LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ವಿಕಸಿತ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ನಿರ್ಣಾಯಕ: ಮೋದಿ

Advertisement

ಮೈಸೂರು, ಆ. 1: ವಿಕಸಿತ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಯುವಶಕ್ತಿಯ ಸಾಮರ್ಥ್ಯವೇ ದೇಶದ ಭವಿಷ್ಯವನ್ನು ರೂಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದಲ್ಲಿ ನಿರ್ಮಿಸಲಾದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಮತ್ತು ವಿವೇಕ ಸ್ಮಾರಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಭಾಷಣದ ಆರಂಭದಲ್ಲೇ ಕನ್ನಡದಲ್ಲಿ "ಎಲ್ಲರಿಗೂ ನನ್ನ ನಮಸ್ಕಾರಗಳು" ಎಂದು ಶುಭಾಶಯ ಕೋರಿದರು. "ಪ್ರಥಮವಾಗಿ ಚಾಮುಂಡೇಶ್ವರಿ ದೇವಿಗೆ ಪ್ರಣಾಮ ಸಲ್ಲಿಸುತ್ತೇನೆ" ಎಂದು ಹೇಳುವ ಮೂಲಕ ತಮ್ಮ ಭಾಷಣ ಆರಂಭಿಸಿದರು.

ಮೈಸೂರು ಭಾರತದ ಶ್ರೇಷ್ಠ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದ್ದು, ದಸರಾ, ಅರಮನೆ, ಸಂಗೀತ, ಸಾಹಿತ್ಯ ಹಾಗೂ ಧಾರ್ಮಿಕ ಪರಂಪರೆಯ ಮೂಲಕ ದೇಶದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಪ್ರಧಾನಿ ಹೇಳಿದರು. ಸ್ವಾಮಿ ವಿವೇಕಾನಂದರ ಜೀವನದಲ್ಲಿಯೂ ಮೈಸೂರಿನ ಪಾತ್ರ ಮಹತ್ವದ್ದಾಗಿದ್ದು, ಯುವ ಸನ್ಯಾಸಿಯಾಗಿದ್ದಾಗ ಈ ನೆಲವೇ ಅವರಿಗೆ ಹೊಸ ಪ್ರೇರಣೆಯನ್ನು ನೀಡಿತ್ತು ಎಂದು ಸ್ಮರಿಸಿದರು.

ಸ್ವಾಮಿ ವಿವೇಕಾನಂದರು ವಿಶ್ವಪರ್ಯಟನೆ ವೇಳೆ ವಿದೇಶಗಳ ಯುವಕರು ತಮ್ಮ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದನ್ನು ಕಂಡಿದ್ದರು. ಆಗ ಭಾರತ ಗುಲಾಮಗಿರಿಯಲ್ಲಿತ್ತು. ಆದರೆ ಇಂದು ಭಾರತದ ಯುವಕರು ತಮ್ಮ ಪ್ರತಿಭೆ, ಪರಿಶ್ರಮ ಮತ್ತು ಹೊಸ ಆಲೋಚನೆಗಳ ಮೂಲಕ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಅವರು ಹೇಳಿದರು.

ಕಳೆದ 12 ವರ್ಷಗಳಲ್ಲಿ ಭಾರತ ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಪ್ರಧಾನಿ ವಿವರಿಸಿದರು. ಮೊಬೈಲ್ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನಕ್ಕೇರಿದ್ದು, ಸ್ಟಾರ್ಟ್‌ಅಪ್ ಪರಿಸರದಲ್ಲಿ ಜಾಗತಿಕ ಮುಂಚೂಣಿಯ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು. ದೇಶದಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳ ಉತ್ಪಾದನೆ ಆರಂಭವಾಗಿದ್ದು, ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರಗಳಲ್ಲಿ ಭಾರತೀಯ ಯುವಕರು ಹೊಸ ಇತಿಹಾಸ ನಿರ್ಮಿಸುತ್ತಿದ್ದಾರೆ ಎಂದು ಹೇಳಿದರು.

