ಣಯ ಅಂಗೀಕರಿಸುವಂತೆ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಮೇಯರ್ ಅವರು ಸರ್ಕಾರದ ಅಭಿಪ್ರಾಯವನ್ನು ಕೇಳಿದ್ದು, ಜೂನ್ 21ರಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬಂದಿದೆ. ನಂತರ ವಿಷಯವನ್ನು ಕಾನೂನು ಇಲಾಖೆಗೆ ಕಳುಹಿಸಲಾಗಿದ್ದು, ಜುಲೈ 21ರಂದು ಕಾನೂನು ಇಲಾಖೆ ತನ್ನ ಅಭಿಪ್ರಾಯವನ್ನು ನೀಡಿದೆ ಎಂದು ಸಚಿವರು ವಿವರಿಸಿದರು.
ಕಾನೂನು ಇಲಾಖೆಯ ಅಭಿಪ್ರಾಯವೂ ರಾಜ್ಯದ ನಿಲುವಿಗೆ ಪೂರಕವಾಗಿದ್ದು, ಪಾಲಿಕೆ ಕರ್ನಾಟಕದ ಪರ ನಿರ್ಣಯ ಅಂಗೀಕರಿಸಲು ಅನುಕೂಲಕರವಾಗಿದೆ. ಇದೇ ಅಭಿಪ್ರಾಯವನ್ನು ನಗರಾಭಿವೃದ್ಧಿ ಇಲಾಖೆ ಬೆಳಗಾವಿ ಮಹಾನಗರ ಪಾಲಿಕೆಗೆ ಅಧಿಕೃತವಾಗಿ ಕಳುಹಿಸಿಕೊಡಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ನದಿ ಮತ್ತು ಗಡಿ ಪ್ರದೇಶಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಅವರೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಮ್ಮ ಅಭಿಪ್ರಾಯ ಸಲ್ಲಿಸಿದ್ದು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸರ್ಕಾರದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಅಭಿಪ್ರಾಯಗಳನ್ನು ಪರಿಗಣಿಸಿ ಪಾಲಿಕೆ ರಾಜ್ಯದ ಪರ ನಿರ್ಣಯ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.
ಇದೇ ವೇಳೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ರಾಜ್ಯದ ಪರ ನಿರ್ಣಯ ಅಂಗೀಕರಿಸುವಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಕನ್ನಡ ಹೋರಾಟಗಾರರು ಸಚಿವರಿಗೆ ಮನವಿ ಸಲ್ಲಿಸಿದರು.
ಪಾಲಿಕೆಯು ನಾಡಿನ ಪರ ನಿರ್ಣಯ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಅಲ್ಲದೆ, ಕರ್ನಾಟಕದ ಪರ ನಿರ್ಣಯ ಅಂಗೀಕರಿಸುವ ತನಕ ಪಾಲಿಕೆಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದರು.
ಮನವಿ ಸಲ್ಲಿಸಿದವರಲ್ಲಿ ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ವಾಜೀದ ಹಿರೇಕೋಡಿ, ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ, ಶ್ರೀನಿವಾಸ ತಾಳೂಕರ, ವಾಜೀದ್ ಹಿರೇಕೋಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
