LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Editorial

ಬಾಲಮನಸ್ಸಿನಲ್ಲಿ ಹಿಂಸೆಯ ಬೀಜ

ಹರಿಯಾಣದ ಪಂಚಕುಲದ ಸರ್ಕಾರಿ ಶಾಲೆಯಲ್ಲಿ 8 ವರ್ಷದ ಬಾಲಕನೊಬ್ಬ 6 ವರ್ಷದ ಬಾಲಕಿಯ ಮೇಲೆ ನಡೆಸಿದ ಅಮಾನುಷ ಹಲ್ಲೆ ಇಡೀ ಸಮಾಜವನ್ನು ಆತ್ಮಾವಲೋಕನಕ್ಕೆ ಒಳಪಡಿಸುವಂತಿದೆ. ಆಟವಾಡುತ್ತ, ಕಲಿಯುತ್ತ, ಸ್ನೇಹ ಬೆಳೆಸಿಕೊಳ್ಳಬೇಕಾದ ವಯಸ್ಸಿನಲ್ಲಿ ಮಗುವೊಂದು ಮತ್ತೊಂದು ಮಗುವಿನ ಮೇಲೆ ಇಷ್ಟೊಂದು ಕ್ರೂರವಾಗಿ ವರ್ತಿಸಿರುವುದು ಆತಂಕಕಾರಿ ಬೆಳವಣಿಗೆ. ಬಾಲಕಿಯನ್ನು ಖಾಲಿ ತರಗತಿಗೆ ಕರೆದುಕೊಂಡು ಹೋಗಿ ಗುದ್ದಿ, ಒದ್ದು, ಭಾರವಾದ ವಸ್ತುಗಳಿಂದ ಹಲ್ಲೆ ನಡೆಸಿರುವ ಘಟನೆ ಮಕ್ಕಳ ಸುರಕ್ಷತೆ, ಅವರ ಮಾನಸಿಕ ಬೆಳವಣಿಗೆ ಹಾಗೂ ಶಾಲೆಗಳ ಜವಾಬ್ದಾರಿಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಹಲ್ಲೆಗೊಳಗಾದ ಬಾಲಕಿ ಸುಮಾರು 40 ಗಂಟೆಗಳ ಬಳಿಕ ಪ್ರಜ್ಞೆ ಮರಳಿ ಪಡೆದಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ. ಈ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯದ ಆರೋಪದಡಿ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ತನಿಖೆಗೆ ಸಮಿತಿಯನ್ನೂ ರಚಿಸಲಾಗಿದೆ. ಆದರೆ ಇಂತಹ ಘಟನೆ ನಡೆದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಅದು ಸಂಭವಿಸದಂತೆ ತಡೆಯುವ ವ್ಯವಸ್ಥೆ ರೂಪಿಸುವುದು ಮುಖ್ಯ.

ಈ ಪ್ರಕರಣದಲ್ಲಿ ಮತ್ತೊಂದು ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಹಲ್ಲೆ ನಡೆಸಿದ ಬಾಲಕನಿಗೆ ಪಬ್‌ಜಿ ಸೇರಿದಂತೆ ಹಿಂಸಾತ್ಮಕ ವಿಡಿಯೊ ಆಟಗಳನ್ನು ಆಡುವ ಅಭ್ಯಾಸವಿತ್ತು ಎಂದು ಸಂತ್ರಸ್ತೆಯ ಸಂಬಂಧಿಕರು ಆರೋಪಿಸಿದ್ದಾರೆ. ಬಾಲಕನ ತಂದೆಯೂ ಈ ಅಭ್ಯಾಸವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ಹಲ್ಲೆಗೆ ವಿಡಿಯೊ ಆಟಗಳೇ ಕಾರಣವೆಂದು ನಿರ್ಧರಿಸಲು ವೈಜ್ಞಾನಿಕ ಹಾಗೂ ತನಿಖಾತ್ಮಕ ಆಧಾರ ಅಗತ್ಯ. ಮಕ್ಕಳ ಮೇಲೆ ಹಿಂಸಾತ್ಮಕ ದೃಶ್ಯಗಳು, ಡಿಜಿಟಲ್ ಆಟಗಳು ಹಾಗೂ ನಿಯಂತ್ರಣವಿಲ್ಲದ ಮೊಬೈಲ್ ಬಳಕೆ ಬೀರುವ ಪರಿಣಾಮಗಳನ್ನು ನಿರ್ಲಕ್ಷಿಸುವಂತಿಲ್ಲ.

ಇಂದು ಮೊಬೈಲ್ ಫೋನ್ ಮಕ್ಕಳ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಅನೇಕ ಮನೆಗಳಲ್ಲಿ ಮಕ್ಕಳನ್ನು ಸುಮ್ಮನಿರಿಸಲು ಅಥವಾ ಊಟ ಮಾಡಿಸಲು ಮೊಬೈಲ್ ನೀಡುವುದು ಸಾಮಾನ್ಯವಾಗಿದೆ. ಮಕ್ಕಳು ಯಾವ ಆಟ ಆಡುತ್ತಿದ್ದಾರೆ, ಯಾವ ವಿಡಿಯೊ ನೋಡುತ್ತಿದ್ದಾರೆ, ಎಷ್ಟು ಸಮಯ ಪರದೆಯ ಮುಂದೆ ಕಳೆಯುತ್ತಿದ್ದಾರೆ ಎಂಬುದನ್ನು ಗಮನಿಸುವ ವ್ಯವಧಾನ ಪೋಷಕರಲ್ಲಿ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಮಕ್ಕಳ ಬಾಲ್ಯವು ಆಟದ ಮೈದಾನದಿಂದ ಮೊಬೈಲ್ ಪರದೆಗೆ ಸೀಮಿತವಾಗುತ್ತಿದೆ. ನೈಜ ಬದುಕಿನಲ್ಲಿ ಸ್ನೇಹ, ಸಹಕಾರ, ಸಹಾನುಭೂತಿ ಮತ್ತು ಸೋಲು ಗೆಲುವುಗಳನ್ನು ಸ್ವೀಕರಿಸುವ ಗುಣಗಳನ್ನು ಕಲಿಯಬೇಕಾದ ಮಕ್ಕಳು ಡಿಜಿಟಲ್ ಜಗತ್ತಿನಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ಬೆಳೆಯಲು ಕೇವಲ ಮೊಬೈಲ್ ಅಥವಾ ವಿಡಿಯೊ ಆಟಗಳೇ ಕಾರಣವಲ್ಲ. ಕುಟುಂಬದ ವಾತಾವರಣ, ಪೋಷಕರ ನಡುವಿನ ಸಂಬಂಧ, ಮಕ್ಕಳಿಗೆ ದೊರೆಯುವ ಪ್ರೀತಿ ಮತ್ತು ಗಮನ, ಶಾಲೆಯ ಪರಿಸರ, ಸಾಮಾಜಿಕ ಮಾಧ್ಯಮಗಳ ಪ್ರಭಾವ ಹಾಗೂ ಮಾನಸಿಕ ಒತ್ತಡ ಸೇರಿದಂತೆ ಹಲವು ಅಂಶಗಳು ಅವರ ವರ್ತನೆಯನ್ನು ರೂಪಿಸುತ್ತವೆ. ಮಕ್ಕಳು ಆಕ್ರಮಣಕಾರಿಯಾಗಿ ವರ್ತಿಸಿದಾಗ ಅದನ್ನು ಸಾಮಾನ್ಯ ತುಂಟಾಟವೆಂದು ನಿರ್ಲಕ್ಷಿಸುವುದು ಅಪಾಯಕಾರಿ. ಪದೇಪದೇ ಇತರರನ್ನು ಹೊಡೆಯುವುದು, ಬೆದರಿಸುವುದು, ಅವಮಾನಿಸುವುದು ಅಥವಾ ನೋವುಂಟುಮಾಡುವುದರಲ್ಲಿ ಸಂತೋಷಪಡುವಂತಹ ವರ್ತನೆ ಕಂಡುಬಂದರೆ ಪೋಷಕರು ಮತ್ತು ಶಿಕ್ಷಕರು ತಕ್ಷಣ ಗಮನಹರಿಸಬೇಕು.

ಪಂಚಕುಲ ಘಟನೆಯಲ್ಲಿ ಬಾಲಕಿಯ ಸುರಕ್ಷತೆಯ ವೈಫಲ್ಯವೂ ಸ್ಪಷ್ಟವಾಗಿ ಕಾಣುತ್ತದೆ. ಶಾಲೆಯ ಆವರಣದಲ್ಲಿ, ಅದೂ ತರಗತಿ ಕೊಠಡಿಯಲ್ಲಿಯೇ ಇಂತಹ ಹಲ್ಲೆ ನಡೆಯಲು ಅವಕಾಶವಾದದ್ದು ಹೇಗೆ? ಆ ಸಮಯದಲ್ಲಿ ಶಿಕ್ಷಕರು ಎಲ್ಲಿದ್ದರು? ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇರಲಿಲ್ಲವೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಶಾಲೆಯ ಜವಾಬ್ದಾರಿ ಕೇವಲ ಪಠ್ಯಪುಸ್ತಕದ ಪಾಠ ಕಲಿಸುವುದಕ್ಕೆ ಸೀಮಿತವಾಗಬಾರದು. ಪ್ರತಿಯೊಂದು ಮಗುವಿಗೂ ಸುರಕ್ಷಿತ, ಭಯಮುಕ್ತ ವಾತಾವರಣ ಕಲ್ಪಿಸುವುದು ಶಿಕ್ಷಣ ಸಂಸ್ಥೆಗಳ ಮೂಲಭೂತ ಕರ್ತವ್ಯವಾಗಿದೆ.

ಇನ್ನೊಂದು ಮುಖ್ಯ ಸಂಗತಿಯೆಂದರೆ, ಹಲ್ಲೆ ನಡೆಸಿದವನೂ ಕೇವಲ 8 ವರ್ಷದ ಬಾಲಕ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ವರ್ತನೆ ಏಕೆ ಕಾಣಿಸಿಕೊಂಡಿತು ಎಂಬುದನ್ನು ಮಕ್ಕಳ ಮನೋವೈದ್ಯರು ಹಾಗೂ ತಜ್ಞರು ಪರಿಶೀಲಿಸಬೇಕು. ಸಂತ್ರಸ್ತ ಬಾಲಕಿಗೆ ದೈಹಿಕ ಚಿಕಿತ್ಸೆಯ ಜೊತೆಗೆ ಮಾನಸಿಕ ಆಘಾತದಿಂದ ಹೊರಬರಲು ಅಗತ್ಯ ನೆರವು ನೀಡುವುದೂ ಅಷ್ಟೇ ಮುಖ್ಯ.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೆಂದರೆ ಕೇವಲ ಹೆಚ್ಚು ಅಂಕ ಗಳಿಸುವಂತೆ ಮಾಡುವುದಲ್ಲ. ಸಹಾನುಭೂತಿ, ಮಾನವೀಯತೆ, ಸಹನೆ, ಪರಸ್ಪರ ಗೌರವ ಮತ್ತು ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಗುಣಗಳನ್ನು ಬೆಳೆಸುವುದೂ ಶಿಕ್ಷಣದ ಭಾಗವಾಗಬೇಕು. ಶಾಲೆಗಳಲ್ಲಿ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಪೋಷಕರು ಮಕ್ಕಳೊಂದಿಗೆ ಪ್ರತಿದಿನ ಸಮಯ ಕಳೆಯಬೇಕು. ಅವರ ಮಾತುಗಳನ್ನು ಆಲಿಸಬೇಕು. ಮೊಬೈಲ್ ಬಳಕೆಗೆ ವಯಸ್ಸಿಗೆ ತಕ್ಕ ಮಿತಿಗಳನ್ನು ನಿಗದಿಪಡಿಸಿ, ಹೊರಾಂಗಣ ಆಟ, ಓದು ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು.

ಪಂಚಕುಲದ ಘಟನೆ ಕೇವಲ ಒಂದು ಶಾಲೆಯ ಅಥವಾ ಎರಡು ಮಕ್ಕಳ ನಡುವಿನ ಪ್ರಕರಣವಲ್ಲ. ಮಕ್ಕಳ ಸುರಕ್ಷತೆ ಮತ್ತು ಅವರ ಮನಸ್ಸಿನ ಬೆಳವಣಿಗೆಯ ಬಗ್ಗೆ ಸಮಾಜ ಎಷ್ಟು ಜಾಗರೂಕವಾಗಿದೆ ಎಂಬುದನ್ನು ಪ್ರಶ್ನಿಸುವ ಘಟನೆ. ತಂತ್ರಜ್ಞಾನವನ್ನು ಮಕ್ಕಳಿಂದ ಸಂಪೂರ್ಣ ದೂರವಿಡುವುದು ಸಾಧ್ಯವೂ ಅಲ್ಲ, ಅಗತ್ಯವೂ ಅಲ್ಲ. ಆದರೆ ಅದರ ಬಳಕೆಗೆ ವಿವೇಚನೆಯ ನಿಯಂತ್ರಣ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಪ್ರೀತಿ, ಮಾರ್ಗದರ್ಶನ ಮತ್ತು ಸುರಕ್ಷಿತ ವಾತಾವರಣ ಬೇಕು.

ಮಕ್ಕಳ ಕೈಗೆ ಮೊಬೈಲ್ ಕೊಡುವುದು ಸುಲಭ. ಆದರೆ ಅವರ ಮನಸ್ಸಿನಲ್ಲಿ ಮಾನವೀಯತೆಯನ್ನು ಬೆಳೆಸುವುದು ಪೋಷಕರು, ಶಿಕ್ಷಕರು ಮತ್ತು ಸಮಾಜದ ಬಹುದೊಡ್ಡ ಜವಾಬ್ದಾರಿ. ಬಾಲಮನಸ್ಸಿನಲ್ಲಿ ಹಿಂಸೆಯ ಬೀಜ ಮೊಳೆಯದಂತೆ ನೋಡಿಕೊಳ್ಳುವುದೇ ಇಂದಿನ ತುರ್ತು ಅಗತ್ಯ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುಪಿಯಲ್ಲಿ ಇಲಿ ಕೊಂದ ಮೂವರ ಬಂಧನ, ಮತ್ತೊಬ್ಬನಿಗಾಗಿ ಶೋಧಯಾರು ದೇಶದ್ರೋಹಿ? ಬಹಿರಂಗ ಚರ್ಚೆಗೆ ಬನ್ನಿ: ಮೋದಿಗೆ ರಾಹುಲ್ ಸವಾಲುಪಾಲಿಕೆ ಕಚೇರಿಗಳಲ್ಲಿ ಏಜೆಂಟರ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿಚುನಾವಣಾ ಆಯೋಗಕ್ಕೆ ಬೆಂಬಲಿಸಿ ಬಿಜೆಪಿ ಪ್ರತಿಭಟನೆ : ರಾಹುಲ್ ಗಾಂಧಿ ವಿರುದ್ಧ ವಿಜಯೇಂದ್ರ ವಾಗ್ದಾಳಿನಿಷೇಧದ ನಡುವೆಯೂ ಪಟಾಕಿ ಮಾರಾಟ: ಸುಪ್ರೀಂ ಕೋರ್ಟ ಅಸಮಾಧಾನಬಾಲಮನಸ್ಸಿನಲ್ಲಿ ಹಿಂಸೆಯ ಬೀಜ6 ವರ್ಷದ ಬಾಲಕಿ ಮೇಲೆ ಭೀಕರ ಹಲ್ಲೆ: ವಿಡಿಯೊ ಗೇಮ್ ಚಟವೇ ಕಾರಣವಿದ್ಯಾರ್ಥಿನಿ ಮೇಲೆ ದಾಳಿ: ಆರೋಪಿ ಹೇಮಂತ್‌ನ ಬಲಗಾಲು ಕತ್ತರಿಸಿದ ವೈದ್ಯರುಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತೇವೆ: ನಾರಾಯಣಸ್ವಾಮಿಬರ: 22,400 ಕೋಟಿ ರೂ. ನೀಡಲು ಕೇಂದ್ರಕ್ಕೆ ಆಗ್ರಹ