ಡಿಜಿಟಲ್ ಆರ್ಥಿಕತೆಯ ಬೆಳವಣಿಗೆ ಹಾಗೂ ‘ಮೇಕ್ ಇನ್ ಇಂಡಿಯಾ’ ಸೇರಿದಂತೆ ಹಲವು ರಾಷ್ಟ್ರೀಯ ಯೋಜನೆಗಳ ಯಶಸ್ಸಿನ ಹಿಂದೆ ಯುವಜನರ ಪರಿಶ್ರಮವೇ ಪ್ರಮುಖ ಶಕ್ತಿಯಾಗಿದೆ ಎಂದು ಅವರು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಕಳೆದ 12 ವರ್ಷಗಳಲ್ಲಿ 650ಕ್ಕೂ ಹೆಚ್ಚು ಹೊಸ ವಿಶ್ವವಿದ್ಯಾಲಯಗಳು, 14 ಸಾವಿರಕ್ಕೂ ಹೆಚ್ಚು ಕಾಲೇಜುಗಳು ಹಾಗೂ 4 ಸಾವಿರಕ್ಕೂ ಹೆಚ್ಚು ಕೈಗಾರಿಕಾ ತರಬೇತಿ ಸಂಸ್ಥೆಗಳು ಆರಂಭಗೊಂಡಿವೆ ಎಂದು ಪ್ರಧಾನಿ ತಿಳಿಸಿದರು. ಇದೇ ಅವಧಿಯಲ್ಲಿ 9 ಭಾರತೀಯ ನಿರ್ವಹಣಾ ಸಂಸ್ಥೆಗಳು ಹಾಗೂ 7 ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಸ್ಥಾಪನೆಯಾಗಿವೆ ಎಂದರು.

ದೇಶದಲ್ಲಿ ವಾರ್ಷಿಕ ವೈದ್ಯಕೀಯ ಪದವಿ ಸೀಟುಗಳ ಸಂಖ್ಯೆ 1.40 ಲಕ್ಷಕ್ಕೆ ಏರಿಕೆಯಾಗಿದ್ದು, ವೈದ್ಯಕೀಯ ಕಾಲೇಜುಗಳ ಸಂಖ್ಯೆ 838ಕ್ಕೆ ತಲುಪಿದೆ. ದೇಶಾದ್ಯಂತ 14 ಸಾವಿರಕ್ಕೂ ಹೆಚ್ಚು ಪಿಎಂಶ್ರೀ ಶಾಲೆಗಳು ಆರಂಭವಾಗಿದ್ದು, ಎಂಜಿನಿಯರಿಂಗ್ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೂ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಕ್ರೀಡೆಗೆ ಆದ್ಯತೆ ನೀಡುವ ರಾಷ್ಟ್ರವೇ ಬಲಿಷ್ಠ ಯುವಶಕ್ತಿಯನ್ನು ರೂಪಿಸುತ್ತದೆ ಎಂದು ಹೇಳಿದ ಪ್ರಧಾನಿ, ‘ಖೇಲೋ ಇಂಡಿಯಾ’ ಯೋಜನೆಯ ಮೂಲಕ ಗ್ರಾಮೀಣ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಭಾರತೀಯ ಯುವಕರು ಮತ್ತು ಯುವತಿಯರು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಜಲ ಸಂರಕ್ಷಣೆಯನ್ನು ಪ್ರತಿಯೊಬ್ಬರೂ ಜೀವನದ ಸಂಕಲ್ಪವಾಗಿಸಿಕೊಳ್ಳಬೇಕು. ಪ್ರಕೃತಿಯ ಸಂಪತ್ತನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪ್ರಧಾನಿ ಕರೆ ನೀಡಿದರು.

ಕೇಂದ್ರದ ಸಹಕಾರ ಅಗತ್ಯ: ಡಿ.ಕೆ. ಶಿವಕುಮಾರ

ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಯುವಶಕ್ತಿ, ಯುವ ಚಿಂತನೆ ಹಾಗೂ ಯುವ ಆಲೋಚನೆಗಳೇ ಸ್ವಾಮಿ ವಿವೇಕಾನಂದರ ಸಂದೇಶವಾಗಿದ್ದು, ರಾಜ್ಯ ಸರ್ಕಾರವೂ ಇದೇ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

'ಯುವ ಯುಗ–ನವ ಯುಗ' ನಮ್ಮ ಸರ್ಕಾರದ ಧ್ಯೇಯವಾಗಿದ್ದು, ಪಂಚಾಯಿತಿ ಮಟ್ಟದವರೆಗೆ ಯುವಕ ಸಂಘಗಳನ್ನು ಬಲಪಡಿಸುವ ಯೋಜನೆ ರೂಪಿಸಲಾಗಿದೆ. ಶ್ರೀರಾಮಕೃಷ್ಣ ಆಶ್ರಮದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದ್ದು, ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬೆಂಬಲ ಅಗತ್ಯವಾಗಿದೆ ಎಂದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದರು.

ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಾತನಾಡಿ, ವಿವೇಕ ಸ್ಮಾರಕವು ಯುವಕರಿಗೆ ಭಾರತೀಯ ಜ್ಞಾನ ಪರಂಪರೆಯನ್ನು ಪರಿಚಯಿಸುವ ಅಲ್ಪಾವಧಿ ತರಬೇತಿ, ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು ಹಾಗೂ ಸ್ವಾಮಿ ವಿವೇಕಾನಂದರ ತತ್ವ-ಆದರ್ಶಗಳ ಪ್ರಸಾರದ ಪ್ರಮುಖ ಕೇಂದ್ರವಾಗಲಿದೆ ಎಂದು ತಿಳಿಸಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಕಸಿತ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ನಿರ್ಣಾಯಕ: ಮೋದಿಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿಬಾಕ್ಸಿಂಗ್‌ನಲ್ಲಿ ಭಾರತದ ಡಬಲ್ ಚಿನ್ನದ ಸಂಭ್ರಮ: ಪ್ರೀತಿ ಪವಾರ, ಜೈಸ್ಮಿನ್‌ಗೆ ಚಿನ್ನಪರೀಕ್ಷೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತನೀವೇ ಕ್ಷಮೆ ಕೇಳಿ, ನಿಮ್ಮ ಬೆಂಬಲಿಗರ ಭಾಷೆಯನ್ನೂ ಖಂಡಿಸಿ : ಪ್ರಧಾನಿ ವಿಡಿಯೊಗೆ ಉದ್ಧವ್ ಠಾಕ್ರೆ ತಿರುಗೇಟುಇ20 ಇಂಧನ ನೀತಿ ವಿರೋಧಕ್ಕೆ ನನ್ನನ್ನು ಗೃಹಬಂಧನದಲ್ಲಿಟ್ಟಿದ್ದಾರೆ : ಪೂನಾವಾಲಾತಾನು ಮಾಡಿದರೆ ರಾಜತಂತ್ರ, ಬೇರೆಯವರು ಮಾಡಿದರೆ ಅಪರಾಧ : ಮೋದಿ ವಿರುದ್ಧ ಬಿ.ಕೆ.ಹರಿಪ್ರಸಾದ ವಾಗ್ದಾಳಿ'ಗೋ ಬ್ಯಾಕ್ ಮೋದಿ' ಚಳುವಳಿ; ದಸಂಸ ಮುಖಂಡರು, ಕಾರ್ಯಕರ್ತರು ಪೊಲೀಸ್ ವಶಕ್ಕೆಮತ್ತೆ ಎಥೆನಾಲ್ ಮಿಶ್ರಣ, ಪೆಟ್ರೋಲ್ ದರ ಹೆಚ್ಚಳ ಸಮರ್ಥಿಸಿಕೊಂಡ ಕೇಂದ್ರಆನ್‌ಲೈನ್ ರಿಫಂಡ್ ನೆಪದಲ್ಲಿ ಸೈಬರ್ ವಂಚನೆ: ₹1 ಲಕ್ಷ ಫ್ರೀಜ್ ಮಾಡಿದ ಸಿಇಎನ್ ಪೊಲೀಸರು