ಹೊಸದಿಲ್ಲಿ, ಜೂ. 5 : ಗ್ರೇಟ್ ನಿಕೋಬಾರ್ ಅಭಿವೃದ್ಧಿ ಯೋಜನೆ ರಾಷ್ಟ್ರೀಯ ಭದ್ರತೆ ಅಥವಾ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಯಲ್ಲ. ಭಾರತದ ಅಮೂಲ್ಯ ಪರಿಸರ ಸಂಪತ್ತನ್ನು ನಾಶಪಡಿಸಿ ಖಾಸಗಿ ಹಿತಾಸಕ್ತಿಗಳಿಗೆ ಅವಕಾಶ ಕಲ್ಪಿಸುವ ಯೋಜನೆಯಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ವಿಶ್ವ ಪರಿಸರ ದಿನದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಅವರು, ಇತ್ತೀಚೆಗೆ ಗ್ರೇಟ್ ನಿಕೋಬಾರ್ ದ್ವೀಪಕ್ಕೆ ಭೇಟಿ ನೀಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.
ಭಾರತದ ದಕ್ಷಿಣ ತುದಿಯಲ್ಲಿರುವ ಇಂದಿರಾ ಪಾಯಿಂಟ್‌ಗೆ ಭೇಟಿ ನೀಡಿದ್ದೆ. ಶತಮಾನಗಳಿಂದ ಬೆಳೆದಿರುವ ಮರಗಳ ನಡುವೆ ಸಂಚರಿಸಿದ್ದೆ. ಭೂಮಿಯ ಮೇಲಿನ ಅತ್ಯಂತ ಸಮೃದ್ಧ ಜೀವವೈವಿಧ್ಯ ಹೊಂದಿರುವ ಪರಿಸರ ವ್ಯವಸ್ಥೆಗಳಲ್ಲಿ ಒಂದಾದ ಹವಳದ ದಿಬ್ಬಗಳನ್ನು ವೀಕ್ಷಿಸಿದ್ದೆ. ಅಲ್ಲಿನ ನಿವಾಸಿಗಳು ಹಾಗೂ ಬುಡಕಟ್ಟು ಸಮುದಾಯಗಳೊಂದಿಗೆ ಮಾತುಕತೆ ನಡೆಸಿದ್ದೆ ಎಂದು ಅವರು ತಿಳಿಸಿದ್ದಾರೆ.
ಅರಣ್ಯ ಹಕ್ಕುಗಳ ಕಾಯ್ದೆಯನ್ನು ಉಲ್ಲಂಘಿಸಿ ಬುಡಕಟ್ಟು ಸಮುದಾಯಗಳ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಅಲ್ಲದೆ, ಸರ್ಕಾರದಿಂದ ಪುನರ್ವಸತಿ ಪಡೆದಿರುವ ಹಲವು ಕುಟುಂಬಗಳು, ಅದರಲ್ಲೂ ಮಾಜಿ ಸೈನಿಕರು, ಸಮರ್ಪಕ ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಗ್ರೇಟ್ ನಿಕೋಬಾರ್ ಯೋಜನೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ ಎಂಬ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಾದವನ್ನು ತಳ್ಳಿಹಾಕಿರುವ ರಾಹುಲ್ ಗಾಂಧಿ, ಐಎನ್‌ಎಸ್ ಬಾಜ್ ನೌಕಾನೆಲೆಯ ವಿಸ್ತರಣೆಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ. ಕಳೆದ ಐದು ವರ್ಷಗಳಿಂದ ನೌಕಾಪಡೆಯು ವಿಸ್ತರಣೆಗೆ ಮನವಿ ಮಾಡುತ್ತಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದ್ದಾರೆ.
ಯೋಜನೆಯು ಸರಕು ಸಾಗಣೆ ಬಂದರಿಗೆ ಸಂಬಂಧಿಸಿದೆ ಎಂಬ ವಾದವನ್ನೂ ಪ್ರಶ್ನಿಸಿರುವ ಅವರು, ಕೇರಳದಲ್ಲಿ ಭಾರತ ಈಗಾಗಲೇ ಸರಕು ಸಾಗಣೆ ಬಂದರನ್ನು ನಿರ್ಮಿಸುತ್ತಿರುವುದರಿಂದ ಗ್ರೇಟ್ ನಿಕೋಬಾರ್ ಯೋಜನೆಯ ಉದ್ದೇಶ ಅದು ಅಲ್ಲ ಎಂದು ತಿಳಿಸಿದ್ದಾರೆ.
ಈ ಯೋಜನೆಯ ಪರಿಣಾಮವಾಗಿ ಸುಮಾರು 1.5 ಕೋಟಿ ಮರಗಳನ್ನು ಕಡಿದು ಹಾಕಲಾಗುತ್ತಿದೆ. ಅಧಿಕೃತ ನಕ್ಷೆಗಳಿಂದ ಹವಳದ ದಿಬ್ಬಗಳ ಉಲ್ಲೇಖವನ್ನೇ ತೆಗೆದುಹಾಕಲಾಗಿದೆ. ಸೈನಿಕರು ಹಾಗೂ ಬುಡಕಟ್ಟು ಸಮುದಾಯಗಳನ್ನು ಸ್ಥಳಾಂತರಿಸಲಾಗುತ್ತಿದೆ. ದೇಶದ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಹೋಟೆಲ್‌ಗಳು ಮತ್ತು ಜೂಜುಕೇಂದ್ರಗಳ ನಿರ್ಮಾಣಕ್ಕೆ ಒಬ್ಬ ಉದ್ಯಮಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಎಷ್ಟೇ ಆರ್ಥಿಕ ಲಾಭ ದೊರೆತರೂ ಮರಳಿ ಪಡೆಯಲಾಗದ ಪ್ರಕೃತಿ ಸಂಪತ್ತನ್ನು ನಾಶ ಮಾಡುವುದು ಸರಿಯಲ್ಲ ಎಂಬ ಅರಿವು ಇಂದಿನ ಯುವಜನರಲ್ಲಿ ಮೂಡಿದೆ. ಪರಿಸರ ಸಮತೋಲನ ಕಾಪಾಡುವ ಅಭಿವೃದ್ಧಿಯನ್ನು ನಾನು ಬೆಂಬಲಿಸುತ್ತೇನೆ. ಗ್ರೇಟ್ ನಿಕೋಬಾರ್ ದ್ವೀಪಗಳು ಜಗತ್ತಿನ ಅತ್ಯಂತ ಅಸಾಧಾರಣ ಸುಸ್ಥಿರ ಪ್ರವಾಸಿ ತಾಣಗಳಲ್ಲಿ ಒಂದಾಗಿ ಬೆಳೆಯುವ ಸಾಮರ್ಥ್ಯ ಹೊಂದಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